ಬೆಂಗಳೂರು: ರಾಜ್ಯ ಸರ್ಕಾರ ಪಾಪರ್ ಆಗಿದೆ, ಅವರ ಬಳಿ ಹಣ ಇಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ರಸ್ತೆ ಗುಂಡಿ ವಿಚಾರದ ಬಗ್ಗೆ ಮಾತನಾಡಿದ ಅವರು ರಸ್ತೆ ಗುಂಡಿಗಳನ್ನು ನಾವೇ ಮುಚ್ಚೋಣ, ಜನ ಸಹಕಾರ ಮಾಡಿ. ಡಿ.ಕೆ. ಶಿವಕುಮಾರ್ ಅವರೇ ಬ್ಯಾಟರಿ ತೆಗೆದುಕೊಂಡು ಫ್ಲೈಟ್ ಹತ್ತಿ ಅಮೆರಿಕಾಕ್ಕೆ ಹೋಗಿ ಟ್ರಂಪ್ ಮನೆ ಮುಂದೆ ಗುಂಡಿ ಇದ್ಯಾ ನೋಡಿ. ಮೊದಲು ನಿಮ್ಮ ಮನೆ ನೋಡ್ರೀ.ಮೋದಿ, ಟ್ರಂಪ್ ಏನು ಮಾಡುತ್ತಿದ್ದಾರೆ ಅಂತಾ ನೋಡಲು ನಿಮ್ಮನ್ನು ಅಧಿಕಾರದಲ್ಲಿ ಇಟ್ಟಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ನಿಮ್ಮ ಬಳಿ ಹಣ ಇಲ್ಲ ಅಂತಾದರೆ ಓಪನ್ ಆಗಿ ಡಿಕ್ಲೇರ್ ಮಾಡಿ. ಮುಚ್ಚಿರುವ ಗುಂಡಿ ಲೆಕ್ಕ ಹೇಳುತ್ತಿದ್ದೀರಲ್ಲಾ, ತೆರೆದಿರುವ ಗುಂಡಿಗಳ ಬಗ್ಗೆ ಹೇಳಿ. ಸಾವಿರ ಗುಂಡಿ ಮುಚ್ಚಿದರೆ ಮರುದಿನ ಅದೇ ಸಾವಿರ ಗುಂಡಿ ಓಪನ್ ಆಗುತ್ತದೆ. ಇದು ಕಳ್ಳ ಪೊಲೀಸ್ ಆಟದ ರೀತಿ. ಬಿಜೆಪಿ ಸರ್ಕಾರ ಗುಂಡಿ ಮುಚ್ಚಿಲ್ಲ ಅಂತೀರಲ್ಲಾ. ಗುಂಡಿ ಮುಚ್ಚುವುದು ತಾತ್ಕಾಲಿಕ ಅಷ್ಟೇ, ಶಾಶ್ವತ ಅಲ್ಲ. ಇಡೀ ಕಾಂಗ್ರೆಸ್ ಸರ್ಕಾರ ಗುಂಡಿಗಳಲ್ಲಿ ಇದೆ. ರಸ್ತೆ ಗುಂಡಿಗಳು ಮರಣ ಕೂಪ ಆಗಿವೆ. ಬೆಂಗಳೂರು ಮಾತ್ರ ಅಲ್ಲ ಇಡೀ ರಾಜ್ಯದಲ್ಲಿ ಕೆಲಸ ಮಾಡಬೇಕಾಗಿದೆ. ನೀವು 5000 ಕೋಟಿ ಡಾಂಬರೀಕರಣ ಮಾಡಿದ್ದರೆ ಗುಂಡಿ ಯಾಕೆ ಬೀಳುತ್ತಿತ್ತು? ಎಂದು ಪ್ರಶ್ನೆ ಮಾಡಿದ್ದಾರೆ.
ನೀವು ಕಳಪೆ ಕಾಮಗಾರಿ ಮಾಡಿದ್ದೀರಿ ಅದಕ್ಕೆ ಗುಂಡಿ ಬಿದ್ದಿದೆ. ಬೆಂಗಳೂರಿನ ಎಲ್ಲಾ ರಸ್ತೆಗಳಿಗೆ ಇಂದಿನಿಂದಲೇ ಡಾಂಬರೀಕರಣ ಮಾಡಿ ಎಂದಿದ್ದಾರೆ
ಡಿಸಿಎಂ ಐಟಿ ಬಿಟಿ ಕಂಪನಿಗಳಿಗೆ ಮಾತ್ರ ಬೆಂಗಳೂರು ಬಿಟ್ಟು ಹೋಗಿ ಅಂದ್ರಿ. ಕಾರು, ಬೈಕ್ ಗಳಲ್ಲಿ ಓಡಾಡುವವರನ್ನು ಯಾವಾಗ ಬಿಟ್ಟು ಹೋಗಿ ಅಂತೀರಾ?.ನಾವು ರಜೆ ತೆಗೆದುಕೊಂಡು ಬೆಂಗಳೂರು ಬಿಟ್ಟು ಹೊರಗೆ ಹೋಗುತ್ತೇವೆ. ಈಗಲಾದರೂ ರಸ್ತೆ ರಿಪೇರಿ ಮಾಡುತ್ತೀರಾ?.ಕಂಪನಿಗಳಿಗೆ ಆವಾಜ್ ಹಾಕಿದಂತೆ ಬೆಂಗಳೂರಿನ ಜನರಿಗೆ ಯಾವಾಗ ಆವಾಜ್ ಹಾಕುತ್ತೀರಾ?.ಕಳೆದ ನಾಲ್ಕು ತಿಂಗಳಿನಿಂದ ಸಾವಿರ ಗುಂಡಿ ಮುಚ್ಚಿದ್ದೇವೆ ಎನ್ನುತ್ತಿದ್ದೀರಿ.ಕಾಂಗ್ರೆಸ್ ನವರಿಗೆ ಕೈ ಮುಗಿಯುತ್ತೇನೆ, ಪುಣ್ಯಕ್ಕೆ ಕೆಂಪೇಗೌಡರ ಕಾಲದಲ್ಲೇ ರಸ್ತೆ ಸರಿ ಮಾಡಿಲ್ಲ ಅಂತಾ ಹೇಳಲಿಲ್ವಲ್ಲಾ. ನಿಮ್ಮ ಹನಿಮೂನ್ ಟೈಮ್ ಮುಗಿದು ಮನೆಗೆ ಹೋಗುವ ಟೈಮ್ ಬಂದಿದೆ.ಜಿಬಿಎ ಚುನಾವಣೆ ಮಾಡುತ್ತಾರೆ ಅಂತಾ ಯಾವ ಗ್ಯಾರಂಟಿ? ಎಂದು ಪ್ರಶ್ನೆ ಮಾಡಿದ್ದಾರೆ.











