ಬೆಂಗಳೂರು; ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ಅದು ಬಿಜೆಪಿಯವರ ವೈಜ್ಞಾನಿಕ ವಿಚಾರ ಎಂದು ವಿಧಾನಸೌಧದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವಿಧಾನಸೌಧದಲ್ಲಿ ಬಿಜೆಪಿಯಿಂದ ಶಾಸಕ ಯತ್ನಾಳ್ ಉಚ್ಚಾಟನೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಅದು ಬಿಜೆಪಿಯವರ ವೈಜ್ಞಾನಿಕ ವಿಚಾರ. ಅದು ಅವರ ಪಕ್ಷದ ಆಂತರಿಕ ವಿಚಾರ. ಯಾರನ್ನ ಇಟ್ಟಿಕೊಳ್ತಾರೆ, ಬಿಡ್ತಾರೆ ಅವರಿಗೆ ಬಿಟ್ಟ ವಿಚಾರ. ಯತ್ನಾಳ್ ಅವರದ್ದು ಕುಟುಂಬ ರಾಜಕೀಯ ಮತ್ತು ಭ್ರಷ್ಟಾಚಾರದ ವಿರುದ್ಧ ಇತ್ತು. ಕುಟುಂಬ ರಾಜಕೀಯ ಮತ್ತು ಭ್ರಷ್ಟಾಚಾರ ಅಂದ್ರೆ ಇಷ್ಟ ಅಂತ ಕೇಂದ್ರ ಬಿಜೆಪಿ ಸ್ಪಷ್ಟವಾದ ಸಂದೇಶ ಕೊಟ್ಟಿದ್ದಾರೆ. ಇವರಿಬ್ಬರನ್ನ ಬಿಟ್ಟು ಕೊಡೊಲ್ಲ ಅಂತ ತೋರಿಸಿದ್ದಾರೆ. ದುಬೈನೊಂದಿಗೆ ನಂಟು ಇರುವವರನ್ನ ಬಿಟ್ಟು ಕೊಡೊಲ್ಲ ಅಂತ ಸಂದೇಶ ರವಾನಿಸಿದ್ದಾರೆ ಎಂದಿದ್ದಾರೆ.
ದೆಹಲಿಯಲ್ಲಿ ಹೆಚ್ ಡಿಕೆ ಮತ್ತು ಸಚಿವ ಸತೀಸ್ ಜಾರಕಿಹೊಳಿ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ಕಚೇರಿಯಲ್ಲಿ ಭೇಟಿ ಮಾಡಿದ್ದಾರೆ, ಅದರಲ್ಲಿ ತಪ್ಪೇನಿದೆ?. ನಾನೂ ಸಹ ಕೇಂದ್ರದ ಸಚಿವರನ್ನ ಭೇಟಿ ಮಾಡ್ತಾ ಇರುತ್ತೇನೆ. ಕೇಂದ್ರದ ಅನುದಾನ, ಹೊಸ ಯೋಜನೆಗಳ ಬಗ್ಗೆ ಮಾತನಾಡಬಾರದಾ?. ನೀವೇ ಮಾರ್ಗಸೂಚಿ ಕೊಡಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸದನದಲ್ಲಿ ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳಲಿ, ಅವರಿಗೆ ಸದಸ್ಯರೇ ಇಲ್ಲ. ಮುಂದೆ ಏನೇನೋ ಆಗುತ್ತೆ, ಕಾದು ನೋಡಿ. ಇದು ಅವರ ರಾಜಕೀಯ ಅಸ್ತಿತ್ವ ಎಂದಿದ್ದಾರೆ.
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಅವಧಿಗೆ ಉಚ್ಚಾಟನೆ
ಬೆಂಗಳೂರು: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಿ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಆದೇಶ ಹೊರಡಿಸಿದೆ.
ಪದೇ ಪದೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರಹಾಕುತ್ತಿದ್ದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಇದೀಗ ಮಾಡಿ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಮಹತ್ವದ ಕ್ರಮ ತೆಗೆದುಕೊಂಡಿದೆ. ಅವರನ್ನು 6 ವರ್ಷಗಳ ಕಾಲ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದೆ.
ಇನ್ನು ಆದೇಶ ಪ್ರತಿಯಲ್ಲಿ “ಪಕ್ಷದ ಕೇಂದ್ರ ಶಿಸ್ತು ಸಮಿತಿಯು ಫೆಬ್ರವರಿ 5 ರಂದು ನೀಡಿದ್ದ ನೋಟಿಸ್ ಗೆ ನಿಮ್ಮ ಪ್ರತಿಕ್ರಿಯೆಯನ್ನು ಪರಿಗಣಿಸಿದೆ. ಮತ್ತು ಹಿಂದಿನ ಶೋಕಾಸ್ ನೋಟಿಸ್‌ಗಳಿಗೆ ಪ್ರತಿಕ್ರಿಯೆಯಾಗಿ ಉತ್ತಮ ನಡವಳಿಕೆಯ ಭರವಸೆಯ ನೀಡಿದ್ದರೂ ಪಕ್ಷದ ಶಿಸ್ತನ್ನು ಮತ್ತೆ ಮತ್ತೆ ಉಲ್ಲಂಘಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.”
“ಈ ಹಿನ್ನಲೆಯಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ 6 ವರ್ಷಗಳ ಅವಧಿಗೆ ನಿಮ್ಮನ್ನು ಹೊರಹಾಕಲು ನಿರ್ಧರಿಸಲಾಗಿದೆ. ನೀವು ಇಲ್ಲಿಯವರೆಗೆ ಹೊಂದಿದ್ದ ಪಕ್ಷದ ಸ್ಥಾನದಿಂದ ನಿಮ್ಮನ್ನು ವಜಾ ಮಾಡಲಾಗಿದೆ,” ಎಂದು ಕೇಂದ್ರ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಅತ್ತ ಅಮಾನತು ಮಾಡುತ್ತಿದ್ದಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಯತ್ನಾಳ್ ಸತ್ಯವಂತರಿಗಿದು ಕಾಲವಲ್ಲ ದುಷ್ಟಜನರಿಗೆ ಸುಭಿಕ್ಷ ಕಾಲ || ಉಪಕಾರ ಮಾಡಿದರೆ ಅಪಕರಿಸುವ ಕಾಲ ಸಕಲವು ತಿಳಿದವಗೆ ದುರ್ಭಿಕ್ಷ ಕಾಲ. ಧರ್ಮ ಮಾಡುವಗೆ ನಿರ್ಮೂಲವಾಗುವ ಕಾಲ ಕರ್ಮಿ ಪಾತಕರಿಗೆ ಬಹು ಸೌಖ್ಯಕಾಲ ಸತ್ಯವಂತರಿಗಿದು ಕಾಲವಲ್ಲ ಎಂದು ಪುರಂದರ ದಾಸರ ಪದವನ್ನು ಬರೆದಿದ್ದಾರೆ.