ಬೆಂಗಳೂರು : ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪದಡಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ವಿರುದ್ಧ ಮಾರ್ಚ್ ತಿಂಗಳಲ್ಲಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ಬಾಲಕಿಯ ತಾಯಿ ಈ ದೂರನ್ನು ದಾಖಲಿಸಿದ್ದರು. ಕೇವಲ ಬಿಎಸ್ವೈ ಮಾತ್ರವಲ್ಲದೇ ಸಂತ್ರಸ್ತೆಯ ತಾಯಿ ಒಟ್ಟು 53 ಮಂದಿ ವಿರುದ್ಧ ದೂರು ದಾಖಲಿಸಿದ್ದರು. ಅದರಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು, ಬಿಸಿನೆಸ್ ಮ್ಯಾನ್‌ಗಳು ಸೇರಿದ್ದರು..ಇದೀಗ ಇದೇ ಪ್ರಕರಣ ಬಿಎಸ್ವೈ ಪಾಲಿಗೆ ಕಂಟಕವಾಗಿದೆ.
ಇನ್ನು ಬೆಂಗಳೂರನ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸದಲ್ಲಿ ಯಡಿಯೂರಪ್ಪ ಭೇಟಿಗೆ ತೆರಳಿದ್ದ ಸಂದರ್ಭದಲ್ಲಿ ತಮ್ಮ ಪುತ್ರಿಯೊಂದಿಗೆ ಯಡಿಯೂರಪ್ಪ ಅನುಚಿತವಾಗಿ ನಡೆದುಕೊಂಡಿದ್ದರು ಎಂದು ಸಂತ್ರಸ್ಥೆಯ ತಾಯಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಆಧರಿಸಿ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣದಡಿ ಎಫ್ ಐಆರ್ ದಾಖಲಾಗಿತ್ತಲ್ಲದೇ ನಂತರ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು
ಇದರ ಜೊತೆಯಲ್ಲೇ, ಯಡಿಯೂರಪ್ಪ ಅವರನ್ನು ಪ್ರಕರಣದಲ್ಲಿ ಬಂಧಿಸುವಂತೆ ನಿರ್ದೇಶನ ನೀಡುವಂತೆ ಕೋರಿ ಪೋಕ್ಸೋ ಕೇಸ್ ಸಂತ್ರಸ್ತೆಯ ಸಹೋದರನಿಂದ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಘಟನೆ ನಡೆದು ಕೆಲವು ತಿಂಗಳುಗಳು ಕಳೆದರೂ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ, ಯಡಿಯೂರಪ್ಪರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿಲ್ಲ ಮತ್ತು ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್ ವೈ ಮನೆಯ ಸಿಸಿ ಟಿವಿ ದೃಶ್ಯಾವಳಿಯನ್ನೂ ಈವರೆಗೆ ವಶಕ್ಕೆ ಪಡೆದಿಲ್ಲ ಎಂದು ಅರ್ಜಿ ಸಲ್ಲಿಸಿರುವ ಸಂತ್ರಸ್ಥೆಯ ಸಹೋದರ, ದೂರು ನೀಡಿದ್ದ ಸಂತ್ರಸ್ತೆಯ ತಾಯಿ ಮೃತಪಟ್ಟಿದ್ದು, ಸಂತ್ರಸ್ತೆಗೆ ನ್ಯಾಯ ಸಿಕ್ಕಿಲ್ಲವಾದ್ದರಿಂದ ಯಡಿಯೂರಪ್ಪ ಅವರನ್ನು ಬಂಧಿಸುವಂತೆ ನಿರ್ದೇಶಿಸಲು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಬುಧವಾರ ಸಿಐಡಿ ಪೊಲೀಸರು ಯಡಿಯೂರಪ್ಪ ಅವರಿಗೆ ನೋಟಿಸ್ ನೀಡಿದ್ದು, ಗುರುವಾರ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿತ್ತು. ಆದರೆ ಪೂರ್ವ ನಿಗದಿತವಾಗಿರುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೆಹಲಿಗೆ ತೆರಳುತ್ತಿರುವ ಕಾರಣ ಜೂನ್ 17 ರಂದು ವಿಚಾರಣೆಗೆ ಹಾಜರಾಗುವುದಾಗಿ ಯಡಿಯೂರಪ್ಪ ಸಿಐಡಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಇದರ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪ್ರತಿಕ್ರಿಯಿಸಿದ್ದ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಯಾವಾಗ ಬೇಕಾದರೂ ಯಡಿಯೂರಪ್ಪ ಅವರನ್ನು ಪೋಕ್ಸೋ ಪ್ರಕರಣದಲ್ಲಿ ಬಂಧಿಸುವ ಸಾಧ್ಯತೆಇದೆ ಎಂದಿದ್ದರು. ಇದರ ಬೆನ್ನಲ್ಲೇ ಇದೀಗ ಬಿಎಸ್ವೈ ಬಂಧನಕ್ಕೆ ಜಾಮೀನು ರಹಿತ ವಾರೆಂಟ್ ಜಾರಿಯಾಗಿದ್ದು ರಾಜ್ಯದಲ್ಲಿ ಬರೀ ಕ್ರೈಮ್ ಪ್ರಕರಣಗಳೇ ನಡೆಯುತ್ತಿತ್ತು ಏನಾಗುತ್ತಿದೆ ಎಂದು ಜನ ತಲೆ ಕೆಡಿಸಿಕೊಳ್ಳುವಂತಾಗಿದೆ.