ಬೆಂಗಳೂರು; ನಾವು ಪ್ರವಾಸ ಮಾಡಿದ ಕಾರಣ ಎಚ್ಚೆತ್ತುಕೊಂಡ ಸಿಎಂ ವೈಮಾನಿಕ ಸಮೀಕ್ಷೆ ಮಾಡಿದರು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆ ಹಾನಿಗೆ ಪರಿಹಾರ ಕೊಡಬೇಕಾಗಿದೆ. ಎಮ್ಮೆ ಚರ್ಮದ ಸರ್ಕಾರ ಮಳೆ ಬಂದರೆ ಇನ್ನಷ್ಟು ನಿದ್ದೆ ಮಾಡುತ್ತದೆ. ಊರಿಗೆ ಊರೇ ಹೊರಗೆ ಹೋಗಿ ಆಶ್ರಯ ಪಡೆಯುವ ಪರಿಸ್ಥಿತಿ ಇತ್ತು. ನಾವು ಪ್ರವಾಸ ಮಾಡಿದ ಕಾರಣ ಎಚ್ಚೆತ್ತುಕೊಂಡ ಸಿಎಂ ವೈಮಾನಿಕ ಸಮೀಕ್ಷೆ ಮಾಡಿದರು.ನಾವು ರಸ್ತೆ ಮೂಲಕ ಜನರನ್ನು ತಲುಪಿದರೆ ಸಿಎಂ ವೈಮಾನಿಕವಾಗಿ ಹೋಗಿದ್ದಾರೆ. ಗುಂಡಿಯಲ್ಲಿ ರಸ್ತೆಗಳು ಬಿದ್ದು ಹೋಗಿರುವ ಪರಿಸ್ಥಿತಿ ಇದೆ. ರಸ್ತೆಗಳೇ ಇಲ್ಲದಿರುವಾಗ ಸಿಎಂ ಹೇಗೆ ರಸ್ತೆಯಲ್ಲಿ ಬಂದು ಸಮೀಕ್ಷೆ ಮಾಡಲು ಆಗುತ್ತದೆ. ಅದಕ್ಕೆ ಸಿಎಂ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಕಲ್ಬುರ್ಗಿ, ರಾಯಚೂರು, ಯಾದಗಿರಿ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಯಾರೂ ಸ್ಥಳೀಯರಲ್ಲ. ಅವರೆಲ್ಲಾ ಬೆಂಗಳೂರಿನ ಎಸಿ ರೂಂ ಗಳಲ್ಲಿ ಕುಳಿತಿರುವವರು. ಸಿಎಂ ಅವರೇ ಮೊದಲು ಇವರನ್ನು ಎಸಿ ರೂಂ ಗಳಿಂದ ಹೊರಗೆ ದಬ್ಬಿ ಎಂದಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಎಲ್ಲಾ ಕಡೆ ಕಲುಷಿತ ನೀರು ತುಂಬಿದೆ. ಸಿಎಂ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪನವರನ್ನು ನೋಡಿದರೆ ಎಲ್ಲಾ ಕಡೆ ಮೊಮ್ಮಕ್ಕಳದೇ ದರ್ಬಾರು ಆಗಿದೆ. ಸಿಎಂ ಮೊಮ್ಮಗ, ಮಹದೇವಪ್ಪ ನವರ ಮೊಮ್ಮಗ ಇವರಿಗೆಲ್ಲಾ ಗದೆ ಕೊಟ್ಟು ವಿಜೃಂಭಿಸುವ ಕೆಲಸ ಆಗುತ್ತಿದೆ. ಇವರಷ್ಟೇ ಲೂಟಿ ಮಾಡುತ್ತಿಲ್ಲ, ಮಕ್ಕಳಿಂದಲೂ ಲೂಟಿ ಮಾಡಿಸುತ್ತಿದ್ದಾರೆ. ಇವರಿಗೆ ಜನರ ಚಿಂತೆ ಇಲ್ಲ, ಮೊಮ್ಮಕ್ಕಳ ಚಿಂತೆ. ಇದು ರಿಯಲ್ ಎಸ್ಟೇಟ್ ಸರ್ಕಾರ ಆಗಿದೆ. ಬೆಂಗಳೂರು ಸುತ್ತಮುತ್ತ ರಿಯಲ್ ಎಸ್ಟೇಟ್ ದಂಧೆಯಲ್ಲಿ ಮುಳುಗಿದ್ದಾರೆ. ನಾನೇ ಮುಂದೆ ಎರಡೂವರೆ ವರ್ಷ ಸಿಎಂ ಅಂತಾ ಇವರು. ಇಲ್ಲ ನವೆಂಬರ್ ನಲ್ಲಿ ನಾನು ಸಿಎಂ ಆಗುತ್ತೇನೆ ಅಂತಾ ಇನ್ನೊಬ್ಬರು. ರಾಜ್ಯದಲ್ಲಿ ಮುಖ್ಯಮಂತ್ರಿ ದಂಧೆ ಆಗಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ರಣದೀಪ್ ಸಿಂಗ್ ಸುರ್ಜೇವಾಲಾ ವೋಟ್ ಚೋರಿ ಅಭಿಯಾನದ ಬಗ್ಗೆ ಮಾತನಾಡಿದ ಅವರು ಇಲ್ಲಿಯವರೆಗೆ ವೋಟ್ ಚೋರಿ ಇರಲಿಲ್ಲ. ಈಗ ಬೆಂಗಳೂರನ್ನು ೫ ಭಾಗ ಮಾಡಿ ಈಗ ವೋಟ್ ಚೋರಿ ಶುರುವಾಗುತ್ತಿದೆ. ಪಾಪಾ ಒಳ್ಳೆಯ ವ್ಯಕ್ತಿಯನ್ನೇ ಅಭಿಯಾನಕ್ಕೆ ಕರೆಸಿದ್ದಾರೆ.ಸುರ್ಜೇವಾಲಾ ಇಷ್ಟು ದಿನ ಎಟಿಎಂ ನಡೆಸುತ್ತಿದ್ದರು. ಇನ್ನು ಅವರೇ ವೋಟ್ ಚೋರಿಯನ್ನೂ ಮಾಡುತ್ತಾರೆ ಎಂದ ಅವರು ಕಾಂಗ್ರೆಸ್ ಶಾಸಕರಿಗೆ ಅಧಿಕಾರ ಹಂಚಿಕೆ ವಿಚಾರವಾಗಿ ನೋಟೀಸ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ ನಲ್ಲಿ ಇಂತಹ ನಾಟಕಗಳು ನಡೆಯುತ್ತಲೇ ಇರುತ್ತವೆ. ಇದು ಅತ್ತಂತೆ ಮಾಡು ನಾನು ಚಿವುಟುತ್ತೇನೆ ಎಂಬ ನಾಟಕ. ಈಗ ನಾಟಕ ಪ್ರದರ್ಶನ ಆರಂಭವಾಗಿದೆ. ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗಿರುವ ಕಾರಣ ಲೋ ಕಮಾಂಡ್ ಗಳೆಲ್ಲಾ ಮಾತಾಡುತ್ತಿದ್ದಾರೆ. ಇಷ್ಟು ವೀಕ್ ಹೈಕಮಾಂಡ್ ಪಂಚಾಯತ್ ಮಟ್ಟದಲ್ಲೂ ಇರಲ್ಲ ಎಂದು ತಿಳಿಸಿದ್ದಾರೆ.











