ಮನೆ Latest News ಒಳ ಮೀಸಲಾತಿ ಜಾರಿಗಾಗಿ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ

ಒಳ ಮೀಸಲಾತಿ ಜಾರಿಗಾಗಿ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ

0

ಬೆಂಗಳೂರು; ಒಳ ಮೀಸಲಾತಿ ಜಾರಿಗಾಗಿ ಆಗ್ರಹಿಸಿ ಬೆಂಗಳೂರಿನಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಆಯೋಜನೆ  ಮಾಡಲಾಗಿತ್ತು.

ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಮತ್ತು ಕಲ್ಬುರ್ಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಬಿಜೆಪಿ ಬೆಂಬಲದೊಂದಿಗೆ ಇಂದು ರಾಜ್ಯವ್ಯಾಪಿ ಒಳಮೀಸಲಾತಿ ಹೋರಾಟ ನಡೆಯಿತು. ಶರ್ಟ್ ಬಿಚ್ಚಿ ಅರೆಬೆತ್ತಲೆಯಾಗಿ ಮೀಸಲಾತಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು.

ಇನ್ನು ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಎ.‌ನಾರಾಯಣಸ್ವಾಮಿ ನಿಮಗೆ ತಾಕತ್ ಇದ್ದರೆ ಮೀಸಲಾತಿ ಕೊಡಲ್ಲ ಅಂತಾ ಧೈರ್ಯವಾಗಿ ಹೇಳಿ. ನಾವೇನು ದಾಯಾದಿಗಳಾ, ನಾವೇನು ಹುಚ್ಚರಾ?. ಮಾದಿಗರ ಮತದಿಂದ ಗೆದ್ದು ಈಗ ನಾಲಿಗೆ‌ ಬಿದ್ದು ಹೋಗಿದ್ಯಲ್ಲಾ. ಯಾವ ಮುಖ ಇಟ್ಟುಕೊಂಡು ಮಾದಿಗರ ಮನೆಗೆ ಬರುತ್ತೀರಾ?. ನನ್ನ ಸರ್ಕಾರ ಬಲಗೈ ಶಕ್ತಿ ಮೇಲೆ ನಿಂತಿದೆ ಎಂದು ಸಿದ್ಧರಾಮಯ್ಯ ಹೇಳಲಿ. ಸಿದ್ದರಾಮಯ್ಯ ನವರೇ 2005ರಿಂದ ನಿಮ್ಮನ್ನು ನೋಡುತ್ತಿದ್ದೇನೆ‌. ಮಹದೇವಪ್ಪ ಮಾತು ಎತ್ತಿದರೆ ಸಂವಿಧಾನ, ಸಂವಿಧಾನ ಅಂತಾರೆ. ಸಂವಿಧಾನ ಪೀಠಿಕೆ ಓದಿಸುವುದಲ್ಲ, ಅದರಲ್ಲಿ ಶೋಷಿತ ಸಮಾಜ ಮುಂದೆ ತರುವ ಬಗ್ಗೆ ಏನೆಂದು ಓದಯ್ಯಾ. ನಾವು ಭಿಕ್ಷೆ ಬೇಡುವುದಿಲ್ಲ, ನಿಮ್ಮ ತರಹ ಮಂತ್ರಿ ಆಗಿ, ಸಿಎಂ ಆಗಿ ಆಸ್ತಿ ಮಾಡುವ ಅವಶ್ಯಕತೆಯೂ ಇಲ್ಲ. ಈ ಅಧಿವೇಶನದಲ್ಲಿ ಒಳ ಮೀಸಲಾತಿ ಜಾರಿ ಬಗ್ಗೆ ನಿರ್ಧಾರ ಮಾಡದೇ ಇದ್ದರೆ ಸರ್ಕಾರವನ್ನು ಆಡಳಿತ ಮಾಡಲು ಬಿಡುವುದಿಲ್ಲ. ನಾಳೆ ಏನೋ ಮೀಸಲಾತಿ ಬಗ್ಗೆ ಮೀಟಿಂಗ್ ಅಂತೆ. ಮೀಸಲಾತಿಯೋ ಬಗ್ಗೆಯೋ ಅಥವಾ ಕುರ್ಚಿ ಬಗ್ಗೆಯೋ. ಮಾದಿಗರು ಇಲ್ಲದೇ ಯಾವುದಾದರೂ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯನಾ?. ಒಳ ಮೀಸಲಾತಿ ಜಾರಿ ಮಾಡಿಲ್ಲ ಎಂದರೆ ಮುಂದೆ ಏನು ಅಂತಾ ನಾವು ತೋರಿಸುತ್ತೇವೆ. ನಮ್ಮ ಸಹನೆಯ ಕಟ್ಟೆ ಒಡೆದಿದೆ, ಇನ್ನೂ ನಾವು ಸಹಿಸುವುದಿಲ್ಲ. ಏನೇನೋ‌ ಮಾಡಿ ನಮ್ಮನ್ನು ದಿಕ್ಕು ತಪ್ಪಿಸಬೇಡಿ. ಯಾವ ಸಮಾಜ ತುಳಿತಕ್ಕೆ ಒಳಗಾಗಿದೆಯೋ ಅದಕ್ಕೆ ಹೆಚ್ಚು ಮೀಸಲಾತಿ ಕೊಡಿ. ಇಲ್ಲವಾದಲ್ಲಿ ಸರ್ಕಾರವನ್ನು ಕಿತ್ತು ಹಾಕಬೇಕಾಗುತ್ತದೆ ಎಂದರು.