ಬೆಂಗಳೂರು: ತೆರಿಗೆ ನೋಟಿಸ್ ನೀಡುವಲ್ಲಿ ರಾಜ್ಯ ಸರ್ಕಾರದ ಪಾತ್ರವೇನಿಲ್ಲ ಎಂಬ ಡಿಸಿಎಂ ಡಿಕೆಶಿ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟನೆ ಕೊಟ್ಟಿದ್ದಾರೆ.
ಸಣ್ಣ ವ್ಯಾಪಾರಸ್ಥರಿಗೆ ಜಿಎಸ್ ಟಿ ನೋಟಿಸ್ ಕೇಂದ್ರದ್ದಲ್ಲ. ಬೇರೆಡೆ ಇರದ ನೋಟಿಸ್ ಇಲ್ಲಿ ಮಾತ್ರ. ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ. ರಾಜ್ಯ ಸರ್ಕಾರ ಮಾಡುವುದೆಲ್ಲಾ ಮಾಡಿ ಈಗ ತನಗೇನೂ ಸಂಬಂಧವಿಲ್ಲ ಎನ್ನುತ್ತಿರುವುದು ಹಾಸ್ಯಾಸ್ಪದ .ಕರ್ನಾಟಕದಲ್ಲಿ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೆರಿಗೆ ಬಾಕಿ ನೋಟಿಸ್ ಕೊಟ್ಟಿರುವುದು ರಾಜ್ಯ ಸರ್ಕಾರದ ತೆರಿಗೆ ಇಲಾಖೆ ಅಧಿಕಾರಿಗಳು. ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದರೆ ಬಹುತೇಕ ಎಲ್ಲಾ ರಾಜ್ಯಗಳಿಗೂ ಅನ್ವಯಿಸುತ್ತಿತ್ತು. ಬೇರೆ ಯಾವುದೇ ರಾಜ್ಯಗಳಲ್ಲೂ ತೆರಿಗೆ ಇಲಾಖೆ ಅಧಿಕಾರಿಗಳಿಂದ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದಿಂದ ಜನರ ಜತೆಗೆ ಸಣ್ಣ ವ್ಯಾಪಾರಸ್ಥರಿಗೂ ಕಿರುಕುಳ. ಜಿಎಸ್ಟಿಯಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ ಸಿಜಿಎಸ್ಟಿ ಮತ್ತು ರಾಜ್ಯ ಸರ್ಕಾರಗಳ ಅಡಿಯಲ್ಲಿ ಎಸ್ ಜಿಎಸ್ಟಿ ಎಂದು ಎರಡು ಭಾಗವಿದೆ. ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಯಾವುದೇ ತೀರ್ಮಾನ ತಗೆದುಕೊಳ್ಳಲು ಮಹತ್ವದ ಪಾತ್ರ ವಹಿಸಿರುವುದು ರಾಜ್ಯ ಸರ್ಕಾರಗಳು. ಕೇಂದ್ರ ಸರ್ಕಾರಕ್ಕೆ ಕೇವಲ 3ನೇ ಒಂದು ಭಾಗ ಮಾತ್ರ ಅಧಿಕಾರವಿದೆ. ಉಳಿದ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲಿದೆ. 3ನೇ ಎರಡು ಭಾಗದಷ್ಟು ಅಧಿಕಾರ ಹೊಂದಿರುವ ರಾಜ್ಯ ಸರ್ಕಾರಗಳ ನಿರ್ಣಯವೇ ಇದರಲ್ಲಿ ಅಂತಿಮವಾಗಿರಲಿದೆ. ಜಿಎಸ್‌ಟಿ ನೋಟಿಸ್ ನೀಡುವ ಮೂಲಕ ಡಿಜಿಟಲ್, ಯುಪಿಐ ವಹಿವಾಟು ಹದಗೆಡಿಸುವ ದುಸ್ಸಾಹಸಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಕೈ ಹಾಕಿದೆ. ರಾಜ್ಯದಲ್ಲಿ ಈ ಪಾರದರ್ಶಕ ವ್ಯವಸ್ಥೆಗೆ ಸಂಚಕಾರ ತರಲು ಯತ್ನಿಸುತ್ತಿದೆ. ರಾಜ್ಯ ಸರ್ಕಾರದ ಈ ಕ್ಷುಲ್ಲಕ ರಾಜಕಾರಣ ನಿಜಕ್ಕೂ ದುರಂತ ಎಂದಿದ್ದಾರೆ.











