ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಹೈಕೋರ್ಟ್ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಈ ಮೂಲಕ ರಾಜ್ಯಪಾಲರು ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಈ ಮೂಲಕ ಹೈಕೋರ್ಟ್ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ಶಾಕ್ ಕೊಟ್ಟಿದೆ.
ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಇಂದು ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣದ ಸಂಬಂಧ ತೀರ್ಪನ್ನು ಪ್ರಕಟಿಸಿದೆ.
ನಾನು ತಪ್ಪು ಮಾಡಿಲ್ಲ; ಸಿಎಂ ಸಿದ್ದರಾಮಯ್ಯ
ಇನ್ನು ತೀರ್ಪು ಹೊರ ಬಿದ್ದ ಬೆನ್ನಲ್ಲೇ ಮಾಧ್ಯಮದವಿರಿಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಎನ್‌ಎಸ್‌ಎಸ್ 218ರ ಹಾಗೂ ಪಿಸಿ ಕಾಯ್ದೆ 19ರಂತೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವುದನ್ನು ತಿರಸ್ಕರಿಸಿ, ಪಿಸಿ ಕಾಯ್ದೆಯ 17ಎ ಪ್ರಕಾರ ತನಿಖೆಗೆ ಉಚ್ಛನ್ಯಾಯಾಲಯ ಆದೇಶ ನೀಡಿದೆ. ಈ ತೀರ್ಪಿನ ಮೇಲೆ ಮುಂದಿನ ಕಾನೂನು ಹೋರಾಟದ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚೆ ಮಾಡಿ, ತೀರ್ಮಾನ ಮಾಡಲಾಗುವುದು. ನಾನು ತಪ್ಪು ಮಾಡಿಲ್ಲ. 17ಎ ರಡಿ ತನಿಖೆ ಮಾಡಲು ಆದೇಶ ನೀಡಿದ ಮಾತ್ರಕ್ಕೆ ನಾನು ತಪ್ಪು ಮಾಡಿದ್ದೇನೆ ಎಂದಲ್ಲ. ಇಡೀ ದೇಶದಲ್ಲಿ ವಿಪಕ್ಷಗಳ ಸರ್ಕಾರದ ಮೇಲೆ ಪಿತೂರಿ ಮಾಡಿದಂತೆ ಕರ್ನಾಟಕದಲ್ಲಿಯೂ ನನ್ನ ಹಾಗೂ ನಮ್ಮ ಸರ್ಕಾರದ ವಿರುದ್ಧ ಪಿತೂರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಖಂಡಿತಾ ನನಗೆ ಜಯ ಸಿಗಲಿದೆ. ಬಿಜೆಪಿಯವರನ್ನು ನಾವು ರಾಜಕೀಯವಾಗಿ ಎದುರಿಸುತ್ತೇವೆ. ಇನ್ನು ತೀರ್ಪಿನ ಪ್ರತಿಯನ್ನು ಸಂಪೂರ್ಣವಾಗಿ ಓದಿಲ್ಲ. ಓದಿದ ಮೇಲೆ ಈ ಬಗ್ಗೆ ಪ್ರತಿಕ್ರಿಯಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಹೇಳಿದ ಮಾತ್ರಕ್ಕೆ ನಾನು ರಾಜೀನಾಮೆ ಏಕೆ ಕೊಡಬೇಕು? ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಮೇಲೆ ಎಫ್.ಐ.ಆರ್ ಆಗಿದ್ದು, ಅವರು ಜಾಮೀನಿನ ಮೇಲೆ ಇದ್ದಾರೆ. ಅವರು ರಾಜೀನಾಮೆ ಕೊಟ್ಟಿದ್ದಾರೆಯೇ? ಇದು ಅವರಿಗೆ ಅನ್ವಯವಾಗುವುದಿಲ್ಲವೇ? ತನಿಖೆ ಹಂತದಲ್ಲಿಯೇ ರಾಜೀನಾಮೆ ಕೊಡಬೇಕು ಎನ್ನುವ ಬಿಜೆಪಿ ವಾದಕ್ಕೆ ಕುಮಾರಸ್ವಾಮಿ ಅವರ ಪ್ರತಿಕ್ರಿಯೆ ಏನೆಂದು ಕೇಳಿ ತಿಳಿಯಿರಿ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಇದರ ಮಧ್ಯೆ ಹೈಕೋರ್ಟ್ ತೀರ್ಪು ಹೊರ ಬರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ತಮ್ಮ ವಕೀಲರ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರ ಜೊತೆಗೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಮುಂದಿನ ಕಾನೂನೂ ಹೋರಾಟದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ಹೈಕೋರ್ಟ್ ನಲ್ಲಿ ಅರ್ಜಿ ವಜಾ ಆಗಿರೋದನ್ನು ಪ್ರಶ್ನಿಸಿ ನಾಳೆಯೇ ಸಿಎಂ ಸಿದ್ದರಾಮಯ್ಯ ಅವರ ಪರವಾದ ವಕೀಲರು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.