ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ರನ್ನು ಇಂದು ನಟಿ ರಚಿತಾ ರಾಮ್ ಭೇಟಿಯಾಗಿ ಮಾತುಕತೆ ನಡೆಸಿದರು. ದಾಸನ ಆಪ್ತ ಸಚ್ಚಿದಾನಂದ ಅವರೊಂದಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಬಂದ ಬುಲ್ ಬುಲ್ ಕೆಲ ಹೊತ್ತು ಸಿನಿಮಾ ಹಾಗೂ ದರ್ಶನ್ ಅವರ ಆರೋಗ್ಯದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ನಾನು ಆರಾಮಾಗಿದ್ದೇನೆ, ಧೈರ್ಯವಾಗಿರಿ ಎಂದು ನಟ ದರ್ಶನ್ ರಚಿತಾ ರಾಮ್ ಅವರಿಗೆ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.
ದರ್ಶನ್ ಗಾಗಿ ಅನೇಕ ವಸ್ತುಗಳನ್ನು ಹೊತ್ತು ತಂದಿದ್ದ ರಚಿತಾ ರಾಮ್ ದರ್ಶನ್ ಅವರನ್ನು ಭೇಟಿಯಾದ ಬಳಿಕ ತುಂಬಾನೇ ಭಾವುಕರಾಗಿದ್ದರು. ಡಿ ಬಾಸ್ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸುವಾಗ ರಚಿತಾ ರಾಮ್ ಕಣ್ಣೀರು ಹಾಕಿದ್ದಾರೆ.ದರ್ಶನ್ ಸರ್ ರಾಜ. ನನಗೆ ರಾಜನನ್ನು ರಾಜನ ರೀತಿಯೇ ನೋಡಲು ಇಷ್ಟ. ಆದರೆ ಅವರನ್ನು ಈ ಸ್ಥಿತಿಯಲ್ಲಿ ನೋಡೋದಕ್ಕೆ ನನಗೆ ತುಂಬಾ ಕಷ್ಟ ಆಗ್ತಿದೆ. ನಾನು ಅವರನ್ನು ಈ ಸ್ಥಿತಿಯಲ್ಲಿ ನೋಡಬಾರದಪ ಅಂತಾನೇ ಅಂದುಕೊಂಡಿದ್ದ. ಹಾಗಾಗಿ ಇಷ್ಟು ದಿನ ಮನಸ್ಸು ಗಟ್ಟಿ ಮಾಡಿಕೊಂಡು ನೋಡೋದಕ್ಕೆ ಬರ್ಲಿಲ್ಲ. ಆದರೆ ಮನಸ್ಸು ತಡಿಯಲಿಲ್ಲ. ಹಾಗಾಗಿ ಅವರನ್ನು ನೋಡೋದಕ್ಕೆ ಬಂದೆ. ಅವರನ್ನು ನೋಡಿ ಈಗ ಮನಸ್ಸು ನಿರಾಳ ಆಯ್ತು ಎಂದಿದ್ದಾರೆ. ಅಲ್ಲದೇ ಈಗ ಡಿ ಬಾಸ್ ದರ್ಶನ್ ಸರ್ ಅವರನ್ನು ನೋಡಿದಾಗ ನಾವೆಲ್ಲರೂ ಕೂಡ ಒಂದು ಕ್ಷಣ ಅಲ್ಲಿ ಭಾವುಕರಾದೆವು. ನನಗೆ ಅವರನ್ನು ಈ ರೀತಿ ನೋಡಲು ಇಷ್ಟವಿರಲಿಲ್ಲ. ಇವತ್ತು ನಾನು ಹೀರೋಯಿನ್ ಆಗೋದಕ್ಕೆ ದರ್ಶನ್ ಸರ್ ಅವರೇ ಕಾರಣ. ನನ್ನನ್ನು ಚಿತ್ರರಂಗಕ್ಕೆ ಪರಿಚಯ ಮಾಡಿಸಿದ್ದು ದರ್ಶನ್ ಸರ್. ಅವರ ಬ್ಯಾನರ್ ನಿಂದಾನೆ ನಾನು ಬಿಂದ್ಯಾ ರಾಮ್ ಆಗಿದ್ದ ನಾನು ರಚಿತಾ ರಾಮ್ ಆದೆ. ಅವರು ನನ್ನನ್ನು ಪರಿಚಯಿಸ್ತಾ ಇರ್ಲಿಲ್ಲ ಅಂದ್ರೆ ನಾನು ಇವತ್ತು ಕೂಡ ಬಿಂದ್ಯಾ ರಾಮ್ ಆಗಿಯೇ ಇರುತ್ತಿದ್ದೆ ಎಂದು ರಚಿತಾ ರಾಮ್ ಕಣ್ಣೀರು ಸುರಿಸಿದ್ದಾರೆ.
ಇನ್ನು ದರ್ಶನ್ ಅವರ ಆರೋಗ್ಯದ ಬಗ್ಗೆ ಮಾತನಾಡಿದ ರಚಿತಾ ರಾಮ್ ದರ್ಶನ್ ಸರ್ ಆರೋಗ್ಯಯುತವಾಗಿದ್ದಾರೆ. ಆದರೆ ನನಗೆ ಅವರನ್ನು ನೋಡೋದು ಕಷ್ಟ ಆಯಿತು. ಅವರನ್ನು ನಾವೆಲ್ಲಾ ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಅವರ ಫ್ಯಾನ್ಸ್ ಅವರನ್ನು ಎಷ್ಟರಮಟ್ಟಿಗೆ ಮಿಸ್ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ. ನಾನು ಕೂಡ ಅಷ್ಟೇ ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ. ನಾನು ಕೂಡ ದರ್ಶನ್ ಅವರ ಅಭಿಮಾನಿ ಎಂದಿದ್ದಾರೆ.
ಭೇಟಿಯ ವೇಳೆ ಆದಷ್ಟು ಬೇಗ ನೀವು ಹೊರಗಡೆ ಬನ್ನಿ ನಾವೆಲ್ಲಾ ನಿಮ್ಮನ್ನು ಕಾಯುತ್ತಿದ್ದೇವೆ ಎಂದೆ. ಈ ವೇಳೆ ಅವರು ನನಗೆ ಕಾನೂನಿನ ವೇಳೆ ನಂಬಿಕೆ ಇದೆ. ಆದಷ್ಟು ಬೇಗ ಹೊರಗಡೆ ಬರ್ತಿನಿ ಧೈರ್ಯವಾಗಿರಿ ಎಂದರು. ಅವರು ತುಂಬಾ ಆರೋಗ್ಯವಾಗಿದ್ದಾರೆ ಅದನ್ನು ನೋಡಿ ನನಗೆ ಖುಷಿಯಾಯಿತು. ಅವರೇ ನನಗೆ ಸಮಾಧಾನ ಮಾಡಿದ್ರು. ದರ್ಶನ್ ಸರ್ ಅವರ ಋಣ ನಮ್ಮ ಇಡೀ ಕುಟುಂಬದ ಮೇಲಿದೆ. ಅವರಿಂದಾಗಿ ನಾನಿವತ್ತು ಹೀಗಿದ್ದೇನೆ. ಆದಷ್ಟು ಬೇಗ ಸಿಹಿ ಸುದ್ದಿ ಸಿಗಲಿ. ಅವರು ಹೊರಗೆ ಬರಲಿ. ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ರಚಿತಾ ರಾಮ್ ಹೇಳಿದ್ದಾರೆ.