ಮನೆ Latest News ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣದ ವಿಚಾರಣೆ ಮುಂದೂಡಿಕೆ

ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣದ ವಿಚಾರಣೆ ಮುಂದೂಡಿಕೆ

0

ಬೆಂಗಳೂರು ; ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ವಿರುದ್ಧ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್‌ ಒಂದು ವಾರ ಮುಂದೂಡಿದೆ.

ಜೂನ್ 27 ರಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಬೆಂಗಳೂರಿನಲ್ಲಿ ಪೋಕ್ಸೋ ವಿಶೇಷ ಕೋರ್ಟ್ ಗೆ ಜಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು 750 ಪುಟಗಳ ಆರೋಪ ಪಟ್ಟಿಯನ್ನು ಪೋಕ್ಸೋ ವಿಶೇಷ ಕೋರ್ಟ್ ಗೆ ಸಲ್ಲಿಸಿದ್ದರು.ಅದರ ಬೆನ್ನಲ್ಲೇ ಪ್ರಕರಣವನ್ನು ರದ್ದು ಕೋರಿ ಬಿ.ಎಸ್.‌ ಯಡಿಯೂರಪ್ಪ ಹೈಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದರು. ಇಂದು ಆ ಅರ್ಜಿಯ  ವಿಚಾರಣೆ ನಡೆಸಿದ ಹೈಕೋರ್ಟ್‌ ಒಂದು ವಾರ ವಿಚಾರಣೆಯನ್ನು ಮುಂದೂಡಿ ಆದೇಶ ಹೊರಡಿಸಿದೆ.

ಏನಿದು ಪ್ರಕರಣ?

ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪದಡಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ವಿರುದ್ಧ ಮಾರ್ಚ್ ತಿಂಗಳಲ್ಲಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ಬಾಲಕಿಯ ತಾಯಿ ಈ ದೂರನ್ನು ದಾಖಲಿಸಿದ್ದರು. ಕೇವಲ ಬಿಎಸ್ವೈ ಮಾತ್ರವಲ್ಲದೇ ಸಂತ್ರಸ್ತೆಯ ತಾಯಿ ಒಟ್ಟು 53 ಮಂದಿ ವಿರುದ್ಧ ದೂರು ದಾಖಲಿಸಿದ್ದರು. ಅದರಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು, ಬಿಸಿನೆಸ್ ಮ್ಯಾನ್‌ಗಳು ಸೇರಿದ್ದರು.

ಇನ್ನು ಬೆಂಗಳೂರನ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸದಲ್ಲಿ ಯಡಿಯೂರಪ್ಪ ಭೇಟಿಗೆ ತೆರಳಿದ್ದ ಸಂದರ್ಭದಲ್ಲಿ ತಮ್ಮ ಪುತ್ರಿಯೊಂದಿಗೆ ಯಡಿಯೂರಪ್ಪ ಅನುಚಿತವಾಗಿ ನಡೆದುಕೊಂಡಿದ್ದರು ಎಂದು ಸಂತ್ರಸ್ಥೆಯ ತಾಯಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಆಧರಿಸಿ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣದಡಿ ಎಫ್ ಐಆರ್ ದಾಖಲಾಗಿತ್ತಲ್ಲದೇ ನಂತರ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು

 ಇದರ ಜೊತೆಯಲ್ಲೇ, ಯಡಿಯೂರಪ್ಪ ಅವರನ್ನು ಪ್ರಕರಣದಲ್ಲಿ ಬಂಧಿಸುವಂತೆ ನಿರ್ದೇಶನ ನೀಡುವಂತೆ ಕೋರಿ ಪೋಕ್ಸೋ ಕೇಸ್ ಸಂತ್ರಸ್ತೆಯ ಸಹೋದರನಿಂದ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಘಟನೆ ನಡೆದು ಕೆಲವು ತಿಂಗಳುಗಳು ಕಳೆದರೂ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ, ಯಡಿಯೂರಪ್ಪರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿಲ್ಲ ಮತ್ತು ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್ ವೈ ಮನೆಯ ಸಿಸಿ ಟಿವಿ ದೃಶ್ಯಾವಳಿಯನ್ನೂ ಈವರೆಗೆ ವಶಕ್ಕೆ ಪಡೆದಿಲ್ಲ ಎಂದು ಅರ್ಜಿ ಸಲ್ಲಿಸಿರುವ ಸಂತ್ರಸ್ಥೆಯ ಸಹೋದರ, ದೂರು ನೀಡಿದ್ದ ಸಂತ್ರಸ್ತೆಯ ತಾಯಿ ಮೃತಪಟ್ಟಿದ್ದು, ಸಂತ್ರಸ್ತೆಗೆ ನ್ಯಾಯ ಸಿಕ್ಕಿಲ್ಲವಾದ್ದರಿಂದ ಯಡಿಯೂರಪ್ಪ ಅವರನ್ನು ಬಂಧಿಸುವಂತೆ ನಿರ್ದೇಶಿಸಲು ನ್ಯಾಯಾಲಯಕ್ಕೆ ಮನವಿ‌ ಮಾಡಿದ್ದರು.

ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್ ನೀಡಿತ್ತು. ಅದರಂತೆ ಜೂನ್ 17 ರಂದು ಬಿ ಎಸ್ ಯಡಿಯೂರಪ್ಪ ವಿಚಾರಣೆಗೆ ಹಾಜರಾಗಿದ್ದರು. ಪ್ರಕರಣದ ತನಿಖಾಧಿಕಾರಿ ಸಿಐಡಿ ಡಿವೈಎಸ್ಪಿ ಪುನೀತ್‌ ಅವರ ಎದುರು  ಯಡಿಯೂರಪ್ಪ ವಿಚಾರಣೆಗೆ ಹಾಜರಾಗಿದ್ದರು. ಸುಮಾರು ಮೂರೂವರೆ ಗಂಟೆಗೂ ಹೆಚ್ಚು ಕಾಲ ಯಡಿಯೂರಪ್ಪ ಅವರನ್ನು ಮೂರೂವರೆ ವಿಚಾರಣೆಗೆ ಒಳಪಡಿಸಲಾಗಿತು. ಸಿಐಡಿ ಎಸ್ಪಿ ಸಾರಾ ಫಾತಿಮಾ ಹಾಗೂ ಡಿವೈಎಸ್ಪಿ ಪುನೀತ್‌ರ ನೇತೃತ್ವದ ತಂಡವು ಯಡಿಯೂರಪ್ಪ ಅವರಿಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ್ದರು ಎನ್ನಲಾಗಿದೆ. ಇದೇ ವೇಳೆ ಯಡಿಯೂರಪ್ಪ ಅವರು ನನ್ನ ವಿರುದ್ಧ ದೂರು ದಾಖಲಿಸಿರುವ ಬಾಲಕಿಯ ತಾಯಿ ಶಿವಮೊಗ್ಗದವರು. ನನಗೆ ಪರಿಚಯದವರು. ಸಹಾಯ ಕೇಳಿಕೊಂಡು ಮಗಳ ಜತೆ ನನ್ನ ಬಳಿ ಬಂದಾಗ ಮಗಳನ್ನು ಮಾತನಾಡಿಸಿದ್ದು ನಿಜ. ಆದರೆ, ಲೈಂಗಿಕ ದೌರ್ಜನ್ಯ ಎಸಗಿಲ್ಲ ಎಂದು ಅವರು ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಇದೀಗ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ನೊಟೀಸ್ ನೀಡಿತ್ತು.ಅದರ ಬೆನ್ನಲ್ಲೇ ವಿಚಾರಣೆಗೂ ಬಿಎಸ್ ವೈ ಹಾಜರಾಗಿದ್ದರು. ಜೂನ್ 14 ರಂದು ಬಿಎಸ್ವೈಗೆ ಜಾಮೀನು ಲಭಿಸಿತ್ತು. ಜೂನ್ 27 ರಂದು ಸಿಐಡಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಅದರ ಬೆನ್ನಲ್ಲೇ ಬಿಎಸ್ವೈ ಪ್ರಕರಣ ರದ್ದೋ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಆ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.