ಬೆಂಗಳೂರು; ಸಿದ್ದರಾಮಯ್ಯ ನವೆಂಬರ್ ನಲ್ಲಿ ಸಿಎಂ ಸ್ಥಾನ ಬಿಡಬೇಕಾಗಬಹುದು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಬಂದು 20 ತಿಂಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಇದನ್ನು ಕಾಂಗ್ರೆಸ್ ಶಾಸಕರೇ ಒಪ್ಪಿಕೊಂಡಿದ್ದಾರೆ. ರಾಜ್ಯ ಸುಭದ್ರವಾಗಿರಬೇಕಾದರೆ ಕಾನೂನು ಸುವ್ಯವಸ್ಥೆ ಸರಿಯಾಗಿರಬೇಕು. ಆದರೆ ರಾಜ್ಯದಲ್ಲಿ ಬ್ಯಾಂಕ್ ದರೋಡೆಗಳು, ಗೋವುಗಳ ಕೆಚ್ಚಲು ಕೊಯ್ಯುವುದು, ಹೊಟ್ಟೆ ಸೀಳುವುದು, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಕರ್ನಾಟಕದಲ್ಲಿ ಗೃಹ ಇಲಾಖೆಯನ್ನು ಯಾರು ನೋಡುತ್ತಾರೆ ಅನ್ನೋದೇ ಡೌಟ್ ಆಗಿದೆ. ರಾಜ್ಯದಲ್ಲಿ ಕಾನೂನು ಸುವವ್ಯಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಬೆಳಗಾವಿಯಲ್ಲಿ ದೊಡ್ಡ ಅಧಿವೇಶನ ಮಾಡಿದರು. ಅಷ್ಟು ದೊಡ್ಡ ಅಧಿವೇಶನ ಮಾಡಲು ದುಡ್ಡು ಎಲ್ಲಿಂದ ಬಂತು? ಬ್ಯಾನರ್ ಗಳು, ಬಸ್ ಗಳು, ಊಟ ಇದಕ್ಕೆಲ್ಲಾ ದುಡ್ಡು ಎಲ್ಲಿಂದ? 60 ಪರ್ಸೆಂಟ್ ಕಮಿಷನ್ ಪಡೆದಿರೋದನ್ನು ರಾಜ್ಯ ಸರ್ಕಾರ ಅಧಿವೇಶನಕ್ಕೆ ಬಳಕೆ ಮಾಡಿದೆ. ಇದು 60 ಪರ್ಸೆಂಟ್ ಕಮಿಷನ್ ಸರ್ಕಾರ. ತೆರಿಗೆ ಏರಿಕೆ, ಹಾಲು, ನೀರು, ಪೆಟ್ರೋಲ್, ಸ್ಯ್ಟಾಂಪ್ ಪೇಪರ್ ದರ, ಬಸ್ ಟಿಕೆಟ್ ದರ ಏರಿಕೆಯಾಗಿದೆ. ಈಗ ಮೆಟ್ರೋ ಟಿಕೆಟ್ ದರ ಮಾಡಲು ಹೊರಟಿದ್ದಾರೆ. ಎಲ್ಲವನ್ನು ಏರಿಕೆ ಮಾಡಿದೆ. ಮತ್ತೆ ಆರು ತಿಂಗಳಿಗೊಮ್ಮೆ ಬಜೆಟ್ ಮಾಡಿ ಮತ್ತೆ ಏರಿಕೆ ಮಾಡುತ್ತಾರೆ. ಸರ್ಕಾರ ಬರುವ ಮುಂಚೆ ನಾವು ಯಾವ ತೆರಿಗೆಯನ್ನು ಏರಿಕೆ ಮಾಡಲ್ಲ ಎಂದು ಹೇಳಿ 5 ಗ್ಯಾರಂಟಿಗಳನ್ನು ನೀಡಿತ್ತು.ಈಗ ಎಲ್ಲಾ ತೆರಿಗೆಗಳನ್ನು ಏರಿಕೆ ಮಾಡಿ, ಜನರ ತಲೆ ಮೇಲೆ ಸರ್ಕಾರ ದೊಡ್ಡ ಹೊರ ಹಾಕ್ತಿದೆ. ಈಗ ಮತ್ತೆ 1 ಲಕ್ಷ ಕೋಟಿಯಷ್ಟು ಸಾಲ ಮಾಡಲು ಹೊರಟಿದ್ದಾರೆ ಎಂದರು.
ನಾವಿದ್ದಾಗ ಬಸವರಾಜ್ ಬೊಮ್ಮಾಯಿ ಅವರು ಬಜೆಟ್ ಮಂಡಿಸಿದ್ದಾಗ ಯಾವುದೇ ತೆರಿಗೆ ಹಾಗದೇ ಬಜೆಟ್ ಮಂಡಿಸಲಾಗಿತ್ತು. 25 ಸಾವಿರ ಕೋಟಿಯಷ್ಟು ಸಾಲ ಪಡೆಯಲು ಅವಕಾಶ ಇದ್ದರೂ ರಾಜ್ಯದ ಜನರ ಮೇಲೆ ಹೊರೆ ಬರಬಾರದು ಎಂದು ಲೋನ್ ತೆಗೆದುಕೊಂಡಿಲ್ಲ. ಆದರೆ ಇವರು ಸಾಲಗಾರ ರಾಜ್ಯ ಮಾಡಲು ಹೊರಟಿದ್ದಾರೆ. ಹೀಗೆ ಮಾಡಿದರೆ ಕೇರಳ ಭಿಕ್ಷೆ ಬೇಡುವ ಸ್ಥಿತಿ ಬಂದಂತೆ ನಮ್ಮ ರಾಜ್ಯವೂ ಆಗುತ್ತದೆ. ಸಿಎಂ ಸಿದ್ದರಾಮಯ್ಯ ಅವರು ಔಟ್ ಗೋಯಿಂಗ್ ಸಿಎಂ. ಅವರು ನವೆಂಬರ್ ನಲ್ಲಿ ಸಿಎಂ ಸ್ಥಾನ ಬಿಡಬೇಕಾಗಬಹುದು. ಹಾಗಾಗಿ ಅವರಿಗೂ ಆಸಕ್ತಿ ಇಲ್ಲ. ಒಳ ಜಗಳ ನಡೆಯುತ್ತಿದೆ. ವಿರೋಧ ಪಕ್ಷ ಹೀಗಿದ್ದರೂ ನಡೆಯುತ್ತದೆ. ಆದರೆ ಆಡಳಿತ ಪಕ್ಷ ಅಧ್ವಾನ ಎದ್ದರೆ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತದೆ. ಸರ್ಕಾರ ಕೋಮ ಸ್ಟೇಜ್ ನಲ್ಲಿದೆ. ದಿನನಿತ್ಯ ಅಭಿವೃದ್ಧಿ ಆಗುತ್ತಿಲ್ಲ ಎಂದು ಒಬ್ಬೊಬ್ಬ ಶಾಸಕ ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಕಾಂಗ್ರೆಸ್ ಸಭೆಯಲ್ಲಿ ಗಲಾಟೆಗಳು ಆಗಿವೆ ಎಂಬ ಸುದ್ದಿ ಮಾಧ್ಯಮದಲ್ಲೂ ಬಂದಿದೆ. ಈ ಸರ್ಕಾರ ತೊಲಗಿದ್ರೆ ಸಾಕು ಎಂಬ ಯೋಚನೆಯಲ್ಲಿದ್ದಾರೆ ಜನ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಚುನಾವಣೆ ನಡೆಯುತ್ತಿರೋದರಿಂದ ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಪಟ್ಟಂತೆ ಗೊಂದಲ ಉಂಟಾಗಿದೆ. ಚುನಾವಣೆ ಮುಗಿದ ಬಳಿಕ ಎಲ್ಲವೂ ಸರಿಯಾಗುತ್ತದೆ. ಕೇಂದ್ರ ನಾಯಕರು ಇದೆಲ್ಲವನ್ನು ಗಮನಿಸಿದ್ದಾರೆ. ಇನ್ನು 15 ದಿನಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲೇ ಬೇಕು. ಶ್ರವಣ್ ಅವರು ಚುನಾವಣಾ ಉಸ್ತುವಾರಿಯಾಗಿದ್ದಾರೆ. ಅವರು ಬಂದ್ಮೇಲೆ ಯಾರು ಎಂದು ಘೋಷಣೆ ಮಾಡುತ್ತಾರೆ. ಆಮೇಲೆ ಎಲ್ಲರೂ ಜೊತೆಯಾಗಿ ಹೋಗಬೇಕು. ವಿಜಯೇಂದ್ರ ವಿರುದ್ಧ ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಿ ಈಗಾಗಲೇ ಹೈಕಮಾಂಡ್ ಅವರು ನೋಟಿಸ್ ಕೊಟ್ಟಿದ್ದಾರೆ. ರಾಷ್ಟ್ರೀಯ ನಾಯಕರು ಹಾಗೂ ಹೈಕಮಾಂಡ್ ಬಿಗಿಯಾದ ನಿಲುವನ್ನು ಕೈಗೊಳ್ಳುತ್ತಿದ್ದಾರೆ. ಬಿಜೆಪಿ ಪ್ರಜಾಪ್ರಭುತ್ವದ ಪಾರ್ಟಿ. ಹೇಳಿಕೆಗಳನ್ನು ಕೊಡುವಾಗ ನಾಲ್ಕು ಗೋಡೆಗಳ ಮಧ್ಯೆ ನೀಡಬೇಕು. ಹೊರಗಡೆ ಯಾರೇ ಕೊಟ್ರೂ ಅದು ಪಕ್ಷದ ವಿರೋಧವಾಗುತ್ತದೆ.ಯಾರೇ ಕೊಟ್ರು ತಪ್ಪೇ. ಅದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂದು ಸ್ಪಷ್ಟಪಡಿಸಿದರು.