ಬೆಂಗಳೂರು: ತಾವೂ ಕೂಡ ಪಕ್ಷಪಾತಿ, ಅಧಿಕಾರಕ್ಕೆ ಅಂಟಿ ಕೂರುವವ ಅಂತ ಸಿದ್ದರಾಮಯ್ಯ ಸಾಬೀತು ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ರಾಜ್ಯ ಸರ್ಕಾರದಿಂದ ವಿಪಕ್ಷ ಶಾಸಕರಿಗೆ ಕಡಿಮೆ ಅನುದಾನ ವಿಚಾರದ ಬಗ್ಗೆ ಮಾತನಾಡಿದ ಅವರು ಸಿದ್ದರಾಮಯ್ಯ ಕೀಳು ಮಟ್ಟದ ತೀರ್ಮಾನ ತೆಗೆದುಕೊಂಡಿದ್ದಾರೆ. ನಾನು ದೊಡ್ಡ ರಾಜಕಾರಣಿ, ಎರಡು ಸಲ ಸಿಎಂ ಆಗಿದ್ದೇನೆ ಅಂತ ಜಂಭ ಕೊಚ್ಚಿಕೊಳ್ಳುವುದನ್ನು ಸಿಎಂ ಬಿಡಬೇಕು. ತಾವೂ ಕೂಡ ಪಕ್ಷಪಾತಿ, ಅಧಿಕಾರಕ್ಕೆ ಅಂಟಿ ಕೂರುವವ ಅಂತ ಸಿದ್ದರಾಮಯ್ಯ ಸಾಬೀತು ಮಾಡಿದ್ದಾರೆ. ಖಜಾನೆ ಖಾಲಿ ಇದ್ದರೂ ಶಾಸಕರ ಮೂಗಿಗೆ ತುಪ್ಪ ಸವರಿದ್ದಾರೆ. ಎಲ್ಲಾ 224 ಶಾಸಕರ ಮೇಲೆ, ಜನರ ಮೇಲೆ ವಿಶ್ವಾಸ ಇರಲಿ. ಈ ಮೂಲಕ ಸಿದ್ದರಾಮಯ್ಯ ಖಳನಾಯಕ ಆಗಬಾರದು. ಸಿದ್ದರಾಮಯ್ಯನವರಂತಹ ಬುದ್ಧಿವಂತರು ಅನುದಾನ ಕೊಡದಷ್ಟು ಸಣ್ಣತನ ತೋರಬಾರದು. ಸಿದ್ದರಾಮಯ್ಯ ತಮ್ಮ ನಿರ್ಣಯ ಪುನರ್ ಪರಿಶೀಲಿಸಲಿ. ಎಲ್ಲಾ ಶಾಸಕರಿಗೂ ಸಮಾನ ಅನುದಾನ ಕೊಡಲಿ, ಸಮಾನತೆ ಕಾಪಾಡಲಿ ಎಂದಿದ್ದಾರೆ.
ಮೈಸೂರಿನಲ್ಲಿ ಸಿಎಂ ಸಾಧನಾ ಸಮಾವೇಶ ವಿಚಾರದ ಬಗ್ಗೆ ಮಾತನಾಡಿದ ಅವರು ಏನು ಸಾಧನೆ ಮಾಡಿದ್ದಾರೆ ಅಂತ ಸಾಧನಾ ಸಮಾವೇಶ ಮಾಡುತ್ತಾರೆ?. ಅವರ ಸಚಿವ ಸಂಪುಟ ಅರೆಬೆತ್ತಲೆ ಆಗಿದೆ, ಖಜಾನೆ ಖಾಲಿಯಾಗಿದೆ. ಇವರು ಏನೂ ಅಭಿವೃದ್ಧಿ ಮಾಡುತ್ತಿಲ್ಲ, ಇವರದ್ದು ಶೂನ್ಯ ಸಾಧನೆ. ಕೇಂದ್ರದಿಂದ ಏನು ಬರುತ್ತಿದೆಯೋ ಅದು ಅಷ್ಟೇ ಸಾಧನೆ ಎಂದು ಹೇಳಿದ್ದಾರೆ.
ಜಮೀರ್ ಅಹಮದ್ ಸಚಿವರಾಗಿರುವ ವಸತಿ ಇಲಾಖೆಯಲ್ಲಿ ಅಕ್ರಮ ಆರೋಪ ವಿಚಾರದ ಬಗ್ಗೆ ಮಾತನಾಡಿ ಜಮೀರ್ ಅಹಮದ್ ಒಬ್ಬ ಅಲ್ಪಸಂಖ್ಯಾತರ ನಾಯಕ. ಅವರು ಏನೇ ಮಾಡಿದರೂ, ಮಾಡದೇ ಹೋದರೂ ಕಾಂಗ್ರೆಸ್‌ನವರಿಗೆ ಅವನೇ ಭಗವದ್ಗೀತೆ, ಅವನೇ ಏಸು ಕ್ರಿಸ್ತ, ಅವನೇ ಅಲ್ಲಾಹ್. ಹಾಗಾಗಿ ಜಮೀರ್ ಅಹಮದ್ ಗೆ ನಾವೇನೇ ಹೇಳಿದರೂ ಕೂಡಾ ಸಿದ್ದರಾಮಯ್ಯ ಕೈ ಬಿಡಲ್ಲ, ಅವರ ಹೈಕಮಾಂಡ್ ಕೂಡಾ ಬಿಡಲ್ಲ. ಜಮೀರ್ ಅಹಮದ್ ವೋಟ್ ಬ್ಯಾಂಕ್ ಇಟ್ಟುಕೊಂಡಿದ್ದಾರೆ. ಇದಕ್ಕೆ ಉತ್ತರ ಮುಂದೆ ಜನ ಕೊಡುತ್ತಾರೆ ಎಂದು ತಿಳಿಸಿದ್ದಾರೆ.
ಸೋಮಣ್ಣ ಪುತ್ರ ಅರುಣ್ ಸೋಮಣ್ಣ ರಾಜಕೀಯ ಪ್ರವೇಶ ವಿಚಾರದ ಬಗ್ಗೆ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಅರುಣ್ ರಾಜಕೀಯ ಪ್ರವೇಶ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ಅವರಿಗೂ ಒಳ್ಳೆಯ ಭವಿಷ್ಯ ಸಿಗಲಿದೆ. ನನ್ನ ಮಗ ಅಂತ ಅಲ್ಲ, ಅವರ ನಡವಳಿಕೆ ಅಷ್ಟು ಚೆನ್ನಾಗಿ ಆಗುತ್ತದೆ. ಅವರ ರಾಜಕೀಯ ಪ್ರವೇಶ ಆಗುತ್ತದೆ. ಎಲ್ಲಿಂದ ರಾಜಕೀಯ ಪ್ರವೇಶ ಮಾಡುತ್ತಾರೋ ಗೊತ್ತಿಲ್ಲ. ಅದನ್ನೆಲ್ಲಾ ಪಕ್ಷ ಗಮನಿಸುತ್ತದೆ. ಪಕ್ಷ ತೀರ್ಮಾನ ಮಾಡುತ್ತದೆ ಎಂದಿದ್ದಾರೆ.
ಇನ್ನು ಇಂದು ಕೇಂದ್ರ ಸಚಿವ ವಿ. ಸೋಮಣ್ಣ ಹುಟ್ಟುಹಬ್ಬ ಹಿನ್ನೆಲೆ ಬೆಂಗಳೂರಿನ ನಿವಾಸದಲ್ಲಿ ಬೆಂಬಲಿಗರೊಂದಿಗೆ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡ್ರು. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸೋಮಣ್ಣ ಒಡಿಶಾದ ಪುರಿ ಜಗನ್ನಾಥ ದೇವಸ್ಥಾನಕ್ಕೆ ತೆರಳಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೋಮಣ್ಣ ಹೆಸರು ಕೇಳಿ ಬಂದ ವಿಚಾರದ ಬಗ್ಗೆ ಮಾತನಾಡಿದ ಅವರು ಎರಡು ಕಡೆ ಸೋತವನಿಗೆ ಮೂರನೇ ಕಡೆ ಟಿಕೆಟ್ ಕೊಟ್ಟರು. ತುಮಕೂರು ಜನ ನನ್ನ ಕೈಹಿಡಿದರು. ಕೇಂದ್ರದಲ್ಲಿ ಮಂತ್ರಿಯಾಗಿದ್ದೇನೆ, ಜನ ವಿಶ್ವಾಸಕ್ಕೆ ಋಣಿ. ಪಕ್ಷ ನಮ್ಮೆಲ್ಲರಿಗಿಂತ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು. ಪ್ರಧಾನಿಯವರು ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಮಾಹಿತಿ ಇಲ್ಲ. ಅಂತಹ ಸಂದರ್ಭ ಬಂದಾಗ ಹೈಕಮಾಂಡ್ ನವರಿಗೆ ಯಾರ್ಯಾರಿಗೆ ಯಾವ್ಯಾವ ಸ್ಥಾನ ಕೊಡಬೇಕು ಅಂತ ಗೊತ್ತಿದೆ. ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಈ ವಿಷಯದಲ್ಲಿ ಯಾರ್ಯಾರು ಶಾಸಕರು ನನ್ನ ಪರ ಮಾತಾಡಿದ್ದಾರೋ ಅವರಿಗೆಲ್ಲಾ ನಾನು ಅಭಾರಿ ಆಗಿದ್ದೇನೆ. ಪಕ್ಷದಲ್ಲಿ ಎಷ್ಟು ಬಣ ಇದೆಯೋ ಗೊತ್ತಿಲ್ಲ, ಒಳ್ಳೆಯತನಕ್ಕೆ ಮಾತ್ರ ಬೆಲೆ ಸಿಗುವುದು. ಯಾರೇ ಆಗಲೀ ನಾನು ಎನ್ನುವುದನ್ನು ಬಿಡಬೇಕು ಎಂದು ಹೇಳಿದ್ದಾರೆ.
ಕೊಲೆ ಪ್ರಕರಣದಲ್ಲಿ ಶಾಸಕ ಭೈರತಿ ಬಸವರಾಜ್ ವಿರುದ್ಧ ಎಫ್ ಐಆರ್ ವಿಚಾರದ ಬಗ್ಗೆ ಮಾತನಾಡಿ ಅವರು ಆರೋಪಿಯೇ ಹೊರತು ಅಪರಾಧಿ ಅಲ್ಲ. ಅವರು ನನಗೆ ಹತ್ತಾರು ವರ್ಷಗಳಿಂದ ಪರಿಚಯ. ಅವರು ಆ ತರಹದ ಅವಿವೇಕದ ಕೆಲಸ ಮಾಡುವವರಲ್ಲ. ಇಷ್ಟು ಕೀಳುತನಕ್ಕೆ ಅವರು ಇಳಿಯಲ್ಲ, ಇದು ಸುಳ್ಳು ಕೇಸ್ . ಅವರು ನಿರ್ದೋಷಿಯಾಗಿ ಹೊರಗೆ ಬರುವ ವಿಶ್ವಾಸ ಇದೆ. ಕಾನೂನು ಮೀರಿ ಒಬ್ಬ ಜನಪ್ರತಿನಿಧಿಗೆ ಸರ್ಕಾರ ತೊಂದರೆ ಕೊಡಬಾರದು. ಹೊಟ್ಟೆಕಿಚ್ಚಿಗೋಸ್ಕರ ಭೈರತಿ ಬಸವರಾಜ ಮೇಲೆ ಗೂಬೆ ಕೂರಿಸಿದ್ದಾರೆ ಎಂದು ತಿಳಿಸಿದ್ದಾರೆ.