ಬೆಂಗಳೂರು; ರೆಬೆಲ್ ನಾಯಕರು ಬೆಂಗಳೂರಿನಲ್ಲಿದ್ದುಕೊಂಡು ರಾಷ್ಟ್ರೀಯ ನಾಯಕರಾಗಲು ಹೊರಟಿದ್ದಾರೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ನಿನ್ನೆ ನಾವು 12 ಜನ ಮಾಜಿ ಶಾಸಕರು ಸಭೆ ಮಾಡಿದ್ದೆವು. ಇಷ್ಟು ದಿನ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಸಭೆ ಮಾಡುತ್ತಿದ್ದೆವು. ಇನ್ನು ಮುಂದೆ ಬೆಂಗಳೂರಿನ ಮಧ್ಯ ಭಾಗದ ಹೋಟೆಲ್ ನಲ್ಲಿ ಸಭೆ ಮಾಡುತ್ತೇವೆ. ಇಂದು ರಾಜ್ಯಾಧ್ಯಕ್ಷರ ಭೇಟಿ ವೇಳೆ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ಕಾರ್ಯಕ್ರಮಕ್ಕೆ ಅಷ್ಟೇ ಅವರನ್ನು ಆಹ್ವಾನ ಮಾಡಿದ್ದೇವೆ. ಫೆ. 12 ರಂದು ನಮ್ಮ ಸಭೆ ನಡೆಯುವುದು ನಿಶ್ಚಿತ. ಕುಮಾರ ಬಂಗಾರಪ್ಪ ಬಿಜೆಪಿಗೆ ಬಂದಿದ್ದರೂ ಕಾಂಗ್ರೆಸ್ ಕಾರ್ಯಕರ್ತರಿಗೆ ಕೆಲಸ ಮಾಡಿಕೊಟ್ಟರು. ಸೊರಬದಲ್ಲಿ ಒಂದೂ ಬೂತ್ ಸಮಿತಿ ಮಾಡಿಲ್ಲ. ಬೆಂಗಳೂರಿನಲ್ಲಿದ್ದುಕೊಂಡು ರಾಷ್ಟ್ರೀಯ ನಾಯಕರಾಗಲು ಹೊರಟಿದ್ದಾರೆ ಎಂದಿದ್ದಾರೆ.
ಬಿ.ಪಿ. ಹರೀಶ್ ಯಡಿಯೂರಪ್ಪ ಕೃಪಾ ಕಟಾಕ್ಷದಿಂದ ಆಯ್ಕೆಯಾಗಿ ಈಗ ಭಿನ್ನಮತೀಯರ ಜೊತೆ ಸೇರಿಕೊಂಡು ಭಿನ್ನಮತ ಮಾಡುತ್ತಿದ್ದಾರೆ. ವಿಜಯಪುರದಿಂದ ಹಲವು ಜನ ನನಗೆ ಯತ್ನಾಳ್ ಬಗ್ಗೆ ಮೆಸೇಜ್ ಕಳುಹಿಸಿದ್ದಾರೆ. ಸೊರಬದಿಂದಲೂ ಕುಮಾರ ಬಂಗಾರಪ್ಪ ಬಗ್ಗೆ ಮೆಸೇಜ್ ಕಳುಹಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಇವರ ಇತಿಹಾಸಗಳನ್ನು ನನಗೆ ಹೇಳಿದ್ದಾರೆ. ಯತ್ನಾಳ್ ಬಸ್ ಕಂಡೆಕ್ಟರ್ ಆಗಿ, ಟಿಪ್ಪರ್, ಜೀಪ್ ಓಡಿಸಿದ್ದು ಎಲ್ಲಾ ನನಗೆ ಗೊತ್ತಿದೆ. ಯಡಿಯೂರಪ್ಪನವರಿಗೆ ವಯಸ್ಸಾಗಿದೆ ಅಂತಾ ಹೇಳಿದ್ದಾರೆ. ಯತ್ನಾಳ್ ನಿನಗೆ ವಯಸ್ಸು ಆಗಿಲ್ವಾ? ರಾಜ್ಯಾಧ್ಯಕ್ಷ, ಯಡಿಯೂರಪ್ಪ ವಿರುದ್ಧ ಮಾತಾಡುವುದೇ ಇವರ ಅಜೆಂಡಾ. ಹತ್ತಾರು ಬಾರಿ ಹೈಕಮಾಂಡ್ ಭೇಟಿ ಮಾಡುತ್ತೇವೆ ಅಂತಾ ಹೋಗಿ ದಂಡ ಪಿಂಡಗಳು ವಾಪಸ್ ಬಂದಿದ್ದಾರೆ. ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಮುಂದುವರಿಯುತ್ತಾರೆ.ಯತ್ನಾಳ್ ಸಕ್ಕರೆ ಕಾರ್ಖಾನೆ ಎಷ್ಟು ಬೆಲೆ ಬಾಳುತ್ತದೆ ಎಂದು ಎಲ್ಲಾ ಗೊತ್ತಿದೆ ಎಂದಿದ್ದಾರೆ.
ಅತ್ತ ಯತ್ನಾಳ್ ಟೀಂ ಹೈಕಮಾಂಡ್ ಭೇಟಿಯಾಗುತ್ತಿದ್ದಂತೆ ಇತ್ತ ಬೆಂಗಳೂರಿನಲ್ಲಿ ವಿಜಯೇಂದ್ರ ಆಪ್ತ ಮಾಜಿ ಶಾಸಕರ ಸಭೆ
ಬೆಂಗಳೂರು: ಅತ್ತ ಯತ್ನಾಳ್ ಟೀಂ ಹೈಕಮಾಂಡ್ ಭೇಟಿಯಾಗುತ್ತಿದ್ದಂತೆ ಇತ್ತ ಬೆಂಗಳೂರಿನಲ್ಲಿ ವಿಜಯೇಂದ್ರ ಆಪ್ತ ಮಾಜಿ ಶಾಸಕರು ಸಭೆ ನಡೆಸಿದ್ದಾರೆ. ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಸಭೆ ನಡೆದಿದೆ.ಸದಾಶಿವನಗರದಲ್ಲಿರುವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವರಾದ ಎಂ.ಪಿ. ರೇಣುಕಾಚಾರ್ಯ , ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾಜಿ ಶಾಸಕರಾದ ವೈ. ಸಂಪಂಗಿ, ಬಾಲರಾಜು, ಪಿಳ್ಳ ಮುನಿಶಾಮಪ್ಪ, ಮಾಜಿ ಎಂಎಲ್ಸಿಗಳಾದ ಎಂ.ಡಿ. ಲಕ್ಷ್ಮೀನಾರಾಯಣ, ರಮೇಶ್ ಭಾಗಿಯಾಗಿದ್ದಾರೆ.
ಸಭೆ ಬಳಿಕ ಮಾತನಾಡಿದ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಇತ್ತೀಚಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಇಂದು ನಾವು ಸಭೆ ಸೇರಿದ್ದೇವೆ.ದೆಹಲಿಯಲ್ಲಿ ಇರುವವರು ಕುಟುಂಬ ರಾಜಕೀಯದ ಬಗ್ಗೆ ಮಾತಾಡುತ್ತಾರೆ.ಅಲ್ಲಿ ಕುಟುಂಬ ರಾಜಕಾರಣದಲ್ಲಿ ಇರುವವರು ಕೂಡಾ ಇದ್ದಾರೆ.ಪದೇ ಪದೇ ರಾಜ್ಯಾಧ್ಯಕ್ಷರ ಬಗ್ಗೆ ಮಾತಾಡುವುದು ಯೋಚಿಸಬೇಕಾದ ವಿಚಾರ.ಸಂಘಟನೆ ಕಟ್ಟದವರು, ಹೊಸದಾಗಿ ಪಕ್ಷಕ್ಕೆ ಸೇರ್ಪಡೆಯಾದವರು, ದಾರಿ ತಪ್ಪಿಸುವ ಮಾತಾಡುವವರು ಯಾರೂ ಪಕ್ಷ ಕಟ್ಟಿದವರಲ್ಲ.ದಕ್ಷಿಣ ಭಾರತದಲ್ಲಿ ಪಕ್ಷ ಕಟ್ಟಿದವರು ಯಡಿಯೂರಪ್ಪ, ಅನಂತಕುಮಾರ್, ರಾಜ್ಯಾಧ್ಯಕ್ಷರು ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿ ಹೋರಾಟ ಮಾಡಿದ್ದಾರೆ.ಪಕ್ಷ ಬಿಟ್ಟು ಹೋಗಿ ಬಂದವರಲ್ಲಿ ಎಷ್ಟು ನಿಷ್ಠೆ ಇದೆ? ಎಂದು ಪ್ರಶ್ನೆ ಮಾಡಿದ್ದಾರೆ.
ಒಂದು ವಾರದಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.ಕೈ ಕಾಲು ಹಿಡಿದು ಅಲ್ಲಿ ಭೇಟಿ ಮಾಡುತ್ತಿದ್ದಾರೆ.ಶಾಸಕರು, ಸಂಸದರು ಸಂಘಟನೆಗೆ ಒತ್ತು ಕೊಡಬೇಕೇ ವಿನ: ಸಂಘಟನೆಯಲ್ಲಿ ಮೂಗು ತೂರಿಸುವುದು ಸರಿಯಲ್ಲ.ಸ್ಥಾನಮಾನ ಸಿಕ್ಕಿದ ಕೂಡಲೇ ಪಕ್ಷದ ವಿರುದ್ಧವೇ ಬಂಡಾಯ ಏಳುವುದು ಸರಿಯಲ್ಲ.ಪಕ್ಷವನ್ನು ಉಳಿಸಿ ಇಂದು ನಾವು ಸಭೆ ಸೇರಿದ್ದೇವೆ ಎಂದಿದ್ದಾರೆ.