ಬೆಂಗಳೂರು; ಸಿದ್ದರಾಮಯ್ಯ ನೆಮ್ಮದಿಯಿಂದ ಸಿಎಂ ಆಗಿ ಕಾರ್ಯ ನಿರ್ವಹಿಸಿಲ್ಲ ಎಂದು ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ನಾಳೆ ಸಿದ್ದರಾಮಯ್ಯನವರು ಸಮಾವೇಶ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ ಸಮಾವೇಶ ಅಲ್ಲ. ಇದು ಸಿದ್ದರಾಮಯ್ಯನವರ ಅಳಿವು ಉಳಿವಿನ ಸಮಾವೇಶ. ಐದು ವರ್ಷ ಸಿಎಂ ಆಗಿರಬೇಕು ಎನ್ನುವುದು ಸಿದ್ದರಾಮಯ್ಯ ಪ್ರಯತ್ನ. ಒಪ್ಪಂದದ ಪ್ರಕಾರ ಡಿ.ಕೆ. ಶಿವಕುಮಾರ್ ಸಿಎಂ ಅಗಬೇಕು ಅಂತ ಪ್ರಯತ್ನ. ಹೀಗಾಗಿ ಸುರ್ಜೇವಾಲಾ ರಾಜ್ಯಕ್ಕೆ ಬಂದು ಎಲ್ಲರಿಗೂ ಎಚ್ಚರಿಕೆ ಕೊಟ್ಟಿದ್ದಾರೆ. ಯಾರೇ ಸಿಎಂ ಅದರೂ ನೀವು ಪಕ್ಷದ ನಿಲುವಿಗೆ ಬದ್ದರಾಗಿರಬೇಕು ಎಂದು ಹೇಳಿದ್ದಾರೆ. ಹೀಗಾಗಿ ಇದು ಸಿದ್ದರಾಮಯ್ಯನವರ ಅಳಿವು ಉಳಿವಿನ ಸಮಾವೇಶ. ಯಾವ ಸಾಧನೆಗೆ ನೀವು ಸಮಾವೇಶ ಮಾಡುತ್ತಿದ್ದೀರಾ?. ಅನೇಕ ಜನ ಸಾವಿಗೆ ಶರಣಾಗಿದ್ದಾರೆ ಅವರ ಶವದ ಮೇಲೆ ಸಮಾವೇಶ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಎರಡೂವರೆ ವರ್ಷ ಎರಡೂವರೆ ವರ್ಷ ಎಂಬ ಜಟಾಪಟಿ ದೆಹಲಿ ತಲುಪಿದೆ. ಸಿದ್ದರಾಮಯ್ಯ ನೆಮ್ಮದಿಯಿಂದ ಸಿಎಂ ಆಗಿ ಕಾರ್ಯ ನಿರ್ವಹಿಸಿಲ್ಲ. ರಾಜಣ್ಣ ಹೇಳಿದ ರೀತಿ ಕಾಂಗ್ರೆಸ್‌ನಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಕಾಂಗ್ರೆಸ್ ಸಮಾವೇಶ ಯಾಕ್ ಮಾಡುತ್ತಿದೆ?. ವಾಲ್ಮೀಕಿ ಹಗರಣ, ರೈತರ ಆತ್ಮಹತ್ಯೆ, ಅಧಿಕಾರಿಗಳ ಆತ್ಮಹತ್ಯೆ, ಬಾಣಂತಿಯರ ಸಾವು ಬಗ್ಗೆ ಸಮಾವೇಶದಲ್ಲಿ ಮಾತನಾಡುತ್ತೀರಾ?. ಸಾವಿನ ಮೇಲೆ ಕಾಂಗ್ರೆಸ್ ಸಮಾವೇಶ ಮಾಡುತ್ತಿದೆ. ಇದು ನಾಚಿಕೆಗೇಡಿನ ಸಮಾವೇಶ.11 ಜನರ ಸಾವು, ಬಾಣಂತಿಯರ ಸಾವಿನ ಸೂತಕದ ಮೇಲೆ ಸಮಾವೇಶ ಮಾಡುತ್ತಿದ್ದಾರೆ. ಸಿಎಂ, ಡಿಸಿಎಂ ಜಟಾಪಟಿಯಿಂದ ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಆಗಿದೆ. ಡಿ ಕುನ್ಹಾ ವರದಿಯಲ್ಲಿ ಪೊಲೀಸ್ ಇಲಾಖೆಯದ್ದೇ ತಪ್ಪು ಅಂತ ಬಂದಿದೆ. ಸರ್ಕಾರ ಬೇರೆ, ಇಲಾಖೆ ಬೇರೆನಾ ಹಾಗಾದರೆ?. ಆರೋಪ ಬಂದ ತಕ್ಷಣ ಇಲಾಖೆ ಬೇರೆ, ಸರ್ಕಾರ ಬೇರೆ ಅಂತ ಮಾಡಿದ್ದಾರೆ. ಡಿಸಿಎಂ ಸತ್ತ ಹೆಣದ ಮೇಲೆ ಸಂಭ್ರಮಾಚರಣೆ ಮಾಡಿದ್ದಾರೆ. ಸಿಎಂ, ಡಿಸಿಎಂ ಅವರನ್ನು ವಿಚಾರಣೆ ಕರೆಯಬೇಕಾಗಿತ್ತು. ಡಿಸಿಎಂ ಆನ್ ಲೈನ್ ನಲ್ಲಿ ವಿಚಾರಣೆಯಲ್ಲಿ ಭಾಗಿಯಾಗಿದ್ದಾರೆ. ಅವರಿಗೆ ಯಾಕೆ ಅವಕಾಶ ಕೊಟ್ಟರು. ಸರ್ಕಾರಕ್ಕೆ ಉಪಯೋಗ ಆಗುವ ಕೆಲಸ ಡಿಕುನ್ಹಾ ಮತ್ತು ಡಿಸಿ ಮಾಡಿದ್ದಾರೆ. ಮುಂದಿನ ವಿಚಾರಣೆಯಲ್ಲಿ ತೊಂದರೆ ಆಗದ ರೀತಿ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದ ಬಂದೋಬಸ್ತ್ ಬಗ್ಗೆ ನಾವು ಮಾಹಿತಿ ಕಲೆ ಹಾಕಿದ್ದೇವೆ. ಅಧಿವೇಶನದಲ್ಲಿ ಇದರ ಬಗ್ಗೆ ಚರ್ಚೆ ಮಾಡುತ್ತೇವೆ. ಅಧಿವೇಶನಕ್ಕೂ ಮುನ್ನ ಯಾಕೆ ವರದಿ ಪಡೆದರು?. ಹಿಂದಿನ ಆಯೋಗಗಳು ಮೂರು ವರ್ಷ ಆದರೂ ವರದಿ ಬಂದಿಲ್ಲ, ಇದನ್ನು ಯಾಕೆ ಬೇಗ ಪಡೆದರು?. ಮೈಸೂರಿನ ಸಾಧನಾ ಸಮಾವೇಶದ ಮರ್ಮ ಏನು?. ಒದ್ದು ಅಧಿಕಾರ ಕಿತ್ತುಕೊಳ್ಳಲು ಆಗಲ್ಲ ಅಂತ ಸಮಾವೇಶ ಮೂಲಕ ಮೆಸೇಜ್ ಕೊಡಲು ಮುಂದಾಗಿದ್ದಾರೆ. ಇವರಿಬ್ಬರ ಒಳ ಜಗಳಕ್ಕೆ ಸಮಾವೇಶ ಮಾಡುತ್ತಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಡಿ ಕುನ್ಹಾ ಮತ್ತು ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗ ಆಗುತ್ತದೆ. ಇವರು ಇಲ್ಲಿಯವರೆಗೂ ಕೊಟ್ಟಿರುವ ವರದಿಯಲ್ಲಾ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಈ ಆಯೋಗಗಳ ಬಗ್ಗೆ ಜನರಲ್ಲಿ ವಿಶ್ವಾಸ ಇಲ್ಲ. ಹೈಕೋರ್ಟ್ ನಿಂದ ನ್ಯಾಯಮೂರ್ತಿಗಳನ್ನು ಪಡೆಯಬೇಕು, ಆದರೆ ಇವರನ್ನೇ ನೇಮಕ ಮಾಡುತ್ತಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಶಾಸಕರಿಗೆ 50 ಕೋಟಿ, ವಿಪಕ್ಷ ಶಾಸಕರಿಗೆ 25 ಕೋಟಿ ಅನುದಾನ ಬಿಡುಗಡೆ ವಿಚಾರದ ಬಗ್ಗೆ ಮಾತನಾಡಿದ ಅವರು ಕಳೆದ 2 ವರ್ಷದಲ್ಲಿ ಅಭಿವೃದ್ಧಿ ಕೆಲಸ ಆಗಿಲ್ಲ. ಕ್ಷೇತ್ರದಲ್ಲಿ ಯಾವ ಮುಖ ಇಟ್ಟುಕೊಂಡು ಹೋಗಬೇಕು ಅಂತ ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ರಾಯರೆಡ್ಡಿ ಅವರೇ ಅಭಿವೃದ್ಧಿ ಬೇಕಾ ಅಥವಾ 2 ಸಾವಿರ ಬೇಕಾ ಅಂತ ಕೇಳಿದ್ದಾರೆ. ಈಗ ಕಾಂಗ್ರೆಸ್‌ಗೆ 50 ಕೋಟಿ, ಜೆಡಿಎಸ್, ಬಿಜೆಪಿಗೆ 25 ಕೋಟಿ ಬಿಡುಗಡೆ ಮಾಡಿದ್ದಾರೆ. ಅನುದಾನ ಬಿಡುಗಡೆ ವಿಚಾರದಲ್ಲೂ ತಾರತಮ್ಯ ಮಾಡಿದ್ದಾರೆ.ನೀವು ಯಾವ ಮುಖ ಇಟ್ಟುಕೊಂಡು ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುತ್ತೀರಾ?. ನೀವು ಕೊಡುವ ಅನುದಾನದಲ್ಲೇ ತಾರತಮ್ಯ ಮಾಡಿದ್ದೀರಿ. ನಾನು ಸಿಎಂ ಅವರಿಗೆ ಹೇಳುತ್ತೇನೇಎಲ್ಲರಿಗೂ ಒಂದು ಮೊತ್ತದ ಅನುದಾನ ಬಿಡುಗಡೆ ಮಾಡಿ.ಶಾಸಕರ ಅನುದಾನದಲ್ಲಿ ತಾರತಮ್ಯ ಮಾಡಬೇಡಿ. ಒಂದು ಕ್ಷೇತ್ರ ಅಭಿವೃದ್ಧಿ ಮಾಡಿದ್ರೆ ಸಾಲದು. ಇಡೀ ರಾಜ್ಯದ ಅಭಿವೃದ್ಧಿ ಮಾಡಬೇಕು ಎಂದು ತಿಳಿಸಿದ್ದಾರೆ.
ಗೋವಿಂದ ಕಾರಜೋಳ ಬಿಜೆಪಿ ರಾಜ್ಯಾಧ್ಯಕ್ಷ ಎಂದು ಘೋಷಣೆ ಮಾಡಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ನಾವು ಅವಕಾಶ ಬಂದಾಗ ಯಾರಿಂದ ಕೂಡಾ ಕಸಿದುಕೊಂಡಿಲ್ಲ. ಗೋವಿಂದ ಕಾರಜೋಳ ಅವರಿಗೆ ಅವಕಾಶ ಬಂದಾಗ ಡಿಸಿಎಂ ಮಾಡಿದ್ದೇವೆ. ನಾವು ಅವರ ಸಮುದಾಯಕ್ಕೆ ರಾಷ್ಟ್ರಪತಿ ಮಾಡಿದ್ದೇವೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀವು ಕೊಟ್ಟಿಲ್ಲ . ಆ ಸೀನಿಯಾರಿಟಿಗೆ ಒಂದು ಅವಕಾಶ ಇತ್ತು, ನೀವು ಅವರಿಗೆ ದೆಹಲಿಗೆ ಓಡಿಸಿದಿರಿ. ಧರ್ಮ ಸಿಂಗ್ ಸಿಎಂ ಆದಾಗ ಮಲ್ಲಿಕಾರ್ಜುನ ಖರ್ಗೆ ಆಗಬೇಕಿತ್ತು. ಅವಕಾಶ ಬಂದಾಗ ನೀವು ಅವರಿಗೆ ಕೊಟ್ಟಿಲ್ಲ. ನಾವು ಆ ರೀತಿ ಮಾಡಿಲ್ಲ ಅಂತ ವಿಜಯೇಂದ್ರ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.