ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾಗಿರುವ ನಟ ದರ್ಶನ್ ತೂಗುದೀಪ ಮತ್ತು ಪವಿತ್ರಾ ಗೌಡ ಸೇರಿದಂತೆ ಹದಿಮೂರು ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ನ್ಯಾಯಾಧೀಶ ವಿಶ್ವನಾಥ ಸಿ. ಗೌಡರ್ ಅವರ ಮುಂದೆ ಇಂದು ಎಲ್ಲಾ ಆರೋಪಿಗಳನ್ನು ಹಾಜರುಪಡಿಸಲಾಗಿತ್ತು
ಎಲ್ಲಾ ಕಡೆ ಮಹಜರು ನಡೆಸಬೇಕಾಗಿರುವ ಕಾರಣದಿಂದ ವಿಚಾರಣೆಗಾಗಿ ಹದಿನಾಲ್ಕು ದಿನಗಳ ಕಾಲ ಆರೋಪಿಗಳನ್ನು ತಮ್ಮ ಕಸ್ಟಡಿಗೆ ನೀಡುವಂತೆ ಪೊಲೀಸರು ಕೇಳಿದ್ದರು. ಆದರೆ ಪೊಲೀಸ್ ಕಸ್ಟಡಿ ಅಗತ್ಯವಿಲ್ಲ ಎಂದು ಆರೋಪಿ ದರ್ಶನ್ ಪರ ವಕೀಲರು ವಾದಿಸಿದ್ದರು.
ವಿಚಾರಣೆ ವೇಳೆ ವಕೀಲರನ್ನು ನೇಮಿಸಿಕೊಳ್ಳುವ ಬಗ್ಗೆ ನ್ಯಾಯಾಧೀಶರು ಅರೋಪಿಗಳನ್ನು ಪ್ರಶ್ನೆ ಮಾಡಿದ್ದು, ನ್ಯಾಯಾಧೀಶರ ಮುಂದೆ ನಟ ದರ್ಶನ್ ಮತ್ತು ನಟಿ ಪವಿತ್ರಾ ಗೌಡ ಇಬ್ಬರೂ ಕಣ್ಣೀರು ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಮೊದಲ ಆರೋಪಿಯಾಗಿದ್ದು, ನಟ ದರ್ಶನ್ ಎರಡನೇ ಆರೋಪಿಯಾಗಿದ್ದಾರೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ವೇಳೆ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದರ್ಶನ್ ಅಭಿಮಾನಿಗಳು ಜಮಾಯಿಸಿದ್ದರು.
ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಮುನ್ನ ದರ್ಶನ್, ಪವಿತ್ರಾ ಗೌಡ ಹಾಗೂ ಉಳಿದ ಹನ್ನೊಂದು ಆರೋಪಿಗಳಿಗೂ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಶಿವಾಜಿನಗರದಲ್ಲಿರುವ ಲೇಡಿ ಕರ್ಜನ್ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಯಿತು.
ಈ ಮಧ್ಯೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಸಮೀಪ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಹಿನ್ನೆಲೆಯಲ್ಲಿ ಬೌರಿಂಗ್ ಆಸ್ಪತ್ರೆ ಮತ್ತು ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಅತ್ತ ಹತ್ಯೆಗೊಳಗಾಗಿರುವ ರೇಣುಕಾಸ್ವಾಮಿ ಅಂತ್ಯಕ್ರಿಯೆಗೆ ಚಿತ್ರದುರ್ಗದಲ್ಲಿ ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದು, ಜೋಗಿಮಟ್ಟಿ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಇಂದು ರಾತ್ರಿಯೇ ಅಂತ್ಯಸಂಸ್ಕಾರ ನಡೆಯಲಿದೆ ಎನ್ನಲಾಗಿದೆ.
ನಟ ದರ್ಶನ್ ರನ್ನು ಜಿಮ್ ನಿಂದಲೇ ವಶಕ್ಕೆ ಪಡೆದ ಪೊಲೀಸರು
ಇಂದು ಬೆಳಗ್ಗೆ 6.30 ಕ್ಕೆ ಜಿಮ್‌ಗೆ ತೆರಳಿದ್ದ ದರ್ಶನ್, 8.30ರ ವೇಳೆಗೆ ವರ್ಕೌಟ್ ಮುಗಿಸಿ ತಾವು ಉಳಿದುಕೊಂಡಿದ್ದ ಹೋಟೆಲ್ ಬಳಿ ಬರುತ್ತಿದ್ದಂತೆಯೇ ಪೊಲೀಸರ ವಶಕ್ಕೊಳಗಾಗಿದ್ದಾರೆ.
ಮೈಸೂರಿನ ಲಲಿತ್ ಮಹಲ್ ಹೋಟೆಲ್ ನಲ್ಲಿ ದರ್ಶನ್ ಅಭಿನಯದ ಡೇವಿಲ್ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರತಂಡದ ವತಿಯಿಂದಲೇ ದರ್ಶನ್ ಗೆ ರ‌್ಯಾಡಿಸನ್ ಬ್ಲ್ಯೂ ಹೋಟೆಲ್ ನಲ್ಲಿ ಕೊಠಡಿ ಕಾಯ್ದಿರಿಸಲಾಗಿತ್ತು. ಜೂನ್ 9 ರಿಂದಲೇ ದರ್ಶನ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು.
ತಮ್ಮ ಕೆಎ 01 ಎಂವೈ 7999 ನೋಂದಣಿ ಸಂಖ್ಯೆಯ ರೇಂಜ್ ರೋವರ್ ಡಿಫೆಂಡರ್ ಕಾರಿನಲ್ಲಿ ರ‌್ಯಾಡಿಸನ್ ಬ್ಲ್ಯೂ ಹೋಟೆಲ್ ಗೆ ದರ್ಶನ್ ಬಂದಿದ್ದು, ಕಾರು ಇನ್ನೂ ಹೋಟೆಲ್ ಪ್ರವೇಶದ್ವಾರದಲ್ಲಿಯೇ ನಿಲ್ಲಿಸಲ್ಪಟ್ಟಿದೆ. ಅರೆಸ್ಟ್ ಮಾಡಿದ ಬಳಿಕ ಪೊಲೀಸರು ತಮ್ಮ ಜೀಪ್ ನಲ್ಲೇ ದರ್ಶನ್ ರನ್ನು ಮೈಸೂರಿನಿಂದ ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ಈ ಮಧ್ಯೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಘು ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧನ ಮಾಡಿದ್ದಾರೆ. ದರ್ಶನ್ ಕರೆಯ ಹಿನ್ನೆಲೆಯಲ್ಲಿ ಹತ್ಯೆಗೊಳಗಾದ ರೇಣುಕಾಸ್ವಾಮಿಯನ್ನು ರಘು
ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದೊಯ್ದಿದ್ದ ಎಂದು ಹೇಳಲಾಗಿದೆ.