ಬೆಂಗಳೂರು; ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಯೋಜನೆ ತಂದಿದೆ ಎಂದು ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ರಾಜ್ಯ ಸರ್ಕಾರ ವಿಶೇಷ ಅಧಿವೇಶನದ ಮೂಲಕ ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಯೋಜನೆಗೆ ಅಡ್ಡಗಾಲು ಹಾಕುವ ಪ್ರಯತ್ನ ಮಾಡುತ್ತಿದೆ. ವಿಬಿ ಜಿ ರಾಮ್ ಜಿ ಬಗ್ಗೆ ಸರ್ಕಾರ ನಿರ್ಣಯ ಮಾಡುವ ಮಾಹಿತಿ ಇದೆ. ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಯೋಜನೆ ತಂದಿದೆ. ಕಾಂಗ್ರೆಸ್ ನವರಿಗೆ ಇದು ಹೊಟ್ಟೆ ಉರಿ.ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾನ್ ಅವರಿಗೆ ಪತ್ರ ಬರೆದು ಭೇಟಿ ಮಾಡಿದ್ದೆ. ನಾಳೆ ಬೆಂಗಳೂರಿಗೆ ಬರಲು ಅವರು ಒಪ್ಪಿಕೊಂಡಿದ್ದಾರೆ.ಹೆಚ್.ಡಿ. ಕುಮಾರಸ್ವಾಮಿ ಮತ್ತು ಸಿ.ಬಿ. ಸುರೇಶ್ ಬಾಬು ಅವರು ಕೂಡಾ ನಾಳೆ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ.ನಾಳೆ ಜಿ ರಾಮ್ ಜಿ ಬಗ್ಗೆ ಶಿವರಾಜ್ ಸಿಂಗ್ ಚೌಹಾನ್ ಕಾರ್ಯಕ್ರಮದಲ್ಲಿ ಮಾಹಿತಿ ಕೊಡಲಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ಶಾಸಕರು, ಎಂಎಲ್ಸಿಗಳು, ಜಿಲ್ಲಾಧ್ಯಕ್ಷರು ಮತ್ತು ಜೆಡಿಎಸ್ ಶಾಸಕರು, ಎಂಎಲ್ಸಿಗಳನ್ನು ಆಹ್ವಾನಿಸಲಾಗಿದೆ ಎಂದಿದ್ದಾರೆ.
ಜಿ ರಾಮ್ ಜಿ ಯೋಜನೆ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಸರ್ಕಾರ ಬೇಕಿದ್ದರೆ ಭೇಟಿ ಮಾಡಿ ಮಾಹಿತಿ ಪಡೆಯಬೇಕಿತ್ತು. ಅದರ ಬದಲು ಜನರ ದುಡ್ಡು ಖರ್ಚು ಮಾಡಿ ಅಧಿವೇಶನ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಹಲವಾರು ಯೋಜನೆ ತಂದಾಗ ನಾವೇನಾದರೂ ಖಂಡನಾ ನಿರ್ಣಯ ಮಾಡಿದ್ದೇವಾ?. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ರಾಜಕೀಯ ಮಾಡುವುದು ತಪ್ಪು. ರಾಜ್ಯ ಸರ್ಕಾರ ದಿವಾಳಿಯಾಗಿರುವ ಕಾರಣ ಜಿ ರಾಮ್ ಜಿ ಯೋಜನೆಯಲ್ಲಿ 40% ಅನುದಾನ ಕೊಡಲು ಹಣ ಇಲ್ಲ.ಕೇಂದ್ರ ಸರ್ಕಾರವನ್ನು ತೆಗಳುವ ಹೇಳಿಕೆಗಳನ್ನು ನಾಳೆ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಓದಬಾರದು ಎಂದು ರಾಜ್ಯಪಾಲರಿಗೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.











