ಬೆಂಗಳೂರು: ಸಿದ್ದರಾಮಯ್ಯ ಹಠ ಹಿಡಿದು ಜಾತಿ ಸಮೀಕ್ಷೆ ಅವಧಿ ಮುಂದುವರಿಸಿದ್ದಾರೆ ಎಂದು ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅವಧಿ ಮುಂದುವರಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಸಿದ್ದರಾಮಯ್ಯ ಹಠ ಹಿಡಿದು ಜಾತಿ ಸಮೀಕ್ಷೆ ಅವಧಿ ಮುಂದುವರಿಸಿದ್ದಾರೆ. ಎಲ್ಲರೂ ಹೇಳಿದರೂ 15 ದಿನದಲ್ಲಿ ಮುಗಿಸುತ್ತೇವೆ ಎಂದು ಸವಾಲು ಹಾಕಿದ್ದರು. ಇದು ಹಳ್ಳ ಹಿಡಿಯುತ್ತಿರುವ ಜಾತಿ ಗಣತಿ. ಸಮೀಕ್ಷೆ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಶುರುವಾಗಿದೆ. ದತ್ತಾಂಶ ಸಂಗ್ರಹ ಪ್ರಕ್ರಿಯೆ ಪಾರದರ್ಶಕವಾಗಿಲ್ಲ. ಬೆಂಗಳೂರಿನಲ್ಲಿ ಈಗ ಸಮೀಕ್ಷೆ ಶುರುವಾಗಿದ್ದು, ಆಗಲೇ 70% ಮುಗಿದಿದೆ ಎಂದು ಹೇಳುತ್ತಿದ್ದಾರೆ. ನನ್ನ ಬಳಿ ಬಂದಿದ್ದ ಮಹಿಳೆಯರು ಸಮೀಕ್ಷೆಯಲ್ಲಿ ವಾಚ್ ಮನ್ ಹತ್ತಿರ ಮಾಹಿತಿ ಪಡೆದು ಸ್ಟಿಕ್ಕರ್ ಅಂಟಿಸಿ ಹೋಗಿದ್ದಾರೆ ಎಂದು ಹೇಳಿದ್ದಾರೆ. ಹಲವು ತೊಡಕುಗಳಿದ್ದರೂ ದೊಡ್ಡ ಸಾಧನೆ ಮಾಡಿದ ರೀತಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ರಾಜಣ್ಣ ಹೇಳಿದಂತೆ ನವೆಂಬರ್ ಕ್ರಾಂತಿಗೆ ತರಾತುರಿಯಲ್ಲಿ ಮಾಡುತ್ತಿದ್ದಾರಾ?. ಮಂತ್ರಿಗಳಿಗೆ ಭೋಜನ ಕೂಟ ಏನು ಸೆಂಡ್ ಆಫ್ ಕೊಡುತ್ತಿದ್ದಾರಾ?. ಸಮೀಕ್ಷೆಗೆ ಹೋಗುವವರ ಜೊತೆ ಸರ್ಕಾರ ಪೊಲೀಸರನ್ನು ಕಳುಹಿಸುವುದು ಸೂಕ್ತ. ಪ್ರಶ್ನಾವಳಿ ಬಗ್ಗೆ ಡಿ.ಕೆ. ಶಿವಕುಮಾರ್ ಅವರಿಗೆ ಸಚಿವ ಸಂಪುಟ ಸಭೆಯಲ್ಲಿ ಗೊತ್ತಾಗಿಲ್ಲ, ಮನೆಗೆ ಹೋದ ಮೇಲೆ ಗೊತ್ತಾಗಿದೆ ಎಂದು ಹೇಳಿದ್ದಾರೆ.
ಸಮೀಕ್ಷೆ ವೇಳೆ ಬಾಲಿಶ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಕಾಂಗ್ರೆಸ್ ನವರು ಜಾಸ್ತಿ ಅನಕ್ಷರಸ್ಥರಿದ್ದಾರೆ. ಅದಕ್ಕೆ ಸಮೀಕ್ಷೆಯ ಪ್ರಶ್ನಾವಳಿಯಲ್ಲಿ ಅನಕ್ಷರತೆಗೆ ಕಾರಣ ಕೇಳಿದ್ದಾರೆ. ಅನಕ್ಷರಸ್ಥರು ಆಗಲು ೬೦ ವರ್ಷ ಆಳಿದ ಕಾಂಗ್ರೆಸ್ ಪಕ್ಷವೇ ನೇರ ಕಾರಣ ಅಲ್ಲವೇ?.
ಕಾಂಗ್ರೆಸ್ ಪಕ್ಷದಿಂದ ನಾವು ಅನಕ್ಷರಸ್ಥರಾದೆವು ಎಂದರೆ ನೀವು ಒಪ್ಪುತ್ತೀರಾ? ಪುಣ್ಯಕ್ಕೆ ನೀನು ಭಾರತದ ಪ್ರಜೆಯೇ ಎಂದು ಕೇಳಿಲ್ಲ.
ಪ್ರಶ್ನಾವಳಿಯಲ್ಲಿ ಅದೊಂದು ಕಾಲಂ ಬಿಟ್ಟುಬಿಟ್ಟಿದ್ದಾರೆ. ಸಮೀಕ್ಷೆಗೆ ಹೋದ ಕೂಡಲೇ ಮನೆಯವರು ರಪ ರಪ ರಪ ಅಂತ ಉತ್ತರ ಕೊಡಬೇಕಂತೆ. ಪ್ರಶ್ನಾವಳಿಯನ್ನು ಓದಲು 18 ನಿಮಿಷ ಬೇಕು, ಅರ್ಥ ಮಾಡಿಕೊಳ್ಳಲು 30 ನಿಮಿಷ ಬೇಕು. ನಾವು ನೆಲೆಸಿರುವ ಸ್ಥಳ ಯಾವುದು ಎಂದು ಪ್ರಶ್ನೆ ಇದೆ. ಪುಣ್ಯಭೂಮಿ, ಕರ್ಮಭೂಮಿ ಅಂತಾ ಬರೆಯಬೇಕಾ? ನಮ್ಮ ಮನೆಗೆ ಇನ್ನೂ ಸಮೀಕ್ಷೆಗೆ ಬಂದಿಲ್ಲ. ಸಿದ್ದರಾಮಯ್ಯ ಮತ್ತು ಟೀಮ್ ಜೇಬುಗಳ್ಳರ ರೀತಿ ಸರ್ಕಾರದ ಯೋಜನೆಗಳನ್ನು ಕಡಿತ ಮಾಡಲು ಮಾಡಿರುವ ಹುನ್ನಾರ. ಸರ್ಕಾರಿ ಯೋಜನೆಗಳು ಕಡಿತವಾಗದಂತೆ ಮಾಹಿತಿ ಕೊಡಿ ಎಂದು ಹೇಳಿದ್ದಾರೆ.
ಸಮೀಕ್ಷೆ ಮಾಡುವವರು ಹೋಗುವಾಗ ಜೊತೆಯಲ್ಲಿ ಪೊಲೀಸರು, ಒಡವೆ ತೂಕ ಹಾಕುವವರನ್ನು ಕರೆದುಕೊಂಡು ಹೋಗಲಿ. ಸಿದ್ದರಾಮಯ್ಯನವರಿಗೆ ತೆರಿಗೆ ಹಣ ಅಂದರೆ ಬೆಲೆಯೇ ಇಲ್ಲ. ಇದು ದುಡ್ಡು ಹೊಡೆಯುವ ದಂಧೆ.
ಸಿದ್ದರಾಮಯ್ಯ ಮನಸ್ಸಿಗೆ ಬಂದಂತೆ ಮನೆಯಲ್ಲಿ ಕುಳಿತುಕೊಂಡು ತಯಾರಿಸುವ ಜಾತಿ ಗಣತಿ. 100% ಗ್ಯಾರಂಟಿಯಿಂದ ಸರ್ಕಾರ ನಡೆಸಲು ಆಗುತ್ತಿಲ್ಲ.ಎಲ್ಲಾ ನಿಗಮಗಳಿಗೂ ಹಣ ಕಡಿತ ಮಾಡಿದ್ದಾರೆ. ಇವರ ಅಚಾತುರ್ಯದಿಂದ ಕೇಂದ್ರ ಸರ್ಕಾರದ ಮೇಲೆ ಗೂಬೆ ಕುರಿಸಲು ಹೊರಟಿದ್ದಾರೆ. ಮಳೆ ಸಂತ್ರಸ್ತರಿಗೆ ಕೊಡಲು ಹಣ ಇಲ್ಲ, ಜಾತಿ ಗಣತಿಗೆ ಕೊಡಲು ಹಣ ಇದೆ. ಎಲ್ಲಾ ಮಾಹಿತಿ ಕೊಟ್ಟರೆ ರೇಷನ್ ಕಾರ್ಡ್, ಲೋನ್, ಬೆಳೆ ಪರಿಹಾರ ಎಲ್ಲವೂ ಕಡಿತ. ಸಮೀಕ್ಷೆಗೆ ಬಂದಾಗ ನೋಡಿಕೊಂಡು ಜನರು ಮಾಹಿತಿ ಕೊಡಿ ಎಂದು ಎಚ್ಚರಿಸಿದ್ದಾರೆ.
ಇಂದಿರಾ ಕಿಟ್ ನೀಡುವ ಸಚಿವ ಸಂಪುಟ ಸಭೆ ನಿರ್ಧಾರದ ಬಗ್ಗೆ ಮಾತನಾಡಿದ ಅವಾರ್ಯ್ ಪ್ರಣಾಳಿಕೆಯಲ್ಲಿ ಅಂದು ಹೇಳಿದ್ದ ಹತ್ತು ಕೆಜಿ ಅಕ್ಕಿ ಎಲ್ಲೋಯ್ತು?. ಸಕ್ಕರೆ, ಎಣ್ಣೆ ಕೊಡುತ್ತೇವೆ ಅಂತಾ ಅವತ್ತೇ ಹೇಳಬೇಕಿತ್ತು. ಜನರ ಮನಸ್ಸು ಡೈವರ್ಟ್ ಮಾಡಲು ಈ ತರಹದ ಸ್ಕೀಮ್. ಜನರನ್ನು ಯಾಮಾರಿಸಲು ಆರಾರು ತಿಂಗಳಿಗೊಂದು ಸ್ಕೀಮ್. ಇದರಲ್ಲಿ ಹೊಸತನ ಏನೂ ಇಲ್ಲ. ಹಲವಾರು ರಾಜ್ಯಗಳಲ್ಲಿ ಮಾಡಿ ಗಂಟು ಮೂಟೆ ಕಟ್ಟಿಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.











