ಮಂಗಳೂರಿನ ಬಜ್ಪೆಯಲ್ಲಿ ಹಿಂದೂ ಕಾರ್ಯಕರ್ತನ ಭೀಕರ ಹತ್ಯೆಯಾಗಿದೆ. ಮಂಗಳೂರು ಹೊರವಲಯದ ಬಜಪೆ ಕಿನ್ನಿಪದವು ಬಳಿ ಹಿಂದೂ ಕಾರ್ಯಕರ್ಕ ಸುಹಾಸ್ ಶೆಟ್ಟಿ ಅವರನ್ನು ಕೊಲೆ ಮಾಡಲಾಗಿದೆ.
ಕಿನ್ನಿಪದವು ಪೇಟೆಯಲ್ಲಿ ಮೀನಿನ ಪಿಕ್ ಅಪ್ ಮತ್ತು ಸುಹಾಸ್ ಶೆಟ್ಟಿ ಸಂಚರಿಸುತ್ತಿದ್ದ ಕಾರು ಮಧ್ಯೆ ಅಪಘಾತ ಸಂಭವಿಸಿ ಅದು ಪಕ್ಕದಲ್ಲಿದ್ದ ಅಂಗಡಿಗೆ ನುಗ್ಗಿತ್ತು. ಆ ಬಳಿಕ ಮಾತಿನ ಚಕಮಕಿ ನಡೆದು ಹೊಡೆದಾಟ ಆರಂಭವಾಗಿದೆ. ಈ ವೇಳೆ ಆರೋಪಿಗಳು ಮಾರಕಾಸ್ತ್ರದಿಂದ ಸುಹಾಸ್ ಶೆಟ್ಟಿ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಇನ್ನು ಮೃತ ಸುಹಾಸ್ ಶೆಟ್ಟಿ ಸುರತ್ಕಲ್ ನ ಫಾಝಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದರು. 2022ರ ಜುಲೈ 28ರಂದು ಸುರತ್ಕಲ್ ನಲ್ಲಿ ಫಾಝಿಲ್ ರನ್ನು ಕೊಲೆ ಮಾಡಲಾಗಿತ್ತು. ಈ ಕೇಸ್ ನಲ್ಲಿ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಇದೀಗ ಜಿದ್ದಿಗೆ ಸುಹಾಸ್ ರನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಇನ್ನು ಸುಹಾಸ್ ಕೊಲೆ ಹಿನ್ನೆಲೆ ಇಂದು ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಹಿಂದೂ ಸಂಘಟನೆಗಳು ಬಂದ್ ಗೆ ಕರೆ ಕೊಟ್ಟಿವೆ. ಮಂಗಳೂರಲ್ಲಿ ಬಸ್ ಸಂಚಾರ ಸ್ಥಗಿತವಾಗಿದ್ದು ಅಂಗಡಿ ಮುಂಗಟ್ಟು ಬಂದ್ ಆಗಿದೆ. ಅಲ್ಲಲ್ಲಿ ಬಸ್‌ಗಳಿಗೆ ಕಲ್ಲೆಸೆತವಾಗಿದ್ದು ಮಂಗಳೂರಿಗೆ ಎಡಿಜಿಪಿ ಆರ್. ಹಿತೇಂದ್ರ ಆಗಮಿಸಿದ್ದಾರೆ. ಬಹುತೇಕ ಬಂದ್‌ನ ವಾತಾವರಣ ನಿರ್ಮಾಣ ಹೀಗಿದ್ದರೂ ಮಂಗಳೂರಿನ ಯುನಿವರ್ಸಿಟಿ ಕಾಲೇಜು ಬಳಿ ಖಾಸಗಿ ಬಸ್ ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇತ್ತ ಜಿಲ್ಲೆಯಲ್ಲಿ ಮೇ 5 ರವರೆಗೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು 144 ಸೆಕ್ಷನ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಇನ್ನು ಬಜ್ಪೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಸಾವಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ. ಸ್.ಡಿಪಿ.ಐ, ಪಿ.ಎಫ್.ಐ ನಂತಹ ಮತಾಂಧ ಶಕ್ತಿಗಳ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಅವರಿಗೆ ಇನ್ನಷ್ಟು ದುಷ್ಕೃತ್ಯಕ್ಕೆ ಬೆಂಬಲಿಸಿದ್ದೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಕೂಡಲೇ ಪೊಲೀಸ್ ಇಲಾಖೆ ಹಂತಕರ ಹೆಡೆಮುರಿ ಕಾನೂನಿನ ಬಲೆಯೊಳಗೆ ತಂದು ನಿಲ್ಲಿಸಬೇಕು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.