ಬೆಳಗಾವಿಯ ಸುವರ್ಣಸೌಧಧಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಸುದ್ದಿ ಗೋಷ್ಠಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ಬಾಣಂತಿಯರ ಸಾವು ಮರಣ ಮೃದಂಗದ ರೀತಿಯಲ್ಲಿ ರಾಜ್ಯದಲ್ಲಿ ಹರಡಿದೆ. ಇದನ್ನು ಸದನದಲ್ಲಿ ಪ್ರಸ್ತಾಪಿಸಿ, ಆರೋಗ್ಯ ಸಚಿವರ ರಾಜೀನಾಮೆಗೆ ಕೇಳಿದ್ದೆವು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಒತ್ತಡ ಹಾಕಿದ್ದೆವು. ಇದನ್ನು ತಿಳಿದ ಕಾಂಗ್ರೆಸ್ ನವರು ಡಿ.ಕೆ. ಶಿವಕುಮಾರ್ ಚಿತಾವಣೆಯಿಂದ ಅಂಬೇಡ್ಕರ್ ಪ್ಲಕಾರ್ಡ್ ತಂದು ಧರಣಿ ಮಾಡುತ್ತಿದ್ದಾರೆ.ಮೂರು ದಿನಗಳ ಕಾಲ 50-60 ಶಾಸಕರು ಉ.ಕ. ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿಗಳು ಉತ್ತರ ಕೊಡಬೇಕಿತ್ತು. ಏಕಾಏಕಿ ಡಿ.ಕೆ. ಶಿವಕುಮಾರ್ ಚಿತಾವಣೆಯಿಂದ ಸದನದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.
ಯಾವಾಗ ಸದನ ನಡೆಸಬೇಕೋ ಆಗ ಸ್ಪೀಕರ್ ನಡೆಸಿಲ್ಲ. ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಮಾತಿನ ಬಗ್ಗೆ ಇಲ್ಲಿ ಪ್ರದರ್ಶನ ಮಾಡಿದ್ದಾರೆ. ಇವರಿಗೆ ಯಾವ ನೈತಿಕತೆ ಇದೆ? . ಅಂಬೇಡ್ಕರ್ ಫೋಟೋ ಹಿಡಿಯಲು ಇವರಿಗೆ ಏನು ಯೋಗ್ಯತೆ ಇದೆ?. ಮಹಾರಾಷ್ಟ್ರದಲ್ಲಿ ಅಂಬೇಡ್ಕರ್ ಸೋಲಿಸಿ, ಪಟಾಕಿ ಹೊಡೆದಿದ್ದರು. ಕಾಂಗ್ರೆಸ್ ನವರು ತೀರಿಕೊಂಡರೆ ದೆಹಲಿಯಲ್ಲಿ ಎಷ್ಟು ಬೇಕಾದರೂ ಎಕರೆ ಕೊಡುತ್ತಾರೆ. ಅಂಬೇಡ್ಕರ್ ತೀರಿಕೊಂಡಾಗ ಆರಡಿ ಮೂರಡಿ ಕೊಡದ ಪಾಪಿಗಳು, ಮನಹಾಳರು ಕಾಂಗ್ರೆಸ್ ನವರು. ಅಂಬೇಡ್ಕರ್ ಗೆ ಏಕೆ ಭಾರತ ರತ್ನ ಕೊಟ್ಟಿಲ್ಲ?. ಅವರಿಗೆ ಭಾರತ ರತ್ನ ಕೊಟ್ಟಿದ್ದು ನಾವು. ಭಗವದ್ಗೀತೆಯಷ್ಟೇ ಪವಿತ್ರ ಅಂಬೇಡ್ಕರ್ ಕೊಟ್ಟ ಸಂವಿಧಾನ ಅಂದಿದ್ದಾರೆ ಪ್ರಧಾನಿಗಳು. ಕೊಲೆಗಡುಕ ಸರ್ಕಾರ ಇದು. ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು. ಕುತಂತ್ರ ಮಾಡಿ ಸದನ ಹಾಳು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು.
ಈ ವಿಷಯದ ಬಗ್ಗೆ ಈಗಾಗಲೇ ಮೋದಿ ಅಮಿತ್ ಶಾ ಸ್ಪಷ್ಟನೆ ಕೊಟ್ಟಿದ್ದಾರೆ. ಸದನ ಸರಿಯಾಗಿ ನಡವಳಿಕೆಗೆ ಸ್ಪೀಕರ್ ಅವಕಾಶ ಕೊಡಬೇಕು. ಈ ಘಟನೆ ಆಗಿರುವುದು ಲೋಕಸಭೆಯಲ್ಲಿ. ಅಲ್ಲಿ ಏನು ಕಾಂಗ್ರೆಸ್ ನವರು ಕಡ್ಲೆಕಾಯಿ ತಿಂತಿದ್ರಾ?. ಉ.ಕ. ಭಾಗದ ಸಮಸ್ಯೆಗಳ ಬಗ್ಗೆ ಸರ್ಕಾರ ಸಮಗ್ರವಾಗಿ ಉತ್ತರ ಕೊಡಬೇಕು. ಇಲ್ಲವಾದಲ್ಲಿ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.