ಬೆಂಗಳೂರು: ಈಗ ಸಿದ್ದರಾಮಯ್ಯ ಅವರನ್ನು ಅಂಬಾಸಿಡರ್ ಆಗಿ ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಲೇವಡಿ ಮಾಡಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿ ವಿಚಾರದ ಬಗ್ಗೆ ಮಾತನಾಡಿದ ಅವರು ಧರ್ಮವನ್ನು ಕೇಳಿಯೇ ಗುಂಡು ಹೊಡೆದಿದ್ದಾರೆ. ಎಲ್ಲಾ ಮಾಧ್ಯಮಗಳಲ್ಲಿ ಈ ವಿಚಾರ ಬಂದಿದೆ. ಆದರೂ ಸಿಎಂ ಆದಿಯಾಗಿ ಸಚಿವರೆಲ್ಲಾ ಹಾಗೆ ಆಗಿಯೇ ಇಲ್ಲ ಎನ್ನುತ್ತಿದ್ದಾರೆ. ಏನಪ್ಪಾ ತಿಮ್ಮಾಪುರ, ನೀನೇನಾದರೂ ಕಾಲ್ ಮಾಡಿ ಕೇಳಿದ್ಯಾ? . ಇವರಿಗೆ ದೇಶ ಮುಖ್ಯ ಅಲ್ಲ, ಓಟು ಮುಖ್ಯ ಅಷ್ಟೇ. ಯುದ್ಧದ ಕಾರ್ಮೋಡ ಇದೆ . ಈಗ ಸಿದ್ದರಾಮಯ್ಯ ಅವರನ್ನು ಅಂಬಾಸಿಡರ್ ಆಗಿ ಪಾಕಿಸ್ತಾನಕ್ಕೆ ಕಳುಹಿಸಬೇಕು. ಯುದ್ದ ಬೇಡ ಎಂದು ಮಿಲಿಟರಿ, ಸಮಿತಿ ತೀರ್ಮಾನ ಮಾಡುತ್ತದೆ ಎಂದು ಅಪಹಾಸ್ಯ ಮಾಡಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಅವರು ಶಾಸಕರನ್ನು ಅಮಾನತು ಮಾಡಿದ್ದರ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದೇವೆ. ಸ್ಪೀಕರ್ ಜೊತೆ ಮಾತನಾಡುವುದಾಗಿ ರಾಜ್ಯಪಾಲರು ಹೇಳಿದ್ದಾರೆ. ನಾನು ಮತ್ತು ವಿಜಯೇಂದ್ರ ಸಿಎಂ ಜೊತೆ, ಸ್ಪೀಕರ್ ಜೊತೆ ಮಾತಾಡಿದ್ದೇವೆ. ರಾಜ್ಯಪಾಲರು ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದ್ರು.
ರಾಜಣ್ಣ ಸಿಡಿ ಬಂದಿದೆ ಎಂದು ಅಂಗಲಾಚಿ ಹೇಳಿದ್ದರು. 4% ಧರ್ಮಾಧಾರಿತ ಮೀಸಲಾತಿ ನೀಡಿದ್ದು ಸಂವಿಧಾನದ ವಿರುದ್ದವಾಗಿತ್ತು. ಈ ಎರಡು ವಿಚಾರ ಇಟ್ಟು ಸದನದಲ್ಲಿ ಹೋರಾಟ ಮಾಡಿದ್ದೆವು. ಈ ಸಂದರ್ಭದಲ್ಲಿ ಸ್ಪೀಕರ್ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿದರು. ನಾವು ಮಾತಾಡುವುದೇ ತಪ್ಪು ಎಂದರೆ ಹೇಗೆ?. ಸ್ಪೀಕರ್ ಗೆ ಭೇಟಿ ಮಾಡಿ ಮನವಿ ಮಾಡಿದ್ದೆವು. ಈ ಹಿಂದೆ ಸದನದಲ್ಲಿ ಬಟ್ಟೆ ಹರಿದು ಹಾಕಿದ್ದರು, ಬಾಗಿಲು ಒದ್ದಿದ್ದರು.ಆಗ ನಾವು ಸಂವಿಧಾನಕ್ಕೆ ಪೂರಕವಾಗಿ ನಡೆದುಕೊಂಡಿದ್ದೆವು. ಆಡಳಿತ ಪಕ್ಷದಷ್ಟೇ ವಿಪಕ್ಷವೂ ಮುಖ್ಯ. ಈ ಸಂಬಂಧ ರಾಜ್ಯಪಾಲರನ್ನು ಭೇಟಿಯಾಗಿದ್ದೆವು. ಸ್ಪೀಕರ್ ಹಾಗೂ ಸಚಿವರ ಜೊತೆ ಮಾತಾಡುವುದಾಗಿ ರಾಜ್ಯಪಾಲರು ಹೇಳಿದ್ದಾರೆ. 18 ಶಾಸಕರಿಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ರೈಲ್ವೇ ಪರೀಕ್ಷೆಯಲ್ಲಿ ಮಂಗಳಸೂತ್ರ, ಜನಿವಾರ ಹಾಕಬಾರದು ಎಂಬ ನಿಯಮಾವಳಿ ವಿಚಾರದ ಬಗ್ಗೆ ಮಾತನಾಡಿದ ಅವರು ಲಾಖೆಯಿಂದ ಸೂಚನೆ ಕೊಡಲಾಗಿದೆ. ಆ ರೀತಿ ಮಾಡಬಾರದು ಎಂದು ತಿಳಿಸಲಾಗಿದೆ. ಹಾಗೇನಾದರೂ ಮಾಡಿದರೆ ಅಧಿಕಾರಿಗಳ ಮೇಲೆ ಕ್ರಮ ಆಗಲಿದೆ. ಈ ಬಗ್ಗೆ ಪ್ರಹ್ಲಾದ್ ಜೋಶಿ ಕಚೇರಿಯಿಂದ ಮಾಹಿತಿ ಬಂದಿದೆ ಎಂದರು.
ಯುದ್ಧ ಬೇಡ ಎಂದು ಸಿಎಂ ಹೇಳಿದ ಮೇಲೆ ಸಚಿವರು ಹೇಳುವುದು ವಿಶೇಷ ಅಲ್ಲ: ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ
ಬೆಂಗಳೂರು: ಯುದ್ಧ ಬೇಡ ಎಂದು ಸಿಎಂ ಹೇಳಿದ ಮೇಲೆ ಸಚಿವರು ಹೇಳುವುದು ವಿಶೇಷ ಅಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಯುದ್ಧ ಬೇಡ ಎಂಬ ಸಿಎಂ, ಸಚಿವರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಯುದ್ಧ ಬೇಡ ಎಂದು ಸಿಎಂ ಹೇಳಿದ ಮೇಲೆ ಸಚಿವರು ಹೇಳುವುದು ವಿಶೇಷ ಅಲ್ಲ. ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬೆಂಬಲ ಎಂದು ಖರ್ಗೆಯವರು ಹೇಳಿದ್ದಾರೆ. ನಿರ್ಧಾಕ್ಷಿಣ್ಯ ಕ್ರಮ ಆಗಬೇಕು ಎಂದು ಶಶಿ ತರೂರ್ ಹೇಳಿದ್ದಾರೆ. ಸಿಎಂ ಅವಿವೇಕದ ಹೇಳಿಕೆ ಬಿಟ್ಟು ಕೇಂದ್ರದ ನಿರ್ಧಾರಕ್ಕೆ ಕೈ ಜೋಡಿಸಬೇಕು ಎಂದರು.
ರೈಲ್ವೇ ಇಲಾಖೆ ಪರೀಕ್ಷೆಗೆ ಮಂಗಳ ಸೂತ್ರ, ಜನಿವಾರ ಬಳಸಬಾರದು ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಅಶೋಕ್ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಜೊತೆ ಮಾತಾಡಿದ್ದಾರೆ. ಜೋಷಿ ಅವರು ಕೇಂದ್ರ ರೈಲ್ವೇ ಸಚಿವರ ಜೊತೆ ಮಾತಾಡಿದ್ದಾರೆ. ಯಾರೋ ಅಧಿಕಾರಿ ಉದ್ಧಟತನ ಮಾಡಿದ್ದಾರೆ. ಇದನ್ನು ಸಹಿಸಬಾರದು, ಇದು ತಪ್ಪು. ನಾವು ಕೇಂದ್ರದ ಜೊತೆ ಮಾತಾಡಿದ್ದೇವೆ. ಶಾಸಕರ ಅಮಾನತು ಸಂಬಂಧ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ . ಪ್ರಜಾಪ್ರಭುತ್ವ ವಿರೋಧಿ ನಡೆಯಿಂದ ರಾಜ್ಯ ಸರ್ಕಾರ ಹಿಂದಡಿ ಇಡಬೇಕು. ರಾಜ್ಯಪಾಲರು ಸರ್ಕಾರಕ್ಕೆ ಬುದ್ದಿ ಹೇಳಬೇಕು ಎಂದು ಮನವಿ ಮಾಡಿದ್ದೇವೆ ಎಂದರು.