ಗದಗ: ರಾಜ್ಯ ಸರ್ಕಾರ ಕಾಳ ಸಂತೆಯಲ್ಲಿ ಎಲ್ ಪಿಜಿ ಮಾರಾಟವಾಗದಂತೆ ನೋಡಿಕೊಳ್ಳಲಿ ಎಂದು ಸಂಸದ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ.
ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಗೃಹ ಬಳಕೆಯ ಎಲ್ ಪಿಜಿ ಸೆಲಿಂಡರ್ ಗೆ ಯಾವುದೇ ಸಮಸ್ಯೆ ಇಲ್ಲ, ಈ ಬಗ್ಗೆ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್ ಮುನಿಯಪ್ಪ ಅವರೇ ಹೇಳಿದ್ದಾರೆ. ವಾಣಿಜ್ಯ ಸೆಲಿಂಡರ್ ಗಳಿಗೆ ಸ್ವಲ್ಪ ಸಮಸ್ಯೆಯಾಗಿದೆ. ಈ ಬಗ್ಗೆ ಆತಂಕಕ್ಕೊಳಗಾಗಬಾರದು. ಈಗಾಗಲೇ ಎಲ್ ಪಿಜಿ ಹೊಂದಿರುವ ಐದಾರು ಹಡಗುಗಳು ಭಾರತದ ಕಡೆಗೆ ಬರುತ್ತಿವೆ. ಅವುಗಳನ್ನು ಸರಿಯಾಗಿ ವಿತರಣೆ ಮಾಡಿ, ಕಳ್ಳ ಮಾರುಕಟ್ಟೆಯಲ್ಲಿ ಮಾರಾಟವಾಗದಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು. ಎಂಟತ್ತು ದಿನದಲ್ಲಿ ಸಮಸ್ಯೆ ಬಗೆ ಹರಿಯಲಿದೆ ಎಂದು ಹೇಳಿದರು.
ಅಮೇರಿಕಾ ಇಸ್ರೇಲ್ ಇರಾನ್ ಯದ್ದದಿಂದ ಉಂಟಾದ ಜಾಗತಿಕ ಸಮಸ್ಯೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಮರ್ಥವಾಗಿ ನಿಭಾಯಿಸಿರುವುದರಿಂದ ದೇಶದಲ್ಲಿ ಸಾಕಷ್ಟು ಪೆಟ್ರೋಲ್ ಡಿಸೇಲ್ ಸಿಗುವಂತಹ ವ್ಯವಸ್ಥೆಯಾಗಿದೆ. ಕಾಂಗ್ರೆಸ್ ನವರು ಹತಾಶರಾಗಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ನಾವು ಎಲ್ ಪಿಜಿ ಗ್ಯಾಸ್ ಗೆ ಗಲ್ಪ್ ದೇಶಗಳನ್ನು ಅವಲಂಬಿಸಬೇಕಿದೆ. ಯುದ್ದದ ವಾತಾವರಣ ಇರುವುದರಿಂದ ಅಲ್ಲಿಂದ ಗ್ಯಾಸ್ ತರಬೇಕಿದೆ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮುತ್ಸದ್ದಿತನದಿಂದ ಮತ್ತು ಭಾರತ ಸರ್ಕಾರದ ರಾಜತಾಂತ್ರಿಕ ನೈಪುಣ್ಯತೆಯಿಂದಾಗಿ ಇರಾನ್ ಈಗಾಗಲೇ ಪೆಟ್ರೊಲ್ ಡಿಸೇಲ್ ತೈಲ ಸಾಗಾಟಕ್ಕೆ ಅನುಮತಿ ನೀಡಿದೆ. ಗ್ಯಾಸ್ ಕೂಡ ಈಗಾಗಲೇ ಬರುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ನವರು ಇತಿಹಾಸ ತಿರುಗಿ ನೋಡಬೇಕು. ಸದ್ದಾಂ ಹುಸೇನ್ ಇದ್ದಾಗ ಇರಾಕ್ ಯುದ್ದದ ಸಂದರ್ಭದಲ್ಲಿ ಅವರು ಅಧಿಕಾರದಲ್ಲಿದ್ದರು. ಆಗ ಕೇಂದ್ರ ಸಚಿವರಾಗಿದ್ದ ಎ.ಕೆ. ಆ್ಯಂಟೋನಿ ರಾತ್ರಿ ಎಂಟು ಗಂಟೆಯ ನಂತರ ಯಾವುದೇ ಪೆಟ್ರೊಲ್ ತೆರೆಯಬಾರದು ಎಂದು ಆದೇಶ ಮಾಡಿದ್ದರು. ಆಗ ಪೆಟ್ರೋಲ್ ಬಂಕ್ ಗಳ ಮುಂದೆ ಕಿಲೋ ಮೀಟರ್ ಗಟ್ಟಲೇ ಕ್ಯೂ ಇರುತ್ತಿತ್ತು. ಈಗ ಯುದ್ದ ಆರಂಭವಾಗಿ ಹದಿನೈದು ದಿನ ಆಯಿತು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಕಾರಣ ಅಂತಹ ಪರಿಸ್ಥಿತಿ ಇಲ್ಲ. ಅಲ್ಲದೇ ಶೇ 25% ಆಂತರಿಕ ಉತ್ಪಾದನೆಯನ್ನು ಹೆಚ್ಚಳ ಮಾಡಿದ್ದಾರೆ. ಮೋದಿ ಸರ್ಕಾರ ಇರುವುದರಿಂದ ಈ ಜಾಗತಿಕ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿರುವುದರಿಂದ ಸಾಕಷ್ಟು ಪೆಟ್ರೋಲ್ ಡಿಸೇಲ್ ಸಿಗುವಂತಹ ವ್ಯವಸ್ಥೆಯಾಗಿದೆ. ಕೇವಲ ವಾಣಿಜ್ಯ ಎಲ್‌ಪಿಜಿ ಬಿಟ್ಟರೆ ಬೇರೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಂಡಿದ್ದಾರೆ. ಇದೆಲ್ಲವೂ ಗೊತ್ತಿದ್ದು ಕೂಡ ಕಾಂಗ್ರೆಸ್ ನವರು ಆರೋಪ ಮಾಡುತ್ತಾರೆ. ತಮ್ಮ ಕಾಲದಲ್ಲಿ ಆಗಿರುವುದನ್ನು ನೆನಪು ಮಾಡಿಕೊಳ್ಳಲಿ ಎಂದು ಹೇಳಿದರು.
ಕಾಂಗ್ರೆಸ್ ನವರು ಹತಾಸೆಯಿಂದ ಎಲ್ಲ ವಿಚಾರದಲ್ಲಿ ರಾಜಕಾರಣ ಮಾಡಲು ಆರಂಭಿಸಿದ್ದಾರೆ. ದೇಶಕ್ಕೆ ತೊಂದರೆ ಆದರೆ ಅವರಿಗೆ ಟೀಕೆ ಮಾಡಲು ಒಂದು ವಿಷಯ ಸಿಕ್ಕಿತು ಅಂತ ಸಂತೋಷ ಪಡುತ್ತಾರೆ. ದೇಶಕ್ಕೆ ತೊಂದರೆ ಆಗುವ ಸಂದರ್ಭದಲ್ಲಿ ಎಲ್ಲರೂ ಒಂದಾಗಿರಬೇಕಾದ ಸಂದರ್ಭದಲ್ಲಿ ಇವರು ಈ ರೀತಿಯ ಒತ್ತಡ ಹೇರುವ ಪ್ರಯತ್ನ ಮಾಡುವುದು ದೇಶಕ್ಕೆ ಒಳ್ಳೆಯದನ್ನು ಮಾಡುವ ಜನ ಅಲ್ಲಾ, ಕಾಂಗ್ರೆಸ್ ನವರು ಏನೇ ಮಾಡಿದರೂ ಜನರಿಗೆ ಗೊತ್ತಿದೆ. ಗ್ಯಾಸ್ ಸಿಲಿಂಡರ್ ಹೇಗೆ ಉಪಯೋಗಿಸುತ್ತಿದ್ದಾರೆ ಎನ್ನುವುದನ್ನು ಹೆಣ್ಣು ಮಕ್ಕಳೆ ಮುಂದೆ ಬಂದು ಹೇಳುತ್ತಿದ್ದಾರೆ ಎಂದರು.
ರಾಜ್ಯ ಕಾಂಗ್ರೆಸ್ ನಲ್ಲಿ ಸಂಪುಟ ವಿಸ್ತರಣೆಗೆ ಗದಗ ಜಿಲ್ಲೆಯ ಹಿರಿಯ ಶಾಸಕರಾದ ಜಿ. ಎಸ್. ಪಾಟೀಲ್ ಸೇರಿದಂತೆ ಶಾಸಕರು ಸಭೆ ಮಾಡಿದ್ದಾರೆ. ಆಂತರಿಕ ಬಿಕ್ಕಟ್ಟು ಇನ್ನಷ್ಟು ಉಲ್ಬಣ ಆಗುತ್ತದೆ. ಸಿದ್ದರಾಮಯ್ಯ ಅವರ ಬಜೆಟ್ ಬಗ್ಗೆ ಕಾಂಗ್ರೆಸ್ ನವರೇ ನಮಗೇನು ಸಿಕ್ಕಿಲ್ಲ ಅನ್ನುವ ಪರಿಸ್ಥಿತಿ ಇದೆ. ಹೀಗಿರುವಾಗ ಬಹಳಷ್ಟು ಪ್ರತಿರೋಧ ಇದೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಆರೋಪ ಮಾಡುವುದು ಮೊದಲಿನಿಂದಲೂ ಚಾಳಿ ಇದೆ. ಸುಳ್ಳನ್ನೆ ಹತ್ತು ಬಾರಿ ಹೇಳಿ ಸತ್ಯ ಮಾಡಲು ಹೋಗುತ್ತಾರೆ. ಈಗ ಎಲ್ ಪಿಜಿಯೊಂದನ್ನು ಸೇರಿಸಿಕೊಂಡು ಆರೋಪ ಮಾಡುವ ಪ್ರಯತ್ನ ಮಾಡುತ್ತಾರೆ ಎಂದು ಹೇಳಿದರು.











