ಬೆಂಗಳೂರು; ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆಯಾಗಿರೋದನ್ನು ಗೃಹ ಸಚಿವ ಡಾ ಜಿ ಪರಮೇಶ್ವರ್ ಸ್ವಾಗತಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಸಿಓಡಿ ಹಾಗೂ ಎಸ್‌ಐಟಿ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಬಿ.ಕೆ.ಸಿಂಗ್ ಟೀಂ ಒಳ್ಳೆ ಕೆಲಸ ಮಾಡಿದೆ. ರಾಜ್ಯದ ಮಟ್ಟಿಗೆ ನಿಜಕ್ಕೂ ಇದು ಐತಿಹಾಸಿಕ ತೀರ್ಪು. ಪೊಲೀಸ್ ಇಲಾಖೆಗೆ ಒಂದು ಕೀರ್ತಿ ಬಂದಂತಾಗಿದೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳು ವಿಚಾರಣೆ ವರ್ಷಾನುಗಟ್ಟಲೆ ತೆಗೆದುಕೊಳ್ಳುತ್ತೆ. ಆದರೆ ಒಂದು ವರ್ಷ ನಾಲ್ಕು ತಿಂಗಳಲ್ಲಿ ತೀರ್ಪು ಬಂದಿದೆ ಎಂದು ಹೇಳಿದರು.
ನಮ್ಮ ಪೊಲೀಸರು ಅಚ್ಚುಕಟ್ಟಾಗಿ ಮೊದಲಿಂದಲೂ ತನಿಖೆ ಮಾಡಿದ್ದಾರೆ. ಮೊದಲು ನಮ್ಮ ಎಸ್ಐಟಿಗೆ ಅಭಿನಂದನೆ ಹೇಳ್ತೇನೆ. ಇದು ಐತಿಹಾಸಿಕ ತೀರ್ಪು . ನಮ್ಮ ಎಸ್ಐಟಿ ಎಲ್ಲ ದಾಖಲೆ ಕೊಟ್ಟಿತ್ತು. ಈ ಪ್ರಕರಣದ ತನಿಖೆ ನಮ್ಮ ಪೊಲೀಸ್ ಇಲಾಖೆ ಕೀರ್ತಿ ತಂದಿದೆ. ಶೀಘ್ರವಾಗಿ ತನಿಖೆ ಮುಗಿಸಿದ್ದಾರೆ, ಅಭಿನಂದನೆ. ಪ್ರಜ್ವಲ್ ಪ್ರಕರಣವನ್ನು ರಾಜಕೀಯ ದೃಷ್ಟಿಯಿಂದ ನೋಡಲೇಬಾರದು. ಪೊಲೀಸರ ಶ್ರಮಕ್ಕೆ ಸರ್ಕಾರ ಪ್ರಶಂಸೆ ಮಾಡುತ್ತೆ. ತನಿಖೆ ನಡೆಸಿದ ಎಸ್ಐಟಿ ತಂಡದವರಿಗೆ ಮುಖ್ಯಮಂತ್ರಿ ಪದಕ ಕೊಡ್ತೇವೆ. ರಾಷ್ಟ್ರಪತಿ ಪದಕಕ್ಕೂ ಶಿಫಾರಸು ಮಾಡ್ತೇವೆ ಎಂದು ತಿಳಿಸಿದರು.
ಒಳ ಮೀಸಲಾತಿ ಜಾರಿ ವಿಚಾರ ಹಾಗೂ ಮಾದಿಗ ಸಮುದಾಯಗಳ ಒಕ್ಕೂಟದಿಂದ ಪ್ರತಿಭಟನೆಗೆ ಕರೆ ವಿಚಾರದ ಬಗ್ಗೆ ಮಾತನಾಡದ ಅವರು ಸರ್ಕಾರ ಎಸ್‌ಸಿ ಒಳಮೀಸಲಾತಿ ಜಾರಿಗೆ ಬದ್ಧವಾಗಿದೆ. ಸರ್ಕಾರ ವರದಿ ಜಾರಿಗೆ ಬದ್ಧ ಅಂತ ಚಿತ್ರದುರ್ಗದಲ್ಲಿ ಘೋಷಣೆ ಮಾಡಲಾಗಿತ್ತು. ನಮ್ಮ ಪ್ರಣಾಳಿಕೆಯಲ್ಲೂ ಭರವಸೆ ಇದೆ. ಒಳಮೀಸಲಾತಿ ಏಕಾಏಕಿ ಜಾರಿ ಮಾಡಿದರೆ ಕಾನೂನು ಪ್ರಕಾರ ನಿಲ್ಲಲ್ಲ. ಹಾಗಾಗಿ ಎಂಪೆರಿಕಲ್ ಡೇಟಾ ತಗೊಂಡು ಜಾರಿ ಮಾಡ್ತೇವೆ. ಸದಾಶಿವ ಆಯೋದಲ್ಲಿ ಸರಿಯಾದ ಡೇಟಾ ಸಿಕ್ಕಿಲ್ಲ ಅಂತ ಬಿಜೆಪಿ ತಿರಸ್ಕರಿಸಿತ್ತು. ಹೀಗಾಗಿ ನಾವು ಕಾನೂನು ಚೌಕಟ್ಟಿನಲಿ ನಾಗಮೋಹನದಾಸ್ ಆಯೋಗ ರಚಿಸಿದೆವು. ಯಾರಿಗೂ ಅನ್ಯಾಯ ಆಗದಂತೆ ಜಾರಿ ಮಾಡ್ತೇವೆ. ನಾಳೆ ವರದಿ ಸಲ್ಲಿಕೆ ಆಗಲಿದೆ, ಅದರ ಜಾರಿಯ ಜವಾಬ್ದಾರಿ ನಮ್ಮದು. ಸಣ್ಣಪುಟ್ಟ ಗೊಂದಲ ಇದ್ರೆ ಸರ್ಕಾರ ಚರ್ಚಿಸಿ ಜಾರಿ ಮಾಡ್ತೇವೆ. ಗ್ರಾಮೀಣ ಭಾಗದಲ್ಲಿ ಡೇಟಾ ೯೫% ಆಗಿದೆ. ಪಟ್ಟಣ ಕಡೆ ಸ್ವಲ್ಪ ಕಡಿಮೆ ಆಗಿದೆ ಅನ್ನೊ ಚರ್ಚೆ ಇದೆ. ವರದಿ ಬಂದ ನಂತರ ಎಲ್ಲ ಗೊತ್ತಾಗುತ್ತೆ. ಎಲ್ಲ ಚರ್ಚೆ ಮಾಡಿ ಸಂಪುಟದಲ್ಲಿ ನಿರ್ಣಯ ಮಾಡ್ತೇವೆ. ಪ್ರತಿಭಟನೆ ಮಾಡೋರಿಗೆ ಮನವಿ ಮಾಡ್ತೇನೆ. ಸ್ವಲ್ಪ ಸಮಯ ಕೊಡಿ ನಮಗೆ. ನಾವು ವರದಿ ಜಾರಿಗೆ ಬದ್ಧ. ಇದನ್ನ ಸಿಎಂ ಅನೇಕ ಸಲ ಹೇಳಿದ್ದಾರೆ, ವರದಿ ಜಾರಿ ಮಾಡೇ ಮಾಡ್ತೇವೆ ಎಂದು ಮಾದಿಗ ಸಮುದಾಯಗಳ ಒಕ್ಕೂಟಕ್ಕೆ ಪರಮೇಶ್ವರ್ ಮನವಿ ಮಾಡಿದರು.
ಡ್ರಗ್ಸ್ ತಡೆಗೆ ಕಾರ್ಯಪಡೆ ವಿಚಾರದ ಬಗ್ಗೆ ಮಾತನಾಡಿದ ಅವರು ಮಾದಕ ವಸ್ತುಗಳ ವಿರುದ್ಧ ನಾವು ಸಮರ ಸಾರಿದ್ದೇವೆ. ಅದಕ್ಕಾಗಿ ಡ್ರಗ್ಸ್ ಕಾರ್ಯಪಡೆ ರಚನೆ ಮಾಡಿದ್ದೇವೆ. ಅಧಿಕಾರಿಗಳ ನೇಮಕ ಮಾಡಿ ಜವಾಬ್ದಾರಿ ಹಂಚಿಕೆ ಮಾಡಿದ್ದೇವೆ ಎಂದರು. ಧರ್ಮಸ್ಥಳ ಪ್ರಕರಣಗಳ ತನಿಖೆ ವಿಚಾರದ ಬಗ್ಗೆ ಮಾತನಾಡಿ ನಿಮಗೆಷ್ಟು ಗೊತ್ತೋ ನಮಗೂ ಅಷ್ಟೇ ಗೊತ್ತು. ತನಿಖೆ ಹಂತದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಲ್ಲ ಎಂದು ಹೇಳಿದರು.
ಬಿಜೆಪಿಯಿಂದಲೂ ಆಗಸ್ಟ್ ೫ ರಂದು ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿ ಬಿಜೆಪಿಯವರು ಪ್ರತಿಭಟನೆ ಮಾಡಲಿ, ಅವರಿಗೂ ಹಕ್ಕಿದೆಯಲ್ಲ. ನಾವು ಅಂಕಿ ಅಂಶಗಳನ್ನಿಟ್ಟು ಆರೋಪ ಮಾಡಿರೋದು. ರಾಹುಲ್ ಗಾಂಧಿಯವರೂ ಹಾಗೇ ಹೇಳಿದ್ದಾರೆ ಎಂದರು. ಲೋಕಸಭೆ ವೇಳೆ ರಾಜ್ಯ ಸರ್ಕಾರವೇ ಅಧಿಕಾರಿಗಳ ನೇಮಿಸಿತ್ತು ಎಂಬ ಬಿಜೆಪಿ ಆರೋಪ ವಿಚಾರದ ಬಗ್ಗೆ ಮಾತನಾಡಿ ಅದನ್ನು ಚುನಾವಣಾ ಆಯೋಗ ಹೇಳಲಿ. ನಾವು ಮಾಡಿರುವ ಆರೋಪಕ್ಕೆ ಚುನಾವಣಾ ಆಯೋಗದಿಂದ ಉತ್ತರ ಬಯಸ್ತೇವೆ ಎಂದು ತಿಳಿಸಿದರು.
ಜನ್ಮದಿನ ಆಚರಣೆ, ಮೈಸೂರು ಪರಮೋತ್ಸವ ಆಚರಣೆ ವಿಚಾರದ ಬಗ್ಗೆ ಮಾತನಾಡಿ ನಾನು ನನ್ನ ಜನ್ಮದಿನದಂದು ಊರಿನಲ್ಲೇ ಇರೋದಿಲ್ಲ. ದಯಮಾಡಿ ಯಾರೂ ಮನೆಯ ಬಳಿ ಬರೋದೇ ಬೇಡ. ನಾನು ಹುಟ್ಟಿದ ಹಬ್ಬದ ಮೂಲಕ ರಾಜಕೀಯ ಮಾಡಿಕೊಂಡು ಬಂದಿಲ್ಲ. ಅಭಿಮಾನಿಗಳು ಬರ್ತಾರೆ ವಿಷ್ ಮಾಡ್ತಾರೆ, ಒಳ್ಳೇದಾಗಲಿ ಅಂತಾರೆ ಅಷ್ಟೇ. ಕೆಲವರು ಮೈಸೂರಲ್ಲಿ ಪರಮೋತ್ಸವ ಅಂತ ಮಾಡ್ತೀವಿ ಅಂತಿದ್ದಾರೆ. ನಾನು ಬೇಡ ಅಂತ ಹೇಳ್ತಿದೀನಿ ಎಂದು ಸಚಿವ ಡಾ.ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದರು.