ಬೆಂಗಳೂರು: ಬರೋಬ್ಬರಿ 18 ವರ್ಷಗಳ ಬಳಿಕ ಆರ್ ಸಿ ಬಿ ಐಪಿಎಲ್ ಕಪ್ ಮುಡಿಗೇರಿಸಿಕೊಂಡಿದೆ. ಆರ್ ಸಿಬಿ ಗೆಲುವು ಅಭಿಮಾನಿಗಳನ್ನು ಸಂಭ್ರಮದಲೆಯಲ್ಲಿ ತೇಲಿಸುತ್ತಿದೆ. ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಆರ್ಸಿಬಿ 6 ರನ್ ಗಳ ಐತಿಹಾಸಿಕ ಜಯ ಸಾಧಿಸಿ ಚೊಚ್ಚಲ ಐಪಿಎಲ್ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಶ್ರೇಯಸ್ ಪಡೆಗೆ ಗೆಲ್ಲಲು ಆರ್ಸಿಬಿ 191 ರನ್ಗಳ ಟಾರ್ಗೆಟ್ ನೀಡಿತ್ತು. ಆದರೆ, ರಜತ್ ಪಡೆಯ ಬೌಲಿಂಗ್ ದಾಳಿಗೆ ತತ್ತರಿಸಿದ ಪಂಜಾಬ್ ಕೇವಲ 155 ರನ್ಗಳಿಗೆ ಸರ್ವಪತನ ಕಂಡು ರನ್ನರ್-ಅಪ್ ಪ್ರಶಸ್ತಿಗೆ ತೃಪ್ತಿ ಪಡೆದುಕೊಳ್ಳುವಂತಾಯಿತು.
ಈ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಕೈಲ್ ಜೇಮಿಸನ್ ಫಿಲ್ ಸಾಲ್ಟ್ ಅವರನ್ನು ಔಟ್ ಮಾಡುವ ಮೂಲಕ ಪಂಜಾಬ್ ನ ನಿರ್ಧಾರವನ್ನು ಸರಿಯೆಂದು ಸಾಬೀತುಪಡಿಸಿದರು. ಸಾಲ್ಟ್ 16 ರನ್ ಗಳಿಸಿ ಔಟಾದರು, ವಿರಾಟ್ ಕೊಹ್ಲಿ ತಂಡಕ್ಕಾಗಿ 43 ರನ್ ಗಳಿಸಿದರೆ, ಮಾಯಾಂಕ್ ಅಗರ್ವಾಲ್ 17 ಎಸೆತಗಳಲ್ಲಿ 24 ರನ್ ಗಳಿಸಿದರು, ಇದರಲ್ಲಿ 2 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದ್ದವು. ಜಿತೇಶ್ ಶರ್ಮಾ (24) ಹಾಗೂ ರೊಮಾರಿಯೊ ಶೆಫರ್ಡ್ (17) ಅಂತಿಮ ಹಂತದಲ್ಲಿ ತಂಡಕ್ಕೆ ಆಸರೆಯಾದರು. ಕೈಲ್ ಜೇಮಿಸನ್ ಮತ್ತು ಅರ್ಶ್ದೀಪ್ ಸಿಂಗ್ ತಲಾ 3-3 ವಿಕೆಟ್ಗಳನ್ನು ಪಡೆದರು.
ಬಳಿಕ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ ಸ್ಫೋಟಕ ಆರಂಭ ಪಡೆದುಕೊಂಡಿತು. ಆರ್ಸಿಬಿ ಎದುರಾಳಿಯ ವಿಕೆಟ್ಗೆ ಮೊದಲಿಗೆ ಪರದಾಡಿತು. ಆದರೆ, 5ನೇ ಓವರ್ನಲ್ಲಿ ಹ್ಯಾಜಲ್ವುಡ್ ತಂಡಕ್ಕೆ ಮೊದಲ ಬ್ರೇಕ್ ತಂದುಕೊಟ್ಟರು. 24 ರನ್ ಗಳಿಸಿದ ಪ್ರಿಯಾಂಶ್ ಔಟಾದರು. ಬಳಿಕ ಪ್ರಭ್ ಸಿಮ್ರಾನ್ (26) ಹಾಗೂ ಜೋಶ್ ಇಂಗ್ಲಿಸ್ (39) ತಂಡಕ್ಕೆ ನೆರವಾಗಿ ಗೆಲುವಿನತ್ತ ಕೊಂಡೊಯ್ಯಿದರು. ಆದರೆ, ಇವರ ಆಟಕ್ಕೆ ಕ್ರುನಾಲ್ ಬ್ರೇಕ್ ಹಾಕಿದರು.
ಎರಡನೇ ಎಲಿಮಿನೇಟರ್ನಲ್ಲಿ ಹೀರೋ ಆಗಿದ್ದ ನಾಯಕ ಶ್ರೇಯಸ್ ಅಯ್ಯರ್ ಈ ಬಾರಿ ಕೇವಲ 1 ರನ್ಗೆ ನಿರ್ಗಮಿಸಿದರು. ಬಳಿಕ ಬಂದ ಬ್ಯಾಟರ್ಗಳ ಪೈಕಿ ಕೊನೆಯ ಹಂತದವರೆಗೆ ಶಶಾಂಕ್ ಸಿಂಗ್ (ಅಜೇಯ ) ಹೋರಾಡಿದ್ದು ಬಿಟ್ಟರೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಕೊನೆಯ 6 ಎಸೆತಗಳಲ್ಲಿ ಪಂಜಾಬ್ ಗೆಲುವಿಗೆ 29 ರನ್ಗಳ ಅವಶ್ಯಕತೆಯಿತ್ತು. ಆದರೆ, ಅಂತಿಮವಾಗಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.