ಕಲಬುರಗಿಯಲ್ಲಿ ನಿಮ್ಹಾನ್ಸ್ ಆಸ್ಪತ್ರೆಯ ಶಾಖೆ ಸ್ಥಾಪಿಸುವಂತೆ ರಾಜ್ಯಸಭೆ ವಿರೋಧಪಕ್ಷದ ನಾಯಕರಾದ ಎಂ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಅವರನ್ನು ಒತ್ತಾಯಿಸಿದ್ದಾರೆ.
ಕಲಬುರಗಿಯ ಜಯದೇವ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದ ಅವರು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಒತ್ತುಕೊಡುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಖರ್ಗೆ ಅವರು ಈ ಭಾಗದ ಜನರು ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದರೆ ದೂರದ ಬೆಂಗಳೂರಿಗೆ ಹೋಗಬೇಕಾಗುತ್ತದೆ. ಹಾಗಾಗಿ ಇಲ್ಲಿ ನಿಮಾನ್ಸ್ ಶಾಖೆ ತೆರೆಯಬೇಕು ಎಂದು ಒತ್ತಾಯಿಸಿದರು.
ನಿಮಾನ್ಸ್ ಜೊತೆಗೆ ಗುಲಬರ್ಗಾ ವಿವಿಗೆ ಅಗತ್ಯ ಆರ್ಥಿಕ ನೆರವು ನೀಡುವ ಮೂಲಕ ಅಭಿವೃದ್ದಿಗೊಳಿಸ ಬೇಕು ಹಾಗೂ ಅಗತ್ಯವಿರುವ ಫ್ರೊಫೆಸರ್ ಹಾಗೂ ಇತರೆ ಸಿಬ್ಬಂದಿಗಳನ್ನು ನೇಮಿಸಬೇಕು. ಮತ್ತು ಪ್ರಮುಖವಾಗಿ ಹೊಸ ಹೊಸ ವಿಭಾಗಗಳನ್ನು ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಮಾಡಲು ಅನುಕೂಲ ಮಾಡಿಕೊಡಬೇಕು. ಬೆಂಗಳೂರು ಹಾಗೂ ಮೈಸೂರು ವಿವಿಗಳ ರೀತಿ ಅಭಿವೃದ್ದಿಗೊಳಿಸಬೇಕು. ಜೊತೆಗೆ ಕಲಬುರಗಿ ಯಲ್ಲಿ ಇನ್ಸ್ಟ್ಯೂಟ್ ಆಫ್ ಡಯಾಬೆಟಾಲಜಿ ಸ್ಥಾಪಿಸುವಂತೆ ಅವರು ಹೇಳಿದರು.
ಕಲಬರಗಿಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗಿದೆ ಆದರೆ ಇತ್ತೀಚಿಗೆ ವಿಮಾನಗಳು ಹಾರಾಟ ನಿಲ್ಲಿಸಿವೆ. ಈ ಬಗ್ಗೆ ಸಿಎಂ ಗಮನಹರಿಸಬೇಕು ಎಂದ ಅವರು ನಮ್ಮ ಭಾಗದ ಸಚಿವರು ಶಾಸಕರು ಸಿಎಂ ಅವರನ್ನು ಭೇಟಿ ಮಾಡಿ ಈ ಬೇಡಿಕೆಗಳ ಈಡೇರಿಕೆಗಾಗಿ ಪ್ರಯತ್ನಿಸಬೇಕು ಎಂದರು. ಕಲ್ಯಾಣ ಕರ್ನಾಟಕದಲ್ಲಿ ಹಾಗೂ ವಿಶೇಷವಾಗಿ ಕಲಬುರಗಿಯಲ್ಲಿ ಅಭಿವೃದ್ದಿ ಕೆಲಸ ನಡೆಯುತ್ತಿವೆ. ಬೇರೆ ಕಡೆ ಹೋದ ಕಡೆ ಸ್ವಲ್ಪ ಅಭಿವೃದ್ದಿ ಕೆಲಸ ನಡೆಯುತ್ತಿವೆ ಎನ್ನುತ್ತಿದ್ದಾರೆ. ಆದರೆ ಸ್ವಲ್ಪದರ ಬದಲು ಸಂಪೂರ್ಣ ಅಭಿವೃದ್ದಿ ಆಗಬೇಕು ಎಂದರು.
ಜಯದೇವ ಆಸ್ಪತ್ರೆ ಸಿಎಂ ಹಾಗೂ ಶರಣಪ್ರಕಾಶ ಪಾಟೀಲ ಅವರು ಕೊಡುಗೆ ಎಂದು ಖರ್ಗೆ, ಈ ಆಸ್ಪತ್ರೆ ಸಂವಿಧಾನ ಆರ್ಟಿಕಲ್ 371(J) ಜಾರಿಗೆ ಬಂದು ಹತ್ತು ವರ್ಷಗಳ ನೆನಪಿಗಾಗಿ ನಿರ್ಮಾಣ ಮಾಡಲಾಗಿದೆ. ಇದು ಏಷ್ಯಾದಲ್ಲೇ ಬಹಳ ದೊಡ್ಡ ಆಸ್ಪತ್ರೆಯಾಗಲಿದೆ. ಈ ಆಸ್ಪತ್ರೆಯಲ್ಲಿ ಸ್ವಚ್ಚತೆ ಕಾಪಾಡಬೇಕು. ಯಾಕೆಂದರೆ, ನಮ್ಮ ಕಲಬುರಗಿ ಯಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಿಸಾಡುತ್ತಾರೆ. ಹಾಗಾಗಿ, ಬೆಂಗಳೂರು ಹಾಗೂ ಮೈಸೂರು ಜಯದೇವ ಮಾದರಿಯಲ್ಲಿ ಕಲಬುರಗಿ ಯ ಜಯದೇವ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ದೇಶದಲ್ಲಿ ಬಡವರಿಗೆ ಶೈಕ್ಷಣಿಕ ಹಾಗೂ ಆರೋಗ್ಯದ ಸವಲತ್ತು ಸಿಗಬಾರದು ಎಂದು ಕೆಲವರ ಪ್ರಯತ್ನ ನಡೆದಿದೆ ಹಾಗಾಗಿ ಈ ಭಾಗದ ಜನರು ಶಿಕ್ಷಣಕ್ಕೆ ಒತ್ತು ನೀಡಬೇಕು. ಈ ಭಾಗ ಹಿಂದುಳಿದ ಹಣೆಪಟ್ಟಿಯಿಂದ ಹೊರಬರಬೇಕು. ಬೆಳಗಾವಿ, ಮೈಸೂರು ಹಾಗೂ ವಿಜಯಪುರದಲ್ಲಿ ಶೈಕ್ಷಣಿಕ ಸಂಸ್ಥೆ ಗಳು ಬೆಳೆದಿವೆ. ಇಲ್ಲಿ ಕೂಡಾ ಮಹಾದೇವಪ್ಪ ರಾಂಪುರೆ ಅವರು ಶೈಕ್ಷಣಿಕ ಸಂಸ್ಥೆ ಕಟ್ಟಿದ್ದಾರೆ. ಅಂತಹ ಶಿಕ್ಷಣ ಸಂಸ್ಥೆ ಗಳಿಗೆ ಪ್ರೋತ್ಸಾಹ ನೀಡಿ ಬೆಳೆಸಬೇಕು. ಜೊತೆಗೆ ಮತ್ತಷ್ಟು ಶಿಕ್ಷಣ ಸಂಸ್ಥೆಗಳು ಬೆಳೆಸಿ ಎಂದು ಸಲಹೆ ನೀಡಿದ ಅವರು ಈ ವಿಚಾರದಲ್ಲಿ ನಿಯತ್ತು ಇರಬೇಕು ಎಂದರು.











