ಬೆಂಗಳೂರು: ನಮ್ಮ ಒಬ್ಬ ಸೈನಿಕ ಕೂಡಾ ಪಾಕಿಸ್ತಾನ ದಾಳಿಯಲ್ಲಿ ಸಾಯಲಿಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ಹೇಳಿದ್ದಾರೆ.
ಆಪರೇಷನ್ ಸಿಂಧೂರದ ಅಂಗವಾಗಿ ಭಾರತದ ಸೇನೆಯೊಂದಿಗೆ ರಾಷ್ಟ ರಕ್ಷಣೆಗಾಗಿ ನಾಗರಿಕರು ಎಂಬ ವಿಷಯದೊಂದಿಗೆ ಬಿಜೆಪಿ ಇಂದು ಬೆಂಗಳೂರಿನಲ್ಲಿ ತಿರಂಗ ಯಾತ್ರೆಯನ್ನು ಹಮ್ಮಿಕೊಂಡಿತ್ತು. ಅದರಲ್ಲಿ ಭಾಗಿಯಾಗಿ ಮಾತನಾಡಿದ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ಪಹಲ್ಗಾಮ್ ಘಟನೆಗೆ ಮೋದಿ ನೇತೃತ್ವದಲ್ಲಿ ಸೇನೆ ಎಲ್ಲಾ ಯುದ್ಧ ನಿಯಮ ಪಾಲಿಸಿ ಪ್ರತೀಕಾರ ತೆಗೆದುಕೊಂಡರು. ನಮ್ಮ ಒಬ್ಬ ಸೈನಿಕ ಕೂಡಾ ಪಾಕಿಸ್ತಾನ ದಾಳಿಯಲ್ಲಿ ಸಾಯಲಿಲ್ಲ. ಉಗ್ರರ ಹೊರತಾಗಿ ಪಾಕಿಸ್ತಾನದ ಸೈನಿಕರು ಸಾಯಲಿಲ್ಲ. ಅವರ ನಾಗರೀಕರಿಗೂ ನಾವು ತೊಂದರೆ ಮಾಡಲಿಲ್ಲ. ಕದನ ವಿರಾಮ ಸಾಕಷ್ಟು ಬಾರಿ ಪಾಕ್ ಉಲ್ಲಂಘಿಸಿತು.ಭಾರತ ಇಡೀ ಜಗತ್ತಿಗೆ ತನ್ನ ಏರ್ ಡಿಫೆನ್ಸ್ ವ್ಯವಸ್ಥೆಯ ಶಕ್ತಿ ತೋರಿಸಿದೆ ಎಂದರು.
ಗಾಂಧಿಯವರ ಅಹಿಂಸಾ ಆಂದೋಲನ ಯುದ್ಧ ಕಾಲದಲ್ಲಿ ಹೇಗಿರಬೇಕು ಎನ್ನುವುದೂ ನಮಗೆ ಗೊತ್ತು. ಅವರ ನಾಗರೀಕರು ನಮ್ಮ ದಾಳಿಯಿಂದ ಸತ್ತಿಲ್ಲ .ಈ ಮೂಲಕ ಯುದ್ಧ ಸಂದರ್ಭದಲ್ಲೂ ಭಾರತ ಅಹಿಂಸೆ ಪಾಲಿಸಿದೆ. ಇದೇ ವೇಳೆ ಕದನ ವಿರಾಮ ಕುರಿತು ಕಾಂಗ್ರೆಸ್ ಟೀಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಚಲಿಸುತ್ತಿರುವ ರೈಲು ನೋಡಿ ರೈಲು ಹೋಗುತ್ತಿದೆ ಅಂತ ಹೇಳಿದಂತಾಗಿದೆ ಟ್ರಂಪ್ ಧೋರಣೆ. ಕದನ ವಿರಾಮ ನಿರ್ಧಾರದ ನಂತರ ಟ್ರಂಪ್ ಅದನ್ನು ಹೇಳಿದ್ದು. ಕದನ ವಿರಾಮ ಬಗ್ಗೆ ಮೊದಲು ನಮ್ಮ ಡಿಜಿಎಂಒ ಅವರನ್ನು ಸಂಪರ್ಕಿಸಿದ್ದು ಪಾಕ್ ಡಿಜಿಎಂಒ.ಎರಡು ಸಲ ಅವರು ಸಂಪರ್ಕಿಸಿ ಕದನ ವಿರಾಮಕ್ಕೆ ಅಂಗಲಾಚಿದ್ದರು ಎಂದಿದ್ದಾರೆ.
ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಇಲ್ಲದಿದ್ದರೆ 1971 ರ ಯುದ್ದವನ್ನೂ ಸೋಲುತ್ತಿದ್ದೆವು. ಯುದ್ದ ಯಾವಾಗ ಮಾಡಬೇಕು ಎಂದು ಮಾಣಿಕ್ ಶಾ ಸಲಹೆ ಕೊಟ್ಟರು. ಹಾಗಾಗಿ ಪಾಕ್ ವಿರುದ್ದ ಭಾರತ ಗೆದ್ದಿದೆ. ಯುದ್ದ ಗೆದ್ದ ಮೇಲೆ, ಸಂಧಾನ ಟೇಬಲ್ ಮೇಲೆ ಸೋತೆವು. ಯುದ್ಧದಲ್ಲಿ ಸೇನೆ ಗೆದ್ದರು, ಇಂದಿರಾ ಸೋಲಿಸಿದರು ಎಂದರು. ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಸಚಿವ ವಿಜಯ್ ಶಾಹು ಹೇಳಿಕೆ ವಿಚಾರ ದ ಬಗ್ಗೆ ಮಾತನಾಡಿದ ಅವರು ಪಕ್ಷ ಅವರನ್ನು ಕ್ಷಮಿಸಲ್ಲ. ಆದರೆ ಹೇಳಿಕೆ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳುವುದಾದರೆ ಶಶಿ ತರೂರ್, ಚಿದಂಬರಂ ಬಿಟ್ಟು ಕಾಂಗ್ರೆಸ್ ನಲ್ಲಿ ಯಾರೂ ಇರಲ್ಲ.ಮೊದಲನೆಯದಾಗಿ ರಾಹುಲ್ ಗಾಂಧಿಯ ರಾಜೀನಾಮೆಯನ್ನೇ ನಾವು ಕೇಳಬೇಕು ಎಂದರು.
ಸಿಂಧೂ ನದಿ ಒಪ್ಪಂದ ಅಕ್ರಮವಾಗಿತ್ತು. ಕಾಂಗ್ರೆಸ್ ಅವಧಿಯಲ್ಲಿ 90% ನೀರಿನ ಹಕ್ಕು ಪಾಕ್ ಗೆ ಕೊಟ್ಟಿತ್ತು.ಇದು ಯಾವ ರೀತಿಯ ಒಪ್ಪಂದ ಆಗಿತ್ತು ಹೇಳಿ?. ಸಿಂಧೂ ನದಿ ಒಪ್ಪಂದ ನಡೆದಿದ್ದು 1960 ರಲ್ಲಿ ಆಗಿನ ಕಾಂಗ್ರೆಸ್ ನೀರಿನ ಹಕ್ಕನ್ನೂ ಪಾಕ್ ಗೆ ಕೊಟ್ಟಿತು. ಜೊತೆಗೆ ಪಾಕಿಸ್ತಾನಕ್ಕೆ ಅವರ ದೇಶದಲ್ಲಿ ನಾಲೆಗಳನ್ನು ತೋಡಲು ಹಣ ಕೂಡಾ ಕೊಟ್ಟಿತು. ಇದು ಭಾರತೀಯರ ಹಿತಾಸಕ್ತಿಗೆ ವಿರುದ್ಧದ ಒಪ್ಪಂದ ಎಂದು ತಿಳಿಸಿದ್ರು.
ಕದನ ವಿರಾಮ ಬಗ್ಗೆ ಪ್ರಧಾನಿ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ನಮ್ಮ ಉದ್ದೇಶ ಈಡೇರಿದೆ, ಆತಂಕವಾದಿಗಳಿಗೆ ಶಿಕ್ಷೆ ಕೊಡುವುದು, ಖಡಕ್ ಸಂದೇಶ ಕೊಡುವುದು ನಮ್ಮ ಉದ್ದೇಶವಾಗಿತ್ತು.ಡೊನಾಲ್ಡ್ ಟ್ರಂಪ್ ಗೆ ಮಾತಾಡುವ ಚಾಳಿ, ಹಾಗಾಗಿ ಏನೇನೋ ಮಾತಾಡುತ್ತಾರೆ. ಇದು ಕದನ ವಿರಾಮ ಅಷ್ಟೇ, ಯುದ್ಧ ಜಾರಿಯಲ್ಲಿರುತ್ತದೆ.ಪಾಕ್ ಮತ್ತೆ ದಾಳಿ ನಡೆಸಿದರೆ ಯುದ್ಧ ಮುಂದುವರೆಯುತ್ತದೆ ಎಂದ ಅವರು ಸಿದ್ದರಾಮಯ್ಯ ಹಿಂದೂ ವಿರೋಧಿ ಹಾಗೂ ರಾಷ್ಟ್ರ ವಿರೋಧಿ ಹೇಳಿಕೆ ಕೊಡುತ್ತಿದ್ದಾರೆ. ಆದರೆ ಅವರ ರಾಷ್ಟ್ರ ವಿರೋಧಿ ಮಾನಸಿಕತೆ ಇಷ್ಟಪಡದ ಡಿ.ಕೆ. ಶಿವಕುಮಾರ್ ನಮ್ಮ ಭಾರತೀಯ ಸೇನೆಗೆ ಬೆಂಬಲಿಸಿ ಮಾತಾಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ನಡೆಗೆ ಅಭಿನಂದನೆ ಎಂದು ತಿಳಿಸಿದ್ರು.