ಹಾಸನ ಜಿಲ್ಲೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಇಂದು ಪ್ರವಾಸ ಕೈಗೊಂಡರು. ಈ ವೇಳೆ ಬಿಸಿಸುಳಿ ರೋಗದಿಂದ ನಾಶವಾಗಿರುವ ಮೆಕ್ಕೆಜೋಳ ಕೃಷಿಯನ್ನು ಆಲೂರು ತಾಲ್ಲೂಕಿನ, ಕಾರಿಗನಹಳ್ಳಿ ಗ್ರಾಮದಲ್ಲಿ ವೀಕ್ಷಿಸಿದರು. ಈ ವೇಳೆ ರೈತರು ಆರ್ ಅಶೋಕ್ ಬಳಿ ತಮ್ಮ ಅಳಲು ತೋಡಿಕೊಂಡರು. ಈ ವೇಳೆ ಶಾಸಕ ಸಿಮೆಂಟ್ ಮಂಜು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ವೇಳೆ ಮಾತನಾಡಿದ ಅರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. ಮೆಕ್ಕೆಜೋಳಕ್ಕೆ ಬಿಳಿ ಸುಳಿ ರೋಗ ತಗುಲಿ ಬೆಳೆ ನಾಶವಾಗಿದೆ. ಅಧಿಕಾರಿಗಳು ಹೇಳಿದಂತೆಯೇ ಬಿತ್ತನೆ ಬೀಜ ಖರೀದಿ, ಅವರು ಹೇಳಿದಂತೆ ಬಿತ್ತನೆ ಮಾಡಿದ್ದಾರೆ.ರೈತರು ಒಡವೆ ಗಿರವಿ ಇಟ್ಟು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಬೆಳೆ ನಾಶವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.ಹನ್ನೆರಡು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ನಾಶವಾಗಿದೆ. ಆದರೂ ಸರ್ಕಾರದ ಯಾವ ಸಚಿವರು ಜಿಲ್ಲೆಗೆ ಭೇಟಿ ನೀಡಿಲ್ಲ.ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಹಾಸನ ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳು, ರೈತರ ಸಭೆ ನಡೆಸಲಿ. ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡಲಿ. ಈ ಸರ್ಕಾರ ಸಿಎಂ ಬದಲಾವಣೆ, ಸುರ್ಜೆವಾಲ ಬಂದರು, ವಾಲಾಗಳು ಬಂದು ಹೋಗುವದರಲ್ಲೇ ಇದೆ. ರೈತರ ಕಷ್ಟ ಕೇಳುತ್ತಿಲ್ಲ, ಸ್ಥಳಕ್ಕೆ ಬರಲು ಯೋಗ್ಯತೆ ಇಲ್ಲ. ಬೆಂಗಳೂರಿನಲ್ಲಿ ಮೀಟಿಂಗ್ ಮಾಡಲಿ. ರೈತರು ಒಂದು ಲಕ್ಷ ಪರಿಹಾರ ಕೊಡಲಿ ಎಂದು ಒತ್ತಾಯಿಸುತ್ತಿದ್ದಾರೆ ಎಂದು ಆಗ್ರಹಿಸಿದರು.
ಕೂಡಲೇ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ವರದಿ ತರಿಸಿಕೊಂಡು ಪರಿಹಾರ ನೀಡಲಿ. ಪರಿಹಾರ ಕೊಡಲು ಸರ್ಕಾರದ ಬಳಿ ದುಡ್ಡಿಲ್ಲ, ಸಾಲನಾದರೂ ಮಾಡಿ ಪರಿಹಾರ ಕೊಡಿ. ಕಳೆದ ವರ್ಷ ಒಂದು ಲಕ್ಷ ಐದು ಸಾವಿರ ಕೋಟಿ ಸಾಲ ಮಾಡಿದ್ದೀರಿ. ಈ ವರ್ಷ ಇನ್ನೂ ಎರಡು ಲಕ್ಷ ಸಾಲ ಮಾಡಿ ರೈತರನ್ನು ಉಳಿಸಿ. ಬೆಂಗಳೂರಿನಲ್ಲಿ ಟನಲ್ ರಸ್ತೆ ಮಾಡುತ್ತಿದ್ದೀರಿ. ನಿಮ್ಮ ಟನಲ್ ರೋಡ್ ಬೇಡ ರೈತರನ್ನು ಉಳಿಸಿ. ರಾಯರೆಡ್ಡಿ ಈಗಾಗಲೇ ಹೇಳಿದ್ದಾರೆ. ಸಾಯುತ್ತಿರುವ ರೈತರಿಗೆ ಜೀವನ ಕೊಡಿ. ಇಲ್ಲವಾದರೆ ರೈತರ ಶಾಪ ಸರ್ಕಾರಕ್ಕೆ ತಟ್ಟುತ್ತೆ, ಸರ್ವನಾಶ ಹೋಗುತ್ತೆ. ಸರ್ವನಾಶದ ಹಾದಿಯಲ್ಲಿ ಸರ್ಕಾರ ಇದೆ ಎಂದರು.
ಸಿಎಂ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ಹೇಳಿದ್ದು ನಿಜ ಆಯ್ತಲ್ಲ. ಕಾಂಗ್ರೆಸ್ ಎಂಎಲ್‌ಎ ಹೇಳುತ್ತಿದ್ದಾರೆ. ರಾಮನಗರ ಎಂಎಲ್‌ಎ ನೋಟೀಸ್ ಕೊಟ್ಟ ಮೇಲೂ ಹೇಳುತ್ತಿದ್ದಾರೆ. ಏನ್ ಅವರನ್ನು ಗುಂಡಿಟ್ಟು ಹೊಡಿತಾರಾ. ಏನ್ ಮಾಡ್ತಾರೆ ಅವರನ್ನ, ಪಾರ್ಟಿಯಿಂದ ಸಸ್ಪೆಂಡ್ ಮಾಡ್ತಾರಾ. ತಾಕತ್ ಇದ್ದರೆ ಮಾಡಲಿ ನೋಡೋಣ. ಡಿ.ಕೆ.ಶಿವಕುಮಾರ್ ಅಭಿಮಾನದಿಂದ ಹೇಳ್ತಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಒಂದು ಕಡೆ ನೋಟೀಸ್ ಕೊಡ್ತಾರೆ, ಒಂದು ಕಡೆ ಅಭಿಮಾನ ಅಂತಾರೆ. ನಾನು ಡೇಟ್ ಕೊಟ್ಟಿದ್ದೀನಿ, ಆದರೆ ಬದಲಾವಣೆ ಆದರೆ ಏನ್ ಹೇಳ್ತಾರೆ. ಕಾಂಗ್ರೆಸ್‌ನವರಿಗೆ ಓಪನ್ ಚಾಲೆಂಜ್ ಮಾಡ್ತೀ. ಐದು ವರ್ಷಗಳ ಕಾಲ ಸಿದ್ದರಾಮಯ್ಯ ಸಿಎಂ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹೇಳಲಿ. ಆ ರೀತಿ ಹೇಳಿದ್ರೆ ಅಶೋಕ್‌ದು ಗಿಳಿ ಶಾಸ್ತ್ರನೂ ಇಲ್ಲ, ಕವಡೆ ಶಾಸ್ತ್ರನೂ ಇಲ್ಲ, ಎಲೆ ಶಾಸ್ತ್ರನೂ ಇಲ್ಲ ಎಂದರು.
ಕರ್ನಾಟಕದ ಬಜೆಟ್‌ನಲ್ಲಿ ಉಳಿಯುತ್ತಿದ್ದದ್ದು ಎಂಭತ್ತು ಸಾವಿರ ಕೋಟಿ. ಅದರಲ್ಲಿ ಅಭಿವೃದ್ಧಿ ಕೆಲಸ ಮಾಡಬೇಕಿತ್ತು.ಇವರು ಗ್ಯಾರೆಂಟಿಗಳಿಗೆ 65 ಸಾವಿರ ಕೋಟಿ ಕೊಟ್ಟ ಮೇಲೆ ಉಳಿದಿದ್ದು ಎಷ್ಟು. ಹದಿನೈದು ಸಾವಿರ ಕೋಟಿಯಲ್ಲಿ ಜಿಲ್ಲೆಗೆ ಎಷ್ಟೆಷ್ಟು ಕೋಟಿ ಕೊಡ್ತಿರಾ ಹೇಳಿ. ಅವರ ಎಂಎಲ್‌ಎಗಳೇ ಹೇಳುತ್ತಿದ್ದಾರೆ. ಅನುದಾನ ಅಲ್ಲ ಸಂಬಳ ಕೊಟ್ಟರೆ ಸಾಕಾಗಿದೆ. ಅವರ ಹತ್ತಿರ ದುಡ್ಡಿಲ್ಲ, ಎಲ್ಲಾ ಗ್ಯಾರೆಂಟಿಗೆ ಕೊಟ್ಟಿದ್ದಾರೆ. ಕಾಂಗ್ರೆಸ್ ಏಜೆಂಟ್ ಲೇಡಿನ ಕರ್ಕಂಡು ಬಂದು ನಿಲ್ಲಿಸಿ ನಾನು ಗ್ಯಾರೆಂಟಿ ದುಡ್ಡಲ್ಲಿ ಬೋರ್‌ವೆಲ್ ಹಾಕಿಸಿಬಿಟ್ಟೆ ಅಂತ ಹೇಳ್ಸಿದ್ರು. ಒಂದು ಬೋರ್‌ವೇಲ್ ಹಾಕಲು ಹತ್ತರಿಂದ ಹನ್ನೆರಡು ಲಕ್ಷ ಖರ್ಚಾಗುತ್ತೆ. ಆ ದುಡ್ಡಲ್ಲಿ ಬೋರ್‌ವೇಲ್ ಕೊಡುವವನಿಗೆ ಅಡ್ವಾನ್ಸ್ ಕೊಡಲು ಆಗಲ್ಲ. ಒಂದು ಕರೆಂಟ್ ಕನೆಕ್ಷನ್ ತೆಗೆದುಕೊಳ್ಳಲು ಎರಡು ಲಕ್ಷ ಲಂಚ ಕೊಡಬೇಕು. ರಾಜ್ಯದಲ್ಲಿ ಅರಾಜಕತೆ ಇದೆ, ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಜನಗಳ ತಲೆ ಮೇಲೆ ಒಂದು ಲಕ್ಷ ಸಾಲ ಇದೆ. ಮುಂದಿನ ಬಜೆಟ್‌ನಲ್ಲಿ ಇನ್ನೂ ಎರಡು ಲಕ್ಷ ಸಾಲ ಮಾಡ್ತಾರೆ. ಕೇರಳ, ಹಿಮಾಚಲ ಪ್ರದೇಶ ಹೇಗೆ ಪಾಪಾರ್ ಆಗಿದೆ ಅದೇ ರೀತಿ ಕರ್ನಾಟಕವನ್ನು ಪಾಪರ್ ಮಾಡಿ ಹೋಗುವಂತಹ ಪಾಪಾರ್ ಸಿದ್ದರಾಮಯ್ಯ ಕರ್ನಾಟಕ ಸರ್ಕಾರದಲ್ಲಿ ಇದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರಿಗೆ ರಾಷ್ಟ್ರಮಟ್ಟದ ಹುದ್ದೆ ವಿಚಾರದ ಬಗ್ಗೆ ಮಾತನಾಡಿಸಿದ್ದರಾಮಯ್ಯ ಅವರಿಗೆ ಕಿಕ್ ಔಟ್ ಸ್ಕೀಂ ಹಾಕಿಕೊಂಡಿದ್ದಾರೆ. ಗ್ಯಾರೆಂಟಿ ದೆಹಲಿಗೆ ಕಿಕ್ ಔಟ್ ಮಾಡೇ ಮಾಡ್ತಾರೆ. ಪ್ಲಾನ್ ರೆಡಿ ಇದೆ, ಕುತಂತ್ರನು ಮಾಡಿದ್ದಾರೆ. ಸಿದ್ದರಾಮಯ್ಯ ಇಲ್ಲಿ ಇದ್ದರೆ ಕಿರುಕುಳ ನೀಡುತ್ತಾರೆ, ಸುಮ್ಮನೆ ಮನೆಯಲ್ಲಿ ಕೂರಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗ ನೆಮ್ಮದಿಯಾಗಿ ಇದ್ರಾ, ಅವರೇ ಎಲ್ಲರನ್ನು ಕಳುಹಿಸಿದ್ರು. ಬಿಜೆಪಿ ಹೋಗಿ ಅಂತ ಕಳುಹಿಸಿ ವಿರೋಧ ಪಕ್ಷದ ನಾಯಕನಾಗಿ ಆರಾಮಾಗಿ ಇದ್ದರು. ಯಾರಾದರೂ ಸಿಎಂ ಆಗಲಿ ನಾವಂತೂ ಈ ಸರ್ಕಾರನಾ ಬೀಳಿಸಲು ಹೋಗಲ್ಲ. ಅವರೇ ಬಿದ್ದು ಸಾಯ್ತಾರೆ, ನಾವು ಕಾಯುತ್ತಿರುತ್ತೇವೆ. ನಮಗೆ ಯಾರೇ ಸಿಎಂ ಆದರೂ ಮುಖ್ಯವಲ್ಲ. ಮತ್ತೆ ಸಿಎಂ ಮಾಡೋದು ಅವರನ್ನು ಆರು ತಿಂಗಳಿಗೆ ಮತ್ತೆ ಇಳ್ಸೋದು. ಅದು ಕಾಂಗ್ರೆಸ್‌ನ ಆಂತರಿಕ ವಿಚಾರ. ಪ್ರತಿದಿನ ಮಾಧ್ಯಮಗಳಲ್ಲಿ ಮುಖ್ಯಮಂತ್ರಿ ಬದಲಾವಣೆ ಅಂತ ಬರುತ್ತಲೇ ಇದೆ. ಅಧಿಕಾರಿಗಳು ಆರಾಮಾಗಿ ಮಜಾ ಮಾಡ್ಕಂಡು ಕುಳಿತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಸರಣಿ ಸಾವುಗಳಾಗುತ್ತಿರುವ ಬಗ್ಗೆ ಮಾತನಾಡಿದ ಅವರು ಬಹಳ ನೋವಿನಿಂದ ಹೇಳುವ ವಿಚಾರ. ಹಾಸನದಲ್ಲಿ ಪದೇ ಪದೇ ಆಗುತ್ತಿದೆ. ಅದಕ್ಕೆ ಮುಖ್ಯಮಂತ್ರಿಗಳು ರಿಯಾಕ್ಷನ್ ಕೊಟ್ಟಿದ್ದಾರೆ. ಕೋವಿಡ್ ಲಸಿಕೆಯಿಂದ ಆಗ್ತಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿ ಈ ತರಹ ಹೇಳಿಕೆ ಕೊಟ್ಟು ನಗೆ ಪಾಟಲಿಗೆ ಈಡಾಗಿದ್ದಾರೆ. ಕೋವಿಡ್ ಲಸಿಕೆ ಬಗ್ಗೆ ರಿಪೋರ್ಟ್ ಬಂದಿದೆ, ದೆಹಲಿಯ ಆರೋಗ್ಯ ಇಲಾಖೆ ಕೊಟ್ಟಿದೆ. ಜಯದೇವ ಆಸ್ಪತ್ರೆಯವರು ರಿಪೋರ್ಟ್ ಕೊಟ್ಟಿದ್ದಾರೆ. ಅದನ್ನು ಮುಚ್ಚಿಹಾಕಿ ಮುಚ್ಚಿಟ್ಟುಕೊಂಡಿದ್ದಾರೆ. ಕೋವಿಡ್ ಲಸಿಕೆಯಿಂದ ಹಾಸನದಲ್ಲಿ ಮಾತ್ರ ಸಾವು ಆಗುತ್ತಾ. ಎಲ್ಲಾ ಕಡೆ ಕೋವಿಡ್ ಲಸಿಕೆ ಕೊಟ್ಟಿದ್ದಾರೆ. ಬರೀ ಹಾಸನದಲ್ಲಿ ಯಾಕೆ ಆಗುತ್ತಿದೆ. ಇದಕ್ಕೆ ಬೇರೆಯೇ ಕಾರಣ ಇದೆ.ಇದಕ್ಕೆ ಏನಾದರೂ ಕಾರಣ ಇರಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಹಾಸನಕ್ಕೆ ಬಾರದೆ ಅಲ್ಲಿಂದ ಅಲ್ಲೇ ಹೋಗಿದ್ದಾರೆ.ಹಿರಿಯ ಮಂತ್ರಿಗಳು, ಅಧಿಕಾರಿಗಳು ಬಂದರೆ ಅದಕ್ಕೊಂದು ಪರಿಹಾರ ಸಿಗುತ್ತೆ. ಹೃದಯಾಘಾತಕ್ಕೆ ನಿಜವಾದ ಕಾರಣವೇನು ಅಂತ ತಿಳಿಯುತ್ತೆ. ಜನ ಸಾಯುತ್ತಿದ್ದಾರೆ, ಏನಾದರೂ ಕಾರಣ ಇದ್ದೇ ಇರುತ್ತೆ. ಸರ್ಕಾರ ಆ ಕಾರಣ ಏನು ಅಂತ ಹುಡುಕಬೇಕು.ಸರ್ಕಾರ ಎಚ್ಚರ ತಪ್ಪಿದೆ, ಕೋಮಾ ಸ್ಟೇಜ್‌ನಲ್ಲಿ ಇದೆ. ಅವರಿಗೆ ಅಧಿಕಾರ ಹಸ್ತಾಂತರ, ಯಾರು ಮುಂದೆ ಮುಖ್ಯಮಂತ್ರಿ ಆಗಬೇಕು.ಎಟಿಎಂ ತಗೊಂಡು ದೆಹಲಿಗೆ ಯಾರ‌್ಯಾರು ಎಷ್ಟೆಷ್ಟು ಕೊಡಬೇಕು. ಇದೇ ಮಂತ್ರಿ ಕೊಡ್ತಾರೆ ಬೇರೆಯವರು ಕೊಡ್ತಾರಾ ಅದರ ರೇಟ್ ಎಷ್ಟು. ಇದರಲ್ಲಿ ಇಡೀ ಸರ್ಕಾರ ಮುಳುಗಿದೆ, ಜನರು ಕಂಗಾಲಾಗಿದ್ದಾರೆ ಎಂದರು.