ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ ಪ್ರಜಾಪ್ರಭುತ್ವ ದಮನ ಮಾಡುತ್ತಿದೆ ಎಂದು ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಸಂವಿಧಾನವನ್ನು ಹೆಚ್ಚು ತಿದ್ದುಪಡಿ ಮಾಡಿದ್ದೇ ಕಾಂಗ್ರೆಸ್. ಈಗ ರಾಜ್ಯಪಾಲರ ಹಲವು ಅಧಿಕಾರ ಮೊಟಕು ಮಾಡುತ್ತಿದೆ ಸರ್ಕಾರ. ರಾಜ್ಯಪಾಲರಿಗೆ ಕಾಂಗ್ರೆಸ್ ಸರ್ಕಾರ ಅಪಮಾನ ಮಾಡುತ್ತಿದೆ.ಹಲವು ಮಸೂದೆಗಳ ವಿಚಾರದಲ್ಲಿ ರಾಜ್ಯಪಾಲರು ಕೇಳಿದ ಸ್ಪಷ್ಟನೆ ಕೊಡದೇ ಬೊಬ್ಬೆ ಹೊಡೆಯುತ್ತಿದ್ದಾರೆ. ಗ್ಯಾರಂಟಿಗಳಿಂದ ಕಾಂಗ್ರೆಸ್ ಭಿಕ್ಷಾಪಾತ್ರೆ ಹಿಡಿಯುವ ಹಂತಕ್ಕೆ ಬಂದಿದೆ.ಯಾವ ರಾಜ್ಯಪಾಲರಿಗೆ ಅವಹೇಳನ ಮಾಡಿದರೋ ಅದೇ ರಾಜ್ಯಪಾಲರಿಂದ ಇವತ್ತು ಸರ್ಕಾರವನ್ನು ಹೊಗಳಿಸಿಕೊಳ್ಳುತ್ತಿದ್ದಾರೆ.ಇವರಿಗೆ ನಾಚಿಕೆ ಆಗಬೇಕು, ಯಾವ ಮುಖ ಇಟ್ಕೊಂಡು ರಾಜ್ಯಪಾಲರಿಂದ ಸರ್ಕಾರದ ಸಾಧನೆ ಹೇಳಿಸಿಕೊಳ್ಳುತ್ತೀರಿ?.ರಾಜ್ಯಪಾಲರು ಸರಿ ಇಲ್ಲ ಅಂತ ಇವರೇ ಹೇಳಿ ಅವರಿಂದಲೇ ಹೊಗಳಿಸಿಕೊಳ್ಳುವುದು ನಾಚಿಕೆ ಸಂಗತಿ ಎಂದಿದ್ದಾರೆ.
ಈ ವಿಚಾರ ಇಟ್ಟುಕೊಂಡು ನಾವು ಇವತ್ತು ಶಾಸಕರ ಭವನದಿಂದ ವಿಧಾನಸೌಧವರೆಗೆ ಪಾದಯಾತ್ರೆ ಮಾಡುತ್ತೇವೆ.ನಾವು ರಾಜ್ಯಪಾಲರ ಭಾಷಣಕ್ಕೆಅಡ್ಡಿ ಪಡಿಸಲ್ಲ.ಅವರ ಭಾಷಣವನ್ನು ಸಾವಧಾನವಾಗಿ ಕೇಳುತ್ತೇವೆ.ನಾಳೆಯಿಂದ ಸರ್ಕಾರದ ವಿರುದ್ಧ ಸದನದಲ್ಲಿ ಹೋರಾಟ ಮಾಡುತ್ತೇವೆ ಎಂದ್ರು.
ಡಿ.ಕೆ. ಶಿವಕುಮಾರ್ ಬಗ್ಗೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ನಾನೂ ಕೂಡಾ ಮೊಯ್ಲಿಯವರ ಅಬ್ಬರದ ಭಾಷಣ ನೋಡಿದೆ.ಡಿ.ಕೆ. ಶಿವಕುಮಾರ್ ಸಿಎಂ ಆಗುವುದನ್ನು ಯಾರಿಂದಲೂ ತಪ್ಪಿಸಲು ಆಗಲ್ಲ ಅಂದರು.ಆಗ ಡಿ.ಕೆ. ಶಿವಕುಮಾರ್ ಮೊಗದಲ್ಲಿ ಹಾಲಿನ ಹೊಳೆಯೋ ಜೇನಿನ ಹೊಳೆಯೋ ಥರದ ಖುಷಿ ಇತ್ತು.ಮೊಯ್ಲಿಯವರು ಮಾಜಿ ಸಿಎಂ, ಹಿರಿಯರು.ಇದು ಸಿದ್ದರಾಮಯ್ಯ ಅವರ ಲಾಸ್ಟ್ ಬಜೆಟ್ ಆಗಬಹುದು.ಲಾಸ್ಟ್ ಆದರೂ ಲೀಸ್ಟ್ ಅಲ್ಲ.ಅತೀ ಹೆಚ್ಚು ಸಾಲಮಾಡಿ ಡಿ.ಕೆ. ಶಿವಕುಮಾರ್ ಗೆ ಬಿಟ್ಟು ಹೋಗಬಹುದು.ಸಿದ್ದರಾಮಯ್ಯ ಇರುತ್ತಾರೋ ಹೋಗುತ್ತಾರೋ ಅನ್ನೋ ಎಪಿಸೋಡ್ ಕಳೆದ ಎರಡು ವರ್ಷಗಳಿಂದ ನಡೆಯುತ್ತಲೇ ಇದೆ ಎಂದಿದ್ದಾರೆ.