ಮನೆ Latest News ಕರಾವಳಿಯಲ್ಲಿ ವರುಣನ ರೌದ್ರಾವತಾರ; ಆರು ಜನರನ್ನು ಬಲಿ ಪಡೆದ ಮಳೆ

ಕರಾವಳಿಯಲ್ಲಿ ವರುಣನ ರೌದ್ರಾವತಾರ; ಆರು ಜನರನ್ನು ಬಲಿ ಪಡೆದ ಮಳೆ

0

ಮಂಗಳೂರು; ಕರಾವಳಿಯಲ್ಲಿ ವರುಣನ ಆರ್ಭಟಕ್ಕೆ ಜನ ಸುಸ್ತಾಗಿ ಹೋಗಿದ್ದಾರೆ, ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಹಲವು ಅವಾಂತರಗಳನ್ನು ಸೃಷ್ಟಿ ಮಾಡಿದೆ.

ಮಂಗಳೂರಿನಲ್ಲಿ ಇಬ್ಬರನ್ನು ಬಲಿ ಪಡೆದ ವರುಣ

ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಮದನಿ ನಗರ ಎಂಬಲ್ಲಿ ಮನೆ ಮೇಲೆ ಕಾಂಪೌಂಡ್ ಗೋಡೆ ಕುಸಿದು ಮನೆಯೊಳಗಿದ್ದ ತಂದೆ ತಾಯಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು. ಅದರ ಬೆನ್ನಲೇ ಇಂದು ಮಂಗಳೂರಿನಲ್ಲಿ ಇನ್ನೊಂದು ಅನಾಹುತ ಸಂಭವಿಸಿದೆ. ಮಳೆಗೆ ಕಡಿದು ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಆಟೋ ಚಾಲಕರು ಸಾವನ್ನಪ್ಪಿದ್ದಾರೆ. ಮಂಗಳೂರಿನ ರೊಸಾರಿಯೊ ಶಾಲೆಯ ಬಳಿ ಘಟನೆ ನಡೆದಿದೆ. ಪುತ್ತೂರಿನ ಉಪ್ಪಿನಂಗಡಿಯ ರಾಜು ಮತ್ತು ಹಾಸನದ ಸಕಲೇಶಪುರದ ದೇವರಾಜು  ಮೃತ ದುರ್ದೈವಿಗಳು.

ರೊಸಾರಿಯೊ ಶಾಲೆಯ ಹಿಂಭಾಗ ಬಾಡಿಗೆ ಮನೆಯಲ್ಲಿ ವಾಸವಿದ್ದ ಆಟೋ ಚಾಲಕರೊಬ್ಬರು ಇಂದು ನಸುಕಿನ 4.30 ರ ಸುಮಾರಿಗೆ ತಮ್ಮ ಆಟೋವನ್ನು  ತೊಳೆಯುಲು ಮನೆಯಿಂದ ಹೊರಗೆ ಬಂದಿದ್ದಾರೆ. ಆಗ ಅರಿವಿಲ್ಲದೇ ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿದ್ದಾರೆ.  ಇದನ್ನು ಗಮನಿಸಿದ ಇನ್ನೊಬ್ಬ ರಿಕ್ಷಾ ಚಾಲಕ ಗೋಣಿ ಚೀಲ ಹಿಡಿದು ಅವರ ರಕ್ಷಣೆಗೆ ಮುಂದಾಗಿದ್ದಾರೆ. ಈ ವೇಳೆ ಅವರಿಗೂ  ವಿದ್ಯುತ್ ಶಾಕ್ ಗೆ ತಗುಲಿ ಸಾವನ್ನಪ್ಪಿದ್ದಾರೆ.

ಪುತ್ತೂರಿನಲ್ಲಿ ಮನೆ ಮೇಲೆ ಕುಸಿದು ಬಿದ್ದ ಧರೆ; ಮಣ್ಣಿನಡಿ ಸಿಲುಕಿದ ಮಕ್ಕಳನ್ನು ರಕ್ಷಿಸಿದ ತಂದೆ

ಪುತ್ತೂರಿನಲ್ಲಿ ಮನೆ ಮೇಲೆ ಧರೆ ಕುಸಿದು ಬಿದ್ದ  ಪರಿಣಾಮ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿದ ಘಟನೆ ಬನ್ನೂರಿನ ಜೈನರಗುರಿ ಎಂಬಲ್ಲಿ ನಡೆದಿದೆ.ಇನ್ನು ಮಣ್ಣಿನಡಿ ಸಿಲುಕಿದ ಮಕ್ಕಳನ್ನು ಮಕ್ಕಳ ತಂದೆ ರಕ್ಷಿಸಿದ್ದಾರೆ.

 

ಮಜೀದ್ ತಮ್ಮ ಇಬ್ಬರು ಮಕ್ಕಳ ಜೊತೆ ಮನೆಯ ರೂಂನಲ್ಲಿ ಮಲಗಿದ್ದರು. ಅವರು ಗಾಢ ನಿದ್ದೆಯಲ್ಲಿದ್ದಾಗ ಭಾರೀ ಮಳೆಗೆ ಮನೆ ಪಕ್ಕದ ಧರೆ ಕುಸಿದು ಬಿದ್ದಿದೆ. ಪರಿಣಾಮ ಮನೆಯ ಗೋಡೆ ನೆಲಸಮವಾಗಿದೆ. ಕೂಡಲೇ ಎಚ್ಚೆತ್ತ  ಮಜೀದ್ ಇಬ್ಬರು ಮಕ್ಕಳನ್ನ ರಕ್ಷಿಸಿದ್ದಾರೆ.

ಸುಬ್ರಮಣ್ಯದಲ್ಲಿ ಸ್ನಾನಘಟ್ಟ ಮುಳುಗಡೆ

ಇನ್ನು ಕರಾವಳಿ ಹಾಗೂ ಪಶ್ಚಿಮಘಟದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಕುಕ್ಕೆ ಸುಬ್ರಮಣ್ಯದಲ್ಲಿ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ.ಯಾತ್ರಾರ್ಥಿಗಳು ಸ್ನಾನಘಟ್ಟದ ತೆರಳದಂತೆ ಸೂಚನೆ ನೀಡಲಾಗಿದೆ.

ಅತ್ತ ನೇತ್ರಾವತಿ ನದಿ ಕೂಡ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ಸಾರ್ವಜನಿಕರು ನದಿ ಪಾತ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಮುನ್ನೆಚ್ಚರಿಕಾ ಕ್ರಮವಾಗಿ ಇಂದು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.