ಹಾಸನ; ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ನನ್ನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅರಕಲಗೂಡಿನ ಜೆಡಿಎಸ್ ಕಾರ್ಯಕರ್ತ ದೂರು ನೀಡಿದ ಬೆನ್ನಲ್ಲೇ ಪೊಲೀಸರು ಸೂರಜ್ ಅವರನ್ನು ಅರೆಸ್ಟ್ ಮಾಡಿದ್ದರು. ಕೋರ್ಟ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.ಸದ್ಯ ಸೂರಜ್ ರೇವಣ್ಣ ಸಿಐಡಿ ಕಸ್ಟಡಿಯಲ್ಲಿದ್ದಾರೆ. ಹೀಗಿರುವಾಗಲೇ ಸೂರಜ್ ರೇವಣ್ಣ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.
ಅಚ್ಚರಿ ಎಂದ್ರೆ ಸೂರಜ್ ಆಪ್ತನೇ ಈ ದೂರು ದಾಖಲಿಸಿದ್ದಾನೆ. ಮೊನ್ನೆ ಸೂರಜ್ ರೇವಣ್ಣ ವಿರುದ್ಧ ಅರಕಲಕೂಡಿನ ಯುವಕ ದೂರು ನೀಡುತ್ತಿದ್ದಂತೆ ಸೂರಜ್ ಪರವಾಗಿ ಅವರ ಆಪ್ತ ದೂರು ನೀಡಿದ್ದ. ಇದರ ಬೆನ್ನಲ್ಲೇ ಸೂರಜ್ ರೇವಣ್ಣ ಅರೆಸ್ಟ್ ಆಗಿದ್ದರು. ಆದರೆ ಸೂರಜ್ ಅರೆಸ್ಟ್ ಆಗುತ್ತಿದ್ದಂತೆ ಅವರ ಆಪ್ತ ನಾಪತ್ತೆಯಾಗಿದ್ದ. ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು.ಆತ ಯಾರ ಕೈಗೂ ಸಿಕ್ಕಿರಲಿಲ್ಲ. ಅಲ್ಲದೇ ಹಾಸನದ ಸೆನ್ ಠಾಣೆಯಲ್ಲಿ ಸೂರಜ್ ಅವರನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲೂ ಸೂರಜ್ ಇದು ನನ್ನ ಆಪ್ತನೇ ನನ್ನ ವಿರುದ್ಧ ಷಡ್ಯಂತ್ರ ಮಾಡಿರೋದು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಇಷ್ಟೆಲ್ಲಾ ಆಗುತ್ತಿದ್ದಂತೆ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಆತ ಪತ್ತೆಯಾಗಿರಲಿಲ್ಲ.ಆದರೆ ಇಂದು ಆತ ದಿಢೀರ್ ಪ್ರತ್ಯಕ್ಷವಾಗಿದ್ದು ಸೂರಜ್ ವಿರುದ್ಧವೇ ದೂರು ಕೊಟ್ಟಿದ್ದಾನೆ.
ಹೊಳೇನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಡಾ.ಸೂರಜ್ ರೇವಣ್ಣ ಆಪ್ತ 3 ವರ್ಷಗಳ ಹಿಂದೆ ನನ್ನ ಮೇಲೂ ಸೂರಜ್ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ನೀಡಿದ್ದು ಅದರಂತೆ ಎಫ್‌ಐಆರ್ ದಾಖಲಾಗಿದೆ.ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 377, 342, 506ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದೀಗ ಸೂರಜ್ ಪರವಾಗಿ ದೂರು ಕೊಟ್ಟತಾನೇ ಸೂರಜ್ ವಿರುದ್ಧವಾಗಿ ದೂರು ನೀಡಿರೋದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಈಗಾಗಲೇ ಅರೆಸ್ಟ್ ಆಗಿ ಸಿಐಡಿ ಕಸ್ಟಡಿಯಲ್ಲಿರುವ ಸೂರಜ್ ರೇವಣ್ಣಗೆ ಇದೀಗ ಮತ್ತೊಂದು ಎಫ್ ಐ ಆರ್ ದಾಖಲಾಗಿರೋದು ಮತ್ತೊಂದು ಸಂಕಷ್ಟ ತಂದೊಡ್ಡಿದೆ. ಈ ಬಗ್ಗೆ ನಿಜಾಂಶ ತನಿಖೆಯಿಂದ ಗೊತ್ತಾಗಲಿದೆ.