ಬೆಂಗಳೂರು: ಪರಿಶಿಷ್ಟ ಸಮುದಾಯಗಳಿಗೆ ಸಿಎಂ ದೊಡ್ಡ ಅನ್ಯಾಯ ಎಸಗಿದ್ದಾರೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಮೀಸಲಾತಿ ವಿಚಾರದಲ್ಲಿ ಶೋಷಿತ ಸಮುದಾಯಗಳು ಹೋರಾಟ ಮಾಡುತ್ತಲೇ ಬಂದಿವೆ. ಕಾಂಗ್ರೆಸ್ ಸರ್ಕಾರ ನ್ಯಾಯ ಕೊಡುವ ಇಚ್ಛಾ ಶಕ್ತಿ ತೋರಿಸಲೇ ಇಲ್ಲ. ಬಿಜೆಪಿ ಸರ್ಕಾರ ಶೋಷಿತ ಸಮುದಾಯಗಳಿಗೆ ನ್ಯಾಯ ಕೊಡುವ ಸದುದ್ದೇಶದಿಂದ ಮೀಸಲಾತಿ ಹೆಚ್ಚಳ ಮಾಡಿತ್ತು. ಪರಿಶಿಷ್ಟರ ವಿಚಾರದಲ್ಲಿ ಮೀಸಲಾತಿಯಂತಹ ಗಂಭೀರ ವಿಚಾರವನ್ನು ಸಿಎಂ ಹಗುರವಾಗಿ ತೆಗೆದುಕೊಂಡಿದ್ದಾರೆ. ಶೋಷಿತ ಸಮುದಾಯಗಳ ಜೊತೆಗೆ ಕಾಂಗ್ರೆಸ್ ಸರ್ಕಾರ ಚೆಲ್ಲಾಟವಾಡುತ್ತಿದೆ.ನೂರಾರು ಕೋಟಿ ಖರ್ಚು ಮಾಡಿದ ನಾಗಮೋಹನ್ ದಾಸ್ ಸಮಿತಿ ವರದಿಯನ್ನು ಅನುಷ್ಠಾನ ಮಾಡಿಲ್ಲ.ಹೈಕೋರ್ಟ್ ನಲ್ಲಿ ಸರಿಯಾಗಿ ವಾದಿಸುವ ಗೋಜಿಗೂ ಸರ್ಕಾರ ಹೋಗಿಲ್ಲ. ಪರಿಶಿಷ್ಟ ಸಮುದಾಯಗಳಿಗೆ ಸಿಎಂ ದೊಡ್ಡ ಅನ್ಯಾಯ ಎಸಗಿದ್ದಾರೆ ಎಂದಿದ್ದಾರೆ.
ಹಿಂದಿನ ಮೀಸಲಾತಿ ಬಳಸಿಕೊಂಡು 56 ಸಾವಿರ ಹುದ್ದೆ ಭರ್ತಿ ಮಾಡುವುದಾಗಿ ಹೇಳಿದ್ದಾರೆ. ಒಳಮೀಸಲಾತಿಯನ್ನು ಸರಿಯಾಗಿ ಅನುಷ್ಠಾನ ಮಾಡದೇ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬೆಂಕಿ ಹಚ್ಚಲು ಹೊರಟಿದೆ. ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮೀಸಲಾತಿಯನ್ನು ಅನುಷ್ಠಾನ ಮಾಡಬೇಕು.ಶೋಷಿತ, ಪೀಡಿತ ಸಮುದಾಯಗಳಿಗೂ ಒಳ ಮೀಸಲಾತಿ ಪರಿಗಣಿಸಿ ನಂತರವೇ ಹುದ್ದೆಗಳನ್ನು ಭರ್ತಿ ಮಾಡಬೇಕು. ಪದೇ ಪದೇ ಈ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದ್ದೀರಿ ಮುಖ್ಯಮಂತ್ರಿಗಳೇ. ಎಲ್ಲಾ ವರ್ಗದ ಜನರಿಗೂ ನ್ಯಾಯ ಕೊಡುವ ಕೆಲಸ ಮಾಡಬೇಕು. ಮಗು ಚಿವುಟುವ ಮತ್ತು ತೊಟ್ಟಿಲು ತೂಗುವ ಕೆಲಸ ಸಿಎಂ ಮಾಡುತ್ತಿರುವುದು ಅಕ್ಷಮ್ಯ. ನೀವು ಎಷ್ಟು ದಿನ ಸಿಎಂ ಸ್ಥಾನದಲ್ಲಿ ಕೂರುತ್ತೀರೋ ಗೊತ್ತಿಲ್ಲ ನಮಗೆ. ಶೋಷಿತ ಸಮುದಾಯಗಳ ತಾಳ್ಮೆ ಪರೀಕ್ಷೆ ಮಾಡಬೇಡಿ. ಇಲ್ಲದಿದ್ದರೆ ರಾಜ್ಯದಲ್ಲಿ ಮುಂದಾಗುವ ಘಟನೆಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ. ನಾನು ವಿನಮ್ರವಾಗಿ ಹೇಳುತ್ತಿದ್ದೇನೆ ಮತ್ತು ಎಚ್ಚರಿಕೆಯನ್ನೂ ಕೊಡುತ್ತಿದ್ದೇನೆ.ನ್ಯಾಯ ಒದಗಿಸುವ ಕೆಲಸ ಮಾಡಿ ಸಿಎಂ ತಮ್ಮ ಗೌರವ ಉಳಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಶುಕ್ರವಾರದಿಂದ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆಯೇ ಸಾಲು ಸಾಲು ಪ್ರತಿಭಟನೆಗಳೂ ಪ್ರಾರಂಭವಾಗುತ್ತಿವೆ. ವೇತನ ಬಾಕಿಗೆ ಹೋರಾಟ, ಕಸದ ಸಮಸ್ಯೆ, ವೈದ್ಯರ ಮುಷ್ಕರ ಹೀಗೆ ಅನೇಕ ಪ್ರತಿಭಟನೆಗಳಿವೆ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿರುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಕಾಂಗ್ರೆಸ್ ಶಾಸಕರನ್ನು ಸಮಾಧಾನಿಸಲು ನೀವೇ ವಿದೇಶ ಪ್ರಯಾಣದ ಅವಕಾಶ ಕಲ್ಪಿಸಿದ್ದೀರಿ. ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿರುವುದು ವಾಸ್ತವಿಕ ಸತ್ಯ.ಒಳ ಮೀಸಲಾತಿಯನ್ನೂ ಪರಿಗಣಿಸಿ ಉದ್ಯೋಗ ಸೃಷ್ಟಿಯ ಕೆಲಸ ಮಾಡಬೇಕು. ಇಲ್ಲದಿದ್ದರೆ ಬಿಜೆಪಿ ಉಗ್ರ ಹೋರಾಟಕ್ಕಿಳಿಯುವುದು ಅನಿವಾರ್ಯ ಎಂದಿದ್ದಾರೆ.











