ಬೆಂಗಳೂರು: ಅತೀ ಹೆಚ್ಚು ಸಾಲ ಮಾಡಿದ್ದೇ ಸಿದ್ದರಾಮಯ್ಯ ಸರ್ಕಾರದ ಎರಡೂವರೆ ವರ್ಷದ ಸಾಧನೆ ಎಂದು ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣವಾದ ಹಿನ್ನೆಲೆ ಎರಡೂವರೆ ಕನ್ನಡಿಗರಿಗೆ ಬಲು ಹೊರೆ; ಕಾಂಗ್ರೆಸ್ ಕರ್ಮಕಾಂಡಗಳ ಅನಾವರಣ ಎಂಬ ವೀಡಿಯೋ ಬಿಡುಗಡೆ ಮಾಡಿದರು. ರಾಜ್ಯ ಸರ್ಕಾರದ ವಿರುದ್ಧ ದರೋಡೆ ಕಾಂಗ್ರೆಸ್ ಸರ್ಕಾರ ಎಂಬ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸಂಸದ ಗೋವಿಂದ ಕಾರಜೋಳ, ಶಾಸಕ ಸಿ.ಕೆ. ರಾಮಮೂರ್ತಿ, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಈ ವೇಳೆ ಉಪಸ್ಥಿತರಿದ್ದರು.
ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಎರಡೂವರೆ ವರ್ಷದ ಕಾಂಗ್ರೆಸ್ ಸರ್ಕಾರ ಎರಡು ಹೋಳಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಎರಡು ಭಾಗ ಆಗಿ ಸಂಭ್ರಮಾಚರಣೆ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಖಾಯಿಲೆ ಬಿದ್ದು, ಸೊರಗಿ ಡ್ರಿಪ್ಸ್ ಹಾಕಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ದೆಹಲಿಗೆ ಹೋದವರಿಗೆ ಯಾಕೆ ಹೋಗಿದ್ಯಾ ನಿನ್ನ ಕ್ಯಾಬಿನೆಟ್ ನಿಂದ ತೆಗೆಯುತ್ತೇನೆ ಎಂದು ಆವಾಜ್ ಹಾಕುತ್ತಿದ್ದಾರೆ. ಕಾಂಗ್ರೆಸ್ ಹೋಳು, ಜನರಿಗೆ ಗೋಳು, ರೈತರಿಗೆ ಹೂಳು. ಎರಡೂವರೆ ವರ್ಷ ಅವರಿಗೆ ವರಿ, ಜನರ ಪಾಲಿಗೆ ಬೆಲೆಯೇರಿಕೆಯ ಬರೆ. ತುಪ್ಪ ತಿನ್ನಿ ಆರೋಗ್ಯ ಬರಲಿ ಎಂದು ಜಿಎಸ್ಟಿ ಕಡಿಮೆ ಮಾಡಿದರೆ ಕಾಂಗ್ರೆಸ್ ಸರ್ಕಾರ ಬೆಲೆ ಏರಿಸಿ ಅದಕ್ಕೂ ಕಲ್ಲು ಹಾಕಿದೆ. ಕಾಂಗ್ರೆಸ್ ಸರ್ಕಾರ ಪಾಪಿ ಸರ್ಕಾರ. ಅತೀ ಹೆಚ್ಚು ಸಾಲ ಮಾಡಿದ್ದೇ ಸಿದ್ದರಾಮಯ್ಯ ಸರ್ಕಾರದ ಎರಡೂವರೆ ವರ್ಷದ ಸಾಧನೆ. ಬಜೆಟ್ ನಲ್ಲಿ ಸಿದ್ದರಾಮಯ್ಯ ಚಾಂಪಿಯನ್ ಅಂತೆ, ಯಾವೂರ ಚಾಂಪಿಯನ್ ಗೊತ್ತಿಲ್ಲ.ಇಷ್ಟು ಸಾಲ ಮಾಡಿದ ಮೇಲೆ ನೀನು ಚಾಂಪಿಯನ್ ಅಂತಾ ಹೇಳಿಕೊಂಡರೆ ಅದು ಚಾಂಪಿಯನ್ ಪದಕ್ಕೆ ಅವಮಾನ ಎಂದರು.
ಲೂಟಿ ಹೊಡೆಯುವುದರಲ್ಲಿ, ದೆಹಲಿಗೆ ಅತಿ ಹೆಚ್ಚು ಹಣ ಕಳಿಸುವುದರಲ್ಲಿ ಇವರೇ ಚಾಂಪಿಯನ್. ವಯನಾಡಿನಲ್ಲಿ ಏನಾದರೂ ಆದರೆ ಇವರು ದುಡ್ಡು ಕೊಡುತ್ತಾರೆ. ಎರಡೂವರೆ ವರ್ಷಕ್ಕೆ ಜಾಹೀರಾತು ಕೊಟ್ಟಿದ್ದಾರೆ, ಅದು ಕೂಡಾ ಜೋಡಿ ಪೋಟೋ. ಒಬ್ಬರು ಹಾಸಿಗೆ ಮೇಲೆ ಮಲಗಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಹೇಳಿದ ಶಾಸಕರೇ ಸಿದ್ದರಾಮಯ್ಯ ಬೇಡ ಅಂತಾ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ್ದಾರೆ.ಇಷ್ಟೆಲ್ಲಾ ಆದರೂ ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ ಎನ್ನುತ್ತಾರೆ. ಖರ್ಗೆ ಮನೆಗೆ ವಾಂತಿ ಮಾಡಲು ಹೋಗಿದ್ರಾ?. ಬೆಂಗಳೂರಿನಲ್ಲೇ ವಾಂತಿ ಮಾಡಬಹುದಿತ್ತಲ್ವಾ?. ಎರಡೂವರೆ ವರ್ಷದ ಒಪ್ಪಂದ ಆಗಿದೆಯೋ ಇಲ್ಲವೋ ಎಂದು ಬೊಗಳಿ ಅಂತಾ ಜನ ಕೇಳುತ್ತಿದ್ದಾರೆ. ಏನು ಬಿಜೆಪಿಯವರು ಕಾಂಗ್ರೆಸ್ ಶಾಸಕರಿಗೆ ದೆಹಲಿಗೆ ಹೋಗಿ ಅಂತಾ ಹೇಳಿದ್ದೇವಾ?. ಇಲ್ಲಾಂದ್ರೆ ದೊಡ್ಡ ಖರ್ಗೆ ಮತ್ತು ರಾಹುಲ್ ಗಾಂಧಿ ಐದು ವರ್ಷ ಸಿದ್ದರಾಮಯ್ಯನೇ ಅಂತಾ ಹೇಳಲಿ. ಡಿ.ಕೆ. ಶಿವಕುಮಾರ್ ನೋಡಿದರೆ ನಾಲ್ಕು ಗೋಡೆ ಮಧ್ಯೆ ಅಂತಾರೆ. ನಾವು ಮಾಡಿದ ಕಾಮಗಾರಿ ಉದ್ಘಾಟನೆ ಮಾಡಿದ್ದು ಬಿಟ್ಟು ನೀವೇನು ಮಾಡಿದ್ದೀರಿ ಹೇಳಿ ಎಂದು ತಿಳಿಸಿದರು.











