ಬಳ್ಳಾರಿ; ನಟ ದರ್ಶನ್ ಆದಷ್ಟು ಬೇಗ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆಗಲಿ ಎಂದು ಅವರ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಅಲ್ಲದೇ ,ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ದರ್ಶನ್ ಅವರನ್ನು ನೋಡ್ಬೇಕು ಅಂತಾ ಪರಪ್ಪನ ಅಗ್ರಹಾರ ಜೈಲಿನ ಬಳಿ ಬರುತ್ತಲೇ ಇದ್ದಾರೆ. ದರ್ಶನ್ ಜೈಲು ಸೇರಿದಾಗಿನಿಂದ ಅವರ ಅಭಿಮಾನಿಗಳು ಬೇರೆ ಬೇರೆ ರೀತಿಯಲ್ಲಿ ಡಿ ಬಾಸ್ ಬಗ್ಗೆ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ಮೊನ್ನೆ ಅಭಿಮಾನಿಯೊಬ್ಬ ಹಣೆಯ ಮೇಲೆ ಡಿ ಬಾಸ್ ಅಂತಾ ಟ್ಯಾಟೂ ಹಾಕಿಸಿ ಕೊಂಡಿದ್ದಾನೆ.
ಇನ್ನು ಬಳ್ಳಾರಿಯಲ್ಲಿ ದರ್ಶನ್ ಅಭಿಮಾನಿಗಳು ಡಿ ಬಾಸ್ ಗಾಗಿ ಐತಿಹಾಸಿಕ ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ನಿನ್ನೆ ಶ್ರಾವಣ ಸೋಮವಾರ ಹಿನ್ನೆಲೆ ದರ್ಶನ್ ಜೈಲಿನಿಂದ ಬಿಡುಗಡೆಯಾಗುವಂತೆ ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದಾರೆ. ಬಳ್ಳಾರಿ ಜಿಲ್ಲೆ ಕುರುಗೋಡು ಪಟ್ಟಣದಲ್ಲಿರುವ ಐತಿಹಾಸಿಕ ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ದರ್ಶನ್ ಗಾಗಿ ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ.
ಬಸವೇಶ್ವರ ಮೂರ್ತಿಯ ಕೆಳಗೆ ದರ್ಶನ್ ಅವರ ಐದು ಪೋಟೋಗಳನ್ನ ಇರಿಸಿ ವಿಶೇಷ ಪೂಜೆ ಮಾಡಿಸಿದ್ದಾರೆ ಅಭಿಮಾನಿಗಳು.ದೇವರ ಮೂರ್ತಿ ಜೊತೆ ದರ್ಶನ್ ಪೋಟೋ ಇರಿಸಿದ್ದು ಈಗ ಚರ್ಚೆಗೆ ಕೂಡ ಗ್ರಾಸವಾಗಿದೆ.ದರ್ಶನ್ ವಿವಿಧ ಭಂಗಿಯಲ್ಲಿ ನಿಂತಿರುವ ಪೋಟೋಗಳನ್ನ ದೇವರ ಜೊತೆ ಇಟ್ಟು ಪೂಜೆ ಮಾಡಿದ್ದಾರೆ ಅರ್ಚಕ.ಬಳಿಕ ದೇವರ ಜೊತೆ ಪೋಟೊಗಳಿಗೂ ಅರ್ಚಕ ಮಂಗಳಾರತಿ ಮಾಡಿದ್ದಾರೆ. ಸದ್ಯ ಇದು ಭಾರೀ ಚರ್ಚೆಗೆ ಕಾರಣವಾಗಿದೆ.ಈ ರೀತಿ ಹುಚ್ಚು ಅಭಿಮಾನವನ್ನು ವ್ಯಕ್ತಪಡಿಸೋದು ಎಷ್ಟರಮಟ್ಟಿಗೆ ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
ಮಾವ ದರ್ಶನ್ ಶೀಘ್ರ ಬಿಡುಗಡೆಯಾಗಲಿ ಎಂದು ದೇವಸ್ಥಾನ ಸುತ್ತುತ್ತಿದ್ದಾರೆ ಅಳಿಯ ಚಂದನ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ ಹತ್ತಿರ ಹತ್ತಿರ 2 ತಿಂಗಳಾಗುತ್ತಾ ಬಂತು.ದರ್ಶನ್ ಅವರು ಅರೆಸ್ಟ್ ಆದಾಗಿನಿಂದ ಅವರನ್ನು ಹೊರಗಡೆ ತರಲು ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್, ಸಹೋದರ ದಿನಕರ್ ತೂಗುದೀಪ ಅವರು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಆಗಾಗ್ಗೆ ಜೈಲಿಗೆ ಭೇಟಿ ನೀಡುತ್ತಲೇ ಇದ್ದಾರೆ. ಇನ್ನು ದರ್ಶನ್ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆದಾಗಿನಿಂದ ವಿಜಯಲಕ್ಷ್ಮೀ ದರ್ಶನ್ ಆಗಾಗ್ಗೆ ಬಂದು ಭೇಟಿ ಮಾಡುತ್ತಲೇ ಇದ್ದಾರೆ. ವಿಜಯಲಕ್ಷ್ಮೀ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಬಂದಾಗೆಲ್ಲಾ ಬಹುತೇಕ ಸಂದರ್ಭದಲ್ಲಿ ದರ್ಶನ್ ಅವರ ಸಹೋದರಿ ದಿವ್ಯ ಅವರ ಪುತ್ರ ಚಂದನ್ ವಿಜಯಲಕ್ಷ್ಮೀ ದರ್ಶನ್ ಅವರ ಜೊತೆ ಜೈಲಿಗೆ ಬಂದು ಮಾವನನ್ನು ಭೇಟಿ ಮಾಡಿ ಧೈರ್ಯ ತುಂಬುತ್ತಲೇ ಇದ್ದಾರೆ. ದರ್ಶನ್ ಅವರು ಜೈಲಿಗೆ ಶಿಫ್ಟ್ ಆಗುವ ದಿನ ಕೂಡ ಚಂದನ್ ದರ್ಶನ್ ಅವರನ್ನು ಪೊಲೀಸ್ ವಾಹನದ ಹೊರಗಿನಿಂದ ನೋಡುತ್ತಾ ಭಾವುಕರಾಗಿ ನಿಂತಿದ್ದರು. ಮಾವನಿಗೆ ಚಂದನ್ ಆಗಾಗ್ಗೆ ದೇವಸ್ಥಾನಕ್ಕೂ ಭೇಟಿ ನೀಡುತ್ತಲೇ ಇದ್ದಾರೆ. ಮೊನ್ನೆ ಮಾವ ದಿನಕರ್ ಅವರ ಜೊತೆ ಆಷಾಢ ಶುಕ್ರವಾರ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು.
ಇದೀಗ ಮಾವ ದರ್ಶನ್ ಗಾಗಿ ಚಂದನ್ ಮತ್ತೆ ಟೆಂಪಲ್ ರನ್ ನಡೆಸುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿರುವ ಆರತಿ ಉಕ್ಕಡ ದೇಗುಲಕ್ಕೆ ಚಂದನ್ ಭೇಟಿ ಕೊಟ್ಟಿದ್ದಾರೆ. ಆರತಿ ಉಕ್ಕಡದಲ್ಲಿ ದರ್ಶನ್ ಅಳಿಯ ಚಂದನ್ ಮಾವನಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆದಷ್ಟು ಬೇಗ ಮಾವ ಸಂಕಷ್ಟದಿಂದ ಪಾರಾಗಲಿ ಎಂದು ಬೇಡಿಕೊಂಡಿದ್ದಾರೆ.