ಬೆಂಗಳೂರು: ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಸುದ್ದಿಗೋಷ್ಠಿ ನಡೆಸಿದ್ರು.
ಈ ವೇಳೆ ಮಾತನಾಡಿದ ಅವರು ಇಂದು ಬಿಜೆಪಿ ಸಭೆಗೆ ಕೆಲವು ಶಾಸಕರು, ಸಂಸದರು ಅನುಮತಿ ಪಡೆದು ಸಭೆಗೆ ಗೈರಾಗಿದ್ದಾರೆ. ರಾಜ್ಯ ಸರ್ಕಾರ ಇಂದು ಜಿಬಿಎ ಸಭೆ ನಡೆಸಿದೆ. ಇದು ಸರ್ಕಾರ ಅಂತಾ ಹೇಳಬೇಕೋ ಅಂತಾ ಗೊತ್ತಿಲ್ಲ. ನಿನ್ನೆ ಫೋನ್ ಮಾಡಿ ಮಧ್ಯಾಹ್ನ 12 ಗಂಟೆಗೆ ಅಜೆಂಡಾ ಕೊಟ್ಟು ಸಂಜೆ 4 ಗಂಟೆಗೆ ಸಭೆ ನಿಗದಿ ಮಾಡಿದ್ದಾರೆ. ಯಾವುದೇ ನೋಟೀಸ್ ಕೊಡಬೇಕಾದರೂ ಏಳು ದಿನ ಮೊದಲು ಕೊಡಬೇಕು. 12 ಗಂಟೆಗೆ ಮನೆಗೆ ಅಜೆಂಡಾ ಕೊಟ್ಟಿದ್ದಾರೆ. ನಾನು ಬೆಳಗ್ಗೆಯೇ ಕಾರ್ಯಕ್ರಮಕ್ಕೆ ನಾನು ಮನೆಯಿಂದ ಹೊರಟಿದ್ದೇನೆ. ಅಜೆಂಡಾ ಕೊಡುತ್ತಾರೆ ಅಂತಾ ಯಾರು ಕಾದು ಕುಳಿತಿರುತ್ತಾರೆ?. ಇವರ ಯೋಗ್ಯತೆಗೆ ಜವಾಬ್ದಾರಿ ಇದ್ಯಾ? ಎಂದು ಪ್ರಶ್ನೆ ಮಾಡಿದ್ದಾರೆ.
ಅಜೆಂಡಾದಲ್ಲಿ ಮತ್ತೆ ಮನೆ ಹಾಳು ಕೆಲಸ ಮಾಡಿದ್ದಾರೆ. ಇಂದಿನ ಸಭೆಯಲ್ಲಿ ಪ್ಲಾನಿಂಗ್ ಅಥಾರಿಟಿಯದ್ದು ಅಜೆಂಡಾ ಇಟ್ಟಿದ್ದಾರೆ.
ಪ್ಲಾನಿಂಗ್ ಅನ್ನು ಪಾಲಿಕೆಯ ಚುನಾಯಿತ ಜನಪ್ರತಿನಿಧಿಗಳು, ಮೇಯರ್ ಅನುಮೋದನೆ ಮಾಡಬೇಕು. ಆದರೆ ಇಲ್ಲಿ ಮುಖ್ಯಮಂತ್ರಿಗಳೇ ಅನುಮೋದನೆ ಅಂತೆ. ಮುಂದೆ ಟನಲ್ ರೋಡ್, ಮೆಟ್ರೋ, ಅಂಡರ್ ಪಾಸ್ ಎಲ್ಲಾ ಇವರೇ ಮಾಡಿಬಿಡುತ್ತಾರೆ. ಎಲ್ಲವೂ ಸಿಎಂ ಅಡಿಯಲ್ಲೇ ನಡೆಯಬೇಕು ಎಂಬ ದುರಾಸೆ, ಅಧಿಕಾರ ಕೇಂದ್ರೀಕರಣ. ಈಗ ಬ್ರಾಂಡ್ ಬೆಂಗಳೂರು ಬಗ್ಗೆ ಒಂದು ವರ್ಷದಿಂದ ಎಲ್ಲಾದರೂ ಹೇಳಿದ್ದಾರಾ?. ಆರು ತಿಂಗಳಿಗೊಮ್ಮೆ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಈ ತರಹದ ಸ್ಕೀಮ್. ಅಭಿವೃದ್ಧಿ ಅಗಿರುವುದಕ್ಕೆ ಟ್ರಾಫಿಕ್ ಜಾಂ ಅಂತಾ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಗುಂಡಿ ಬಿದ್ದಿದ್ದೇ ಸರ್ಕಾರದ ಅಭಿವೃದ್ಧಿ ಸಾಧನೆ ಅಂತಾದರೆ ಅದನ್ನೂ ಹೇಳಿಬಿಡಿ ಎಂದಿದ್ದಾರೆ.
ಮಾತು ಕೊಟ್ಟಿರುವ 25 ಕೋಟಿ ಅನುದಾನ ಕೊಡಲು ಯೋಗ್ಯತೆ ಕಳೆದುಕೊಂಡಿದ್ದಾರೆ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರೇ ಐದು ಪಾಲಿಕೆಗಳಲ್ಲಿ ಬೆಂಗಳೂರು ಕೇಂದ್ರ ಹೊರತುಪಡಿಸಿ ಉಳಿದ ಕಡೆ ಸಭೆ ಮಾಡಲು ಸಭಾಂಗಣ ಎಲ್ಲಿದೆ?.
ಪುಟ್ ಬಾಲ್ ಮೈದಾನದಲ್ಲಿ ಮಾಡ್ತೀರಾ? ಹಾಕಿ
ಮೈದಾನದಲ್ಲಿ ಮಾಡ್ತೀರಾ?. ಸಿನಿಮಾ ಥಿಯೇಟರ್ ನಲ್ಲಿ ಸಭೆ ಮಾಡುತ್ತೀರಾ?. ಬೆಂಗಳೂರು ಒಡೆಯುವ ಪಾಪದ ಕೆಲಸ ಮಾಡಿ ಪಾಪಿಗಳಾಗಬೇಡಿ ಎಂದು ಹೇಳಿದ್ದೆವು. ಐದು ಗ್ಯಾರಂಟಿ ತಂದು ರಾಜ್ಯದ ಅಭಿವೃದ್ಧಿ ಕುಂಠಿತ ಮಾಡಿದಂತೆ ಜಿಬಿಎ ಮಾಡಿ ಬೆಂಗಳೂರನ್ನು ಹಳ್ಳ ಹಿಡಿಸಿದ್ದಾರೆ.ಸರ್ಕಾರದ ದುಡ್ಡಿನಲ್ಲಿ ಇಂದು ಪತ್ರಿಕಾ ಜಾಹೀರಾತು ಕೊಟ್ಟಿದ್ದಾರೆ. ಸರ್ಕಾರದಲ್ಲಿ ಔಟ್ ಗೋಯಿಂಗ್, ಇನ್ ಕಮಿಂಗ್ ಏನಾದರೂ ಇದ್ಯಾ?
ಅದಕ್ಕೆ ತರಾತುರಿಯಲ್ಲಿ ಜಿಬಿಎ ಸಭೆ, ಡಿನ್ನರ್ ಮೀಟಿಂಗ್ ಮಾಡುತ್ತಿದ್ದಾರಾ?. ನಾವು ಇಂದಿನ ಸಭೆಯನ್ನು ಬಹಿಷ್ಕಾರ ಮಾಡಿದ್ದೇವೆ. ನಾಮಕಾವಸ್ತೆ ಮೇಯರ್ ಮಾಡಲು ಮರಣ ಶಾಸನ ತಂದಿದ್ದಾರೆ ಅಷ್ಟೇ.ಜಿಬಿಎ ಬೆಂಗಳೂರಿಗೆ ಮಾರಕ ಎಂಬ ಕಾರಣಕ್ಕೆ ನಾವು ಬೆಂಗಳೂರಿನ ಹಿತದೃಷ್ಟಿಯಿಂದ ಬಹಿಷ್ಕಾರ ಮಾಡಿದ್ದೇವೆ. ಕೋರ್ಟ್ ನಲ್ಲಿ ಏನಾಗುತ್ತದೆ ಅಂತಾ ನೋಡೋಣ ಎಂದಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿ ಅವರ ಜೊತೆಯೂ ಮಾತುಕತೆ ಮಾಡಿದ್ದೇನೆ. ಸಭೆಗೆ ಹೋಗುವುದು ಬೇಡ ಎಂದು ಅವರೂ ಹೇಳಿದ್ದಾರೆ. ಇಂದಿನ ಜಿಬಿಎ ಸಭೆ ಕಾನೂನು ಬಾಹಿರ ಎಂದ ಅವರು ಬಿಜೆಪಿ ಅವಧಿಯಲ್ಲಿ ಸಾಲ ಎಂಬ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ನಾವು ಸಾಲ ಮಾಡಿದ್ದೇವೆ ಅಂತಾದರೆ ಅವರ ಕಾಲದಲ್ಲಿ ಹಿಂದೆ ಎಷ್ಟು ಸಾಲ ಮಾಡಿದ್ದಾರೆ?.
ಕೆಲವು ಕಟ್ಟಡಗಳನ್ನು ಮಾರಿಯೇ ಬಿಟ್ಟಿದ್ದಾರೆ ಇಂದಿನ ಸಭೆಯನ್ನು ಅವರು ಕಾನೂನು ಪ್ರಕಾರ ಕರೆದಿದ್ದಾರಾ?. ಹಾಗಾದರೆ ಇನ್ನು ಮುಂದೆ ಜಿಬಿಎ ಸಭೆ ಇದೇ ರೀತಿ ನಡೆಯುತ್ತಾ? ಎಂದಿದ್ದಾರೆ.











