ಮಂಡ್ಯ; ಜೆಡಿಎಸ್ ವರಿಷ್ಟ ದೇವೇಗೌಡರ ಹಿರಿಯ ಪುತ್ರ, ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ಅವರ ಪವರ್ ಎಂತಹದ್ದೂ ಅನ್ನೋದು ಇಡೀ ರಾಜ್ಯಕ್ಕೆ ಗೊತ್ತಾಗಿದೆ. ಎಲ್ಲಾ ಇಲಾಖೆಗಳಲ್ಲೂ ಹೋಲ್ಡ್ ಇರುವ ರಾಜಕಾರಣಿ ಅದು ರೇವಣ್ಣ ಅನ್ನೋ ಮಾತಿದೆ. ಆದರೆ ರೇವಣ್ಣ ಅವರ ಪರಿಸ್ಥಿತಿ ಇಂದು ಯಾರಿಗೂ ಬೇಡ ಅನ್ನೋ ಹಾಗಾಗಿದೆ. ಮಗ ಮಾಡಿದ ತಪ್ಪಿಗೆ ರೇವಣ್ಣ ಜೈಲು ಸೇರಬೇಕಾಯ್ತು. ಸ್ಟ್ರಾಂಗ್ ಲೇಡಿ ಅಂತಾ ಗುರುತಿಸಿಕೊಂಡಿದ್ದ ಭವಾನಿ ರೇವಣ್ಣ ಫುಲ್ ಮಂಕಾಗುವಂತಾಯಿತು. ಇಬ್ಬರೂ ಪುತ್ರ ರತ್ನಂದಿರು ತಾವು ಮಾಡಿದ ಮಹಾನ್ ಸಾಧನೆಯಿಂದಾಗಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.ಹೀಗೆ ಸಾಲು ಸಾಲು ಆರೋಪಗಳು, ಕೇಸ್ ಗಳಿಂದ ರೇವಣ್ಣ ಕುಟುಂಬ ಸಂಪೂರ್ಣವಾಗಿ ಕುಗ್ಗಿ ಹೋಗಿದೆ. ಮೊಮ್ಮಕ್ಕಳು ಮಾಡಿದ ಕೆಲಸಕ್ಕೆ ದೇವೇಗೌಡರು ಇವತ್ತು ಮನೆಯಿಂದ ಹೊರಗೆ ಬರೋಕೆ ಹಿಂದೇಟು ಹಾಕುವ ಪರಿಸ್ಥಿತಿ ಎದುರಾಗಿದೆ. ಇಡೀ ಜೆಡಿಎಸ್ ನ್ನು ಜನ ಹೀಯಾಳಿಸುವಂತಾಗಿದೆ. ಹೀಗಿರುವಾಗಲೇ ಮಂಡ್ಯದಲ್ಲಿ ಪಕ್ಷಕ್ಕಾಗುವ ಮುಜುಗರ ತಪ್ಪಿಸಲು ಜೆಡಿಎಸ್ ಮುಖಂಡರು ಫ್ಲೆಕ್ಸ್ ಗಳಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಫೋಟೋವನ್ನು ಮಾಯವಾಗಿಸಿ ಬಿಚ್ಚಿದ್ದಾರೆ,
ಯೆಸ್… ಕುಮಾರಸ್ವಾಮಿ ಕೇಂದ್ರ ಸಚಿವರಾದ ಬಳಿಕ ಅವರಿಗೆ ಅಭಿನಂದನೆ ತಿಳಿಸುವ ಫ್ಲೆಕ್ಸ್ ಗಳನ್ನು ಮಂಡ್ಯದ ವಿವಿಧೆಡೆ ಜೆಡಿಎಸ್ ಹಾಕಿದೆ. ಆದರೆ ಆ ಫ್ಲೆಕ್ಸ್ ಗಳಲ್ಲಿ ರೇವಣ್ಣ ಅವರ ಫೋಟೋವೇ ಮಾಯವಾಗಿದೆ. ಮುಜುಗರದಿಂದ ಪಾರಾಗಲು ರೇವಣ್ಣ ದಳಪತಿಗಳು ರೇವಣ್ಣ ಅವರ ಫೋಟೋವನ್ನು ದೂರವಿಟ್ಟಿದ್ದಾರೆ. ಇನ್ನು ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಬೃಹತ್ ಫ್ಲೆಕ್ಸ್ ಅಳವಡಿಕೆ ಮಾಡಲಾಗಿದೆ. ಆದರೆ ಎಲ್ಲೂ ಕೂಡ ರೇವಣ್ಣ ಅವರ ಫೋಟೋ ಹಾಕಿಲ್ಲ. ಫ್ಲೆಕ್ಸ್ ಗಳಲ್ಲಿ ಜೆಡಿಎಸ್ ಮುಖಂಡರು ಜೊತೆಗೆ ಬಿಜೆಪಿ ನಾಯಕರ ಫೋಟೋ ಬಳಕೆ ಮಾಡಲಾಗಿದೆ. ಇಷ್ಟಿದ್ದರೂ ರೇವಣ್ಣ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ.
ಯಡಿಯೂರಪ್ಪ, ವಿಜಯೇಂದ್ರ, ಆರ್.ಅಶೋಕ್ ಸೇರಿದಂತೆ ಹಲವು ಬಿಜೆಪಿ ಮುಖಂಡರ ಫೋಟೋ ಹಾಕಲಾಗಿದೆ.ಅಲ್ಲದೇ ಮಾಜಿ ಸಂಸದೆ ಸುಮಲತಾ, ಮಾಜಿ ಸಚಿವ ಹೆಚ್.ವಿಶ್ವನಾಥ್ ಫೋಟೋಗಳೂ ಕೂಡ ಪ್ಲೆಕ್ಸ್ ನಲ್ಲಿ ಸ್ಥಾನ ಪಡೆದಿವೆ. ಆದರೆ ರೇವಣ್ಣ ಫೋಟೋವನ್ನು ಮಂಡ್ಯ ಜೆಡಿಎಸ್ ನಾಯಕರು ಕೈಬಿಟ್ಟಿದ್ದಾರೆ. ರೇವಣ್ಣ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡದಿದ್ರೂ ದಳಪತಿಗಳು ಅವರಿಂದ ಅಂತರವನ್ನು ಕಾಯ್ದುಕೊಂಡಿರೋದು ಹಲವು ಅನುಮಾನಗಳನ್ನು ಮೂಡಿಸಿದೆ.