ಮೈಸೂರು,; ಬಿಜೆಪಿ ಹಾಗೂ ಜೆಡಿಎಸ್ ನ ಮಾಡಿರುವ ಸುಳ್ಳು ಆರೋಪಗಳಿಗೆ ನಾನು ಭಯಪಡಲ್ಲ. ಎಲ್ಲಾ ಸುಳ್ಳು ಆರೋಪಗಳ ವಿರುದ್ಧ ರಾಜಕೀಯ ಹಾಗೂ ಕಾನೂನು ಹೋರಾಟಕ್ಕೆ ರೆಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಹಾಗೂ ಜೆಡಿಎಸ್ಗೆ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಹಾಗೂ ಜೆಡಿಎಸ್ ನ ಆರೋಪಗಳ ಬಗ್ಗೆ ಸರ್ಕಾರದ ಮುಂದಿನ ನಡೆಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.
ಜೆಡಿಎಸ್ ಹಾಗೂ ಬಿಜೆಪಿಯ ಪಾದಯಾತ್ರೆಗೆ ಪ್ರತ್ಯುತ್ತರವಾಗಿ ಕಾಂಗ್ರೆಸ್ ಬೃಹತ್ ಜನಾಂದೋಲನವನ್ನು ಮಾಡಿದೆ. ಬಿಜೆಪಿ ಹಾಗೂ ಜೆಡಿಎಸ್ ನವರು ಸುಳ್ಳುಆರೋಪಗಳನ್ನು ಆಧರಿಸಿ ಮಾಡುತ್ತಿರುವ ಪಾದಯಾತ್ರೆ ಮಾಡುತ್ತಿದ್ದು, ಸಿದ್ದರಾಮಯ್ಯನಿಗೆ ಕಪ್ಪು ಬಳಿಯಲು ಪ್ರಯತ್ನಿಸುತ್ತಿದ್ದಾರೆ. ಅವರ ಆರೋಪಗಳು ಸುಳ್ಳು ಎಂದು ಜನರಿಗೆ ಮನವರಿಕೆ ಮಾಡಲು ಜನಾಂದೋಲನ ಮಾಡಲಾಗಿದೆ ಎಂದರು. ರಾಜಕೀಯವಾಗಿ ಮಣಿಸಲು ಬಿಜೆಪಿ ಜೆಡಿಎಸ್ ತಂತ್ರ:
ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿರುವ ಸರ್ಕಾರವನ್ನು ಅಸ್ಥಿರಗೊಳಿಸಲು ಸಂಚು ಹೂಡಿದ್ದಾರೆ. ಸುಳ್ಳು ಆರೋಪಗಳಿಂದ ನನ್ನ ಮೇಲೆ ಕಪ್ಪು ಬಳಿದರೆ, ರಾಜಕೀಯವಾಗಿ ನನ್ನನ್ನು ಮಣಿಸಿ ಲಾಭ ಪಡೆಯಬಹುದು ಎಂಬ ಭ್ರಮೆಯಲ್ಲಿದ್ದಾರೆ. ಬಿಜೆಪಿ ಜೆಡಿಎಸ್ ನವರ ಹಗರಣಗಳು ಬೇಕಾದಷ್ಟಿದ್ದು ಅವುಗಳನ್ನು ಬಯಲಿಗೆಳೆಯುತ್ತೇವೆ. ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ, ಯಡಿಯೂರಪ್ಪ ಸೇರಿದಂತೆ ಹಲವರ ಮೇಲೆ ಇರುವ ಹಗರಣಗಳ ವಿರುದ್ಧ ತನಿಖೆ ಕೈಗೊಳ್ಳಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಿಜೆಪಿ ಜೆಡಿಎಸ್ ಸುಳ್ಳು ಆರೋಪಗಳ ವಿರುದ್ಧ ಹೋರಾಟ:
ಇನ್ನು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವವರೆಗೂ ಹೋರಾಟ ಮುಂದುವರೆಸುವುದಾಗಿ ಬಿಜೆಪಿ ಜೆಡಿಎಸ್ ನಾಯಕರು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸುಳ್ಳು ಆರೋಪಗಳನ್ನಾಧರಿಸಿದ ಹೋರಾಟಗಳಿಗೆ ನಾನು ಹೆದರುವುದಿಲ್ಲ. ಬಿಜೆಪಿ ಜೆಡಿಎಸ್ ನ ಹೋರಾಟದ ಸತ್ಯಾಸತ್ಯತೆಗಳು ಜನರಿಗೆ ತಿಳಿದಾಗ , ಅವರೇ ಈ ಹೋರಾಟನ್ನು ಹತ್ತಿಕ್ಕುತ್ತಾರೆ. ಸರ್ಕಾರ ಹಾಗೂ ನನ್ನ ಮೇಲೆ ಬಂದಿರುವ ಆರೋಪಗಳನ್ನು ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಹೋರಾಡುತ್ತೇವೆ ಎಂದು ತಿಳಿಸಿದರು.
ಚಾಮುಂಡಿ ಬೆಟ್ಟಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಇನ್ನು ಸಿಎಂ ಸಿದ್ದರಾಮಯ್ಯ ಅವರು ಇಂದು ಶ್ರಾವಣ ಶನಿವಾರದ ಪ್ರಯುಕ್ತ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದರು. ಈ ವೇಳೆ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.