ಮನೆ Latest News ಕೆಎಎಸ್ ಮರು ಪರೀಕ್ಷೆಗಾಗಿ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ

ಕೆಎಎಸ್ ಮರು ಪರೀಕ್ಷೆಗಾಗಿ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ

0

ಬೆಂಗಳೂರು: ಕೆಎಎಸ್ ಮರು ಪರೀಕ್ಷೆಗಾಗಿ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಯಿತು. ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘದಿಂದ ಪ್ರತಿಭಟನೆ ಆಯೋಜನೆ ಮಾಡಲಾಗಿತ್ತು. ಕೆಎಎಸ್ ಮರು ಪರೀಕ್ಷೆ ನಡೆಸುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನಾ ಸ್ಥಳಕ್ಕೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಭೇಟಿ ನೀಡಿದರು. ಪ್ರತಿಭಟನಾ ನಿರತರಿಗೆ ಬೆಂಬಲ  ಘೋಷಿಸಿ ಸ್ಥಳಕ್ಕೆ ಮುಖ್ಯಮಂತ್ರಿ ಚಂದ್ರು ಭೇಟಿ ನೀಡಿದರು. ಈ ವೇಳೆ  ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು ನಾವು ಯಾವುದೇ ಭಾಷೆಯ ವಿರೋಧಿಗಳಲ್ಲ. ಹಿಂದಿ ಭಾಷೆ ಹೇರಿಕೆ ಆಗುತ್ತಿದೆ. ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ. ಪಕ್ಷ ಬೇಧ ಮರೆತು ಹೋರಾಟಕ್ಕೆ ಬೆಂಬಲಿಸಬೇಕು. ಕಾಂಗ್ರೆಸ್ ಕೂಡ ಬಂದು ಪ್ರತಿಭಟನೆ ಮಾಡಬೇಕು. ಯಾವುದೇ ರಾಜ್ಯದಲ್ಲಿ ಭಾಷೆಯ ವಿಚಾರಕ್ಕೆ ಹೋರಾಟ ಮಾಡಬೇಕಾದ ಸ್ಥಿತಿ ಇಲ್ಲ. ಕರ್ನಾಟಕದಲ್ಲಿ ಮಾತ್ರ ಈ ದುಸ್ಥಿತಿ ಇದೆ. ಸರ್ಕಾರದ ಬೇಜವಾಬ್ದಾರಿಯಿಂದ ಕೆಪಿಎಸ್ಸಿ ಪರೀಕ್ಷೆಯಲ್ಲಿ ಎಡವಟ್ಟಾಗಿದೆ. ತಪ್ಪು ಗೊತ್ತಾದ ಮೇಲೂ ಸರಿಪಡಿಸಿಲ್ಲ. ತಪ್ಪು ಮಾಡಿದವರ ಮೇಲೆ ಕ್ರಮ ಇಲ್ಲ, ಅಷ್ಟು ಉದ್ದಟತನ ಸರ್ಕಾರದ್ದು. ಪೂರ್ವಭಾವಿ ಪರೀಕ್ಷೆ ಬರೆದವರಿಗೆ ಮುಖ್ಯ ಪರೀಕ್ಷೆಗೆ ಅವಕಾಶ ನೀಡಬೇಕು. ಸಿದ್ದರಾಮಯ್ಯ ಅವರ ಮೇಲೆ ಅಪಾರ ಪ್ರೀತಿ ಇತ್ತು. ಜಾತಿ ಜನಗಣತಿ ಜಾರಿಗೆ ಬರಬೇಕು. ಎಲ್ಲಾ ಜಾತಿಯವರಿಗೂ ಅನುಕೂಲ ಆಗುತ್ತದೆ ಎಂದರು.

ಸಿಎಂ ಸಿದ್ದರಾಮಯ್ಯ ಮತ್ತೆ ಗಣತಿ ಜಾರಿ ಮುಂದೂಡಿದ್ದಾರೆ. ಅಧಿಕಾರದ ಆಸೆಗಾಗಿ ನೀವು ತಲೆಬಾಗುತ್ತಿದ್ದೀರಿ. ಕೆಪಿಎಸ್ಸಿ ಪರೀಕ್ಷೆ ಪ್ರಶ್ನೆ ಪತ್ರಿಕೆ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಸರ್ಕಾರದ ಅಸ್ತಿತ್ವವನ್ನೇ ಅಲುಗಾಡಿಸುತ್ತೇವೆ.ಸರ್ಕಾರ‌ ಸಿಎಂ ಯಾರಾಗಬೇಕು, ಅಧ್ಯಕ್ಷ ಯಾರಾಗಬೇಕು ಎಂದು ಬ್ಯುಸಿ ಆಗಿದೆ. ಇನ್ನೊಂದು ಪಕ್ಷದಲ್ಲಿ ಮಗ ಅಧ್ಯಕ್ಷ ಆಗಬೇಕಾ, ಯತ್ನಾಳ್ ಆಗಬೇಕಾ ಎನ್ನುವುದರಲ್ಲಿ ಬ್ಯುಸಿ. ಸರ್ಕಾರ ಮೊದಲು ಕನ್ನಡದಲ್ಲಿ ಪರೀಕ್ಷೆ ಮಾಡಲಿ.ದರಿದ್ರ ಇಂಗ್ಲೀಷ್ ಪರೀಕ್ಷೆ ಆಮೇಲೆ ಮಾಡಿ.ಕನ್ನಡ ಬೇಡ ಅನ್ನುವವರಿಗೆ ರಾಜ್ಯದಿಂದಲೇ ಬಹಿಷ್ಕಾರದ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಆಗಿರುವ ಪರೀಕ್ಷೆ ರದ್ದುಮಾಡಿ ಇಲ್ಲವೇ ಎಲ್ಲರಿಗೂ ಮುಖ್ಯ ಪರೀಕ್ಷೆಗೆ ಅವಕಾಶ ಕೊಡಿ.ಭಾಷೆ ವಿಚಾರದಲ್ಲಿ ಕಾಯಿದೆ ಜಾರಿಗೆ ತನ್ನಿ. ಜಾತಿ ಜನಗಣತಿ ಇನ್ನೂ ಜಾರಿಗೆ ತಂದಿಲ್ಲ, ಇದು ಖಂಡನೀಯ. ಕುಮಾರಸ್ವಾಮಿ, ಯಡಿಯೂರಪ್ಪ, ಬೊಮ್ಮಾಯಿ ಎಲ್ಲರೂ ಸಿಎಂ ಆಗಿದ್ದಾಗ ತಿರಸ್ಕಾರ ಮಾಡಿದ್ದರು.ಸಿದ್ದರಾಮಯ್ಯನವರು ಕೂಡ ಗಣತಿ ತಿರಸ್ಕಾರ ಮಾಡುವ ರೀತಿ ಕಾಣುತ್ತಿದೆ ಎಂದರು.

ಇದೇ ವೇಳೆ ಪ್ರತಿಭಟನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಬಿಜೆಪಿ ಯುವ ಮೋರ್ಛಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜು ಸಾಥ್ ನೀಡಿದರು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ  ಕೆಪಿಎಸ್ ಸಿ ನಲ್ಲಿ ಆಗುತ್ತಿರುವ ಸಮಸ್ಯೆಗಳಿಂದ ವಿದ್ಯಾರ್ಥಿಗಳು ಬೀದಿಗೆ ಇಳಿಯುವಂತಾಗಿದೆ. ಈ ಹೋರಾಟಕ್ಕೆ ನಾನು ರಾಜ್ಯಾಧ್ಯಕ್ಷನಾಗಿ, ಶಾಸಕನಾಗಿ ಬಂದಿಲ್ಲ. ದುಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ತಮ್ಮ‌ ಹೋರಾಟಕ್ಕೆ ಧ್ವನಿಯಾಗಲು ಬಂದಿದ್ದೇನೆ. ಕೆಪಿಎಸ್ಸಿ ರಾಜ್ಯದ ಯುವಕರ ಭವಿಷ್ಯ ರೂಪಿಸಬೇಕಿತ್ತು. ನಿಮ್ಮ ತಪಸ್ಸಿಗೆ ಕೊಳ್ಳಿ ಇಡುವ ಕೆಲಸ ಕೆಪಿಎಸ್ ಸಿ ಮಾಡುತ್ತಿದೆ. ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟ ಆಡುತ್ತಿದೆ. ನಮ್ಮ ಸರ್ಕಾರದ ಅವಧಿಯಲ್ಲೂ ಕೆಪಿಎಸ್ ಸಿ ಅಧಿಕಾರಿಗಳು ಹುಡುಗಾಟ ಆಡಿದ್ದರು. ಈ ಹೋರಾಟ ವಿಧಾನಸೌಧ ಮುತ್ತಿಗೆಗೆ ಸೀಮಿತ ಆಗಬಾರದು. ಎಲ್ಲಿಯವರೆಗೆ ಕೆಪಿಎಸ್ ಸಿ ಅಧಿಕಾರಿಗಳು ಮನುಷ್ಯತ್ವದಿಂದ ನಡೆದುಕೊಳ್ಳುವುದಿಲ್ಲವೋ ಅಲ್ಲಿವರೆಗೂ ನಿಮ್ಮ ಹೋರಾಟ ನಿಲ್ಲಿಸಬೇಡಿ. ಅನೇಕ ವಿದ್ಯಾರ್ಥಿಗಳು ವಯಸ್ಸಿನ ಮಿತಿಯಿಂದ ಅರ್ಹತೆ ಕಳೆದುಕೊಂಡಿದ್ದಾರೆ.ನಾನು ನಿಮಗೆ ನ್ಯಾಯ ಸಿಗುವವರೆಗೂ ನಿಮ್ಮ‌ ಜೊತೆ ಇರುತ್ತೇನೆ.  ನಮ್ಮ‌ ಪಕ್ಷವೂ ಕೂಡ ನಿಮ್ಮ ಜೊತೆ ಇರುತ್ತದೆ ಎಂದರು.

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ಕನ್ನಡದಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಿದೆ. ಕನ್ನಡದಲ್ಲಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದವರು ಜ್ಞಾನೇಂದ್ರ ಕುಮಾರ್. ಅವರಿಗೆ ಜ್ಞಾನ ಇದೆಯಾ ಅಂತ ಪರೀಕ್ಷೆ ಮಾಡಬೇಕು. ಇದು ಕರ್ನಾಟಕ, ಕೆಪಿಎಸ್ ಸಿ ಮೊದಲು ಕನ್ನಡದಲ್ಲಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಬೇಕು . ಇದು ಕನ್ನಡದ ಕೊಲೆ ಮಾಡುವ ಸರ್ಕಾರ. ಈ ಸರ್ಕಾರದಲ್ಲಿ ಅನೇಕ ಸಚಿವರಿಗೆ ಕನ್ನಡವೇ ಗೊತ್ತಿಲ್ಲ. ನಾವು ಇಡೀ ಪಕ್ಷ ನಿಮ್ಮ ಜೊತೆ ನಿಲ್ಲಲು ಬಂದಿದ್ದೇವೆ ಎಂದರು.