ಬೆಂಗಳೂರು: ಹಿಂದೂ ಕಾರ್ಯಕರ್ತರ ಹತ್ಯೆಗಳು ಹೆಚ್ಚಾಗಿ ಕರಾವಳಿ ಭಾಗದಲ್ಲಿ ನಡೆಯುತ್ತಿತ್ತು , ಈಗ ಬೀದರ್ ಬೆಂಗಳೂರುವರೆಗೆ ವ್ಯಾಪಿಸಿದೆ ಎಂದು ಬೆಂಗಳೂರಿನಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಗವಿಸಿದ್ದಪ್ಪ ನಾಯಕ್ ಎಂಬ ಹಿಂದೂ ಕಾರ್ಯಕರ್ತ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿದ ವ್ಯಕ್ತಿಯನ್ನು ಸಾಧಿಕ್ ಮತ್ತು ಐದಾರು ಜನ ಸೇರಿ ಮಸೀದಿ ಮುಂಭಾಗದಲ್ಲಿ ಕೊಲೆ ಮಾಡಿದ್ದಾರೆ. ಇದಕ್ಕೆ ಕಾರಣ ಗವಿಸಿದ್ದಪ್ಪ ಭಾನು ಎಂಬ ಮುಸ್ಲಿಂ ಯುವತಿಯನ್ನು ಪ್ರೀತಿ ಮಾಡಿದ್ದ. ನಂತರ ಆಕೆಗೆ ಸಾಧಿಕ್ ಎಂಬವನ ಜೊತೆ ಸಂಬಂಧ ಇತ್ತು. ಜನನಿಬಿಡ ಪ್ರದೇಶದಲ್ಲಿ ಹೊಡೆದು ನಮ್ಮ ಶಕ್ತಿ ಏನೆಂದು ಗೊತ್ತಾಗಬೇಕು ಅಂತಾ ಪಟ್ಟಣದಲ್ಲಿ ಕತ್ತು ಕತ್ತರಿಸಿ ಹಾಕಿದ್ದಾರೆ. ಸಾದಿಕ್ ನಿಷೇಧಿತ ಸಂಘಟನೆ ಸದಸ್ಯ ಎಂಬುದೂ ಗೊತ್ತಾಗುತ್ತಿದೆ. ಇದು ಸುಹಾಸ್ ಶೆಟ್ಟಿ ಹತ್ಯೆ ಮಾದರಿಯಲ್ಲಿ ನಡೆದಿರುವ ಹತ್ಯೆ ಎಂದಿದ್ದಾರೆ.
ಇನ್ಸ್ಟಾಗ್ರಾಂ ನಲ್ಲಿ ಒಂದು ದಿನ ಮೊದಲೇ ತಲವಾರು ಹಿಡಿದು ಪೋಸ್ಟ್ ಹಾಕಿದ್ದಾರೆ, ಪೊಲೀಸರು ಎಚ್ಚೆತ್ತುಕೊಂಡಿಲ್ಲ. ಆತ ಹೈವೇನಲ್ಲಿ ವೀಲಿಂಗ್, ಗಾಂಜಾ ಸೇವನೆಯ ಪೋಟೋಗಳನ್ನು ಪೋಸ್ಟ್ ಮಾಡಿದ್ದಾನೆ. ನಿನ್ನೆ ಶ್ರೀರಾಮುಲು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಶ್ರೀರಾಮುಲು ಮನೆಗೆ ಹೋಗಿ ಬಂದಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಗಳನ್ನು ಮಾಡಿದ್ದಾರೆ. ಬಳ್ಳಾರಿ ಸಾಕಿದ ನಾಯಿ ಕೊಪ್ಪಳಕ್ಕೆ ಬಂದು ಬೊಗಳಿತು ಎಂದು ಶ್ರೀರಾಮುಲು ಅವರಿಗೆ ಕಮೆಂಟ್ ಮಾಡಿದ್ದಾರೆ. ಇಷ್ಟೆಲ್ಲಾ ಆದರೂ ಪೊಲೀಸರು ಕತ್ತೆ ಕಾಯುತ್ತಿದ್ರಾ?. ಭಾನು ಇದಕ್ಕೆಲ್ಲಾ ಕಾರಣ ಅಲ್ವಾ?. ಅವಳನ್ನು ಯಾಕೆ ಅರೆಸ್ಟ್ ಮಾಡಿಲ್ಲ?.ಜಿಲ್ಲಾ ಉಸ್ತುವಾರಿ ಸಚಿವರು ಈವರೆಗೆ ಒಂದು ಮಾತು ಆಡಿಲ್ಲ. ಶಾಸಕರು ಇವರನ್ನು ರಕ್ಷಿಸುತ್ತಿದ್ದಾರೆ ಎಂಬ ಗುಮಾನಿ ಇದೆ. ಓಲೈಕೆ ರಾಜಕಾರಣ ಯಾವ ಮಟ್ಟಕ್ಕೆ ಹೋಗುತ್ತಿದೆ?. ಆಗಸ್ಟ್ 11 ರೊಳಗೆ ಕೊಪ್ಪಳದಲ್ಲಿ ಜನಾಂದೋಲನ ಸೃಷ್ಟಿಸಲು ತೀರ್ಮಾನ ಮಾಡಿದ್ದೇವೆ.ಶ್ರೀರಾಮುಲು ಇದರ ನೇತೃತ್ವ ವಹಿಸಿಕೊಂಡಿದ್ದಾರೆ ಎಂದಿದ್ದಾರೆ.
ಸಿಎಂ ಪ್ರವಾಸ ಕೂಡಾ ಕೊಪ್ಪಳಕ್ಕೆ ಇತ್ತು. ಇದಕ್ಕೆ ಉತ್ತರ ಕೊಡಬೇಕಾಗುತ್ತದೆ ಎಂದು ಹವಾಮಾನ ವೈಪರೀತ್ಯ ಎಂದು ಕಾರಣ ಕೊಟ್ಟು ಪ್ರವಾಸ ರದ್ದು ಮಾಡಿದ್ದಾರೆ.ಪ್ರಕರಣವನ್ನು ಎನ್ ಐಎಗೆ ವಹಿಸಬೇಕು. ಗವಿಸಿದ್ದಪ್ಪ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಹಣ, ಜಮೀನು ಮತ್ತು ಉದ್ಯೋಗ ಕೊಡಬೇಕು ಎಂದು ಆಗ್ರಹಿಸಿದ್ದಾರೆ.