ಬೆಂಗಳೂರು; ನಾಳೆಯಿಂದ ವಿಧಾನಮಂಡಲ ಅಧಿವೇಶನ ಹಿನ್ನೆಲೆ ವಿಧಾನ ಸೌಧದ ಕೆಂಗಲ್ ಗೇಟ್ ಗೆ ಹೊಸ ಲುಕ್ ಬಂದಿದೆ. ಅಲ್ಲದೇ ಶಾಸಕರು ಪ್ರವೇಶಿಸುವ ವಿಧಾನಸಭಾ ಸಭಾಂಗಣದ ದ್ವಾರಕ್ಕೆ ಹೊಸ ಮೆರುಗು ನೀಡಲಾಗಿದೆ.
ಮರದ ಕೆತ್ತನೆಗಳ ದ್ವಾರ ಅಳವಡಿಕೆ ಮಾಡಲಾಗಿದ್ದು, ಕೆಂಗಲ್ ಗೇಟ್ ಬಳಿ ಮೆಟ್ಟಿಲುಗಳಿಗೆ ರೆಡ್ ಕಾರ್ಪೆಟ್ ಹಾಕಲಾಗಿದೆ.ರಾಜ್ಯದ ಲಾಂಛನ ಗಂಡಭೇರುಂಡ ಜೊತೆಗೆ ಕ್ಲಾಕ್ ಅಳವಡಿಸಿದ್ದು ಅಂದವನ್ನು ಇಮ್ಮಡಿಗೊಳಿಸಿದೆ.ಹೀಗಾಗಿ ಸದ್ಯ ಕೆಂಗಲ್ ಗೇಟ್ ಅರಮನೆಯ ದ್ವಾರದಂತೆ ಭಾಸವಾಗುತ್ತಿದೆ. ಶಾಸಕರನ್ನು ಸ್ವಾಗತಿಸಲು ವಿಧಾನಸೌಧದ ಪಶ್ಚಿಮ ಪ್ರವೇಶ ದ್ವಾರ ಸಜ್ಜಾಗಿ ನಿಂತಿದೆ. ನಾಳೆ ಸದನ ಪ್ರಾರಂಭವಾಗುವ ಮೊದಲು ನೂತನ ದ್ವಾರ ಲೋಕಾರ್ಪಣೆಯಾಗಲಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ವಿಧಾನಸೌಧ ಸಂವೇದನಾ ಮತ್ತು ಪ್ರಜಾಪ್ರಭುತ್ವವನ್ನ ಬಿಂಬಿಸುವ ಕಟ್ಟಡ.ಹೊರಗಡೆಯಿಂದ ಎಷ್ಟು ಸೊಗಸಾಗಿ ಕಾಣುತ್ತದೆಯೋ ಒಳಗಿಂದಲೂ ಅದೇ ರೀತಿ ಸುಂದರವಾಗಿ ಕಾಣಬೇಕು.ಖುಷಿಯ ವಾತಾವರಣ ನಿರ್ಮಿಸುವ ಸಂಬಂಧ ಬೀಟಿ ಮರದಿಂದ ಗುಲಾಬಿ ವಿನ್ಯಾಸವನ್ನ ನೀಡಿದ್ದೀವಿ.ಮಳೆ ಸುರಿಯುವ ವ್ಯವಸ್ಥೆ ಇತ್ತು.ನಾಳೆ ಸಿಎಂ ಸಿದ್ದರಾಮಯ್ಯ ಇದನ್ನ ಉದ್ಘಾಟಿಸಲಿದ್ದಾರೆ.ಸದನದ ಒಳಭಾಗದಲ್ಲೂ ಮೆರಗನ್ನ ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ ಎಂದಿದ್ದಾರೆ. ಪ್ರತಿಯೊಂದಕ್ಕೂ ಹಣಕಾಸಿನ ಅನುಮತಿಬೇಕು.ಸ್ಪೀಕರ್ ಕಚೇರಿಗೆ ಕೊಡುವ ಹಣದಿಂದ ಅಲಂಕಾರ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ನಾಳೆಯಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆ;ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ
ಬೆಂಗಳೂರು; ನಾಳೆಯಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆ ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ರು.
ಈ ವೇಳೆ ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆಯಾಗುವ ವಿಷಯಗಳಿಗೆ ಸಮರ್ಪಕ ಉತ್ತರ ನೀಡಲು ಸಿದ್ಧರಾಗಿರುವಂತೆ ಹಾಗೂ ಅಧಿವೇಶನದಲ್ಲಿ ಖುದ್ದು ಹಾಜರಿದ್ದು, ಸಚಿವರಿಗೆ ತಮ್ಮ ಇಲಾಖೆಗಳ ವಿಷಯಗಳ ಕುರಿತ ಮಾಹಿತಿ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಮಂಡಲ ಅಧಿವೇಶನಕ್ಕೆ ಪೂರ್ವಭಾವಿಯಾಗಿ ಎಲ್ಲ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆ ನಡೆಸಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ಈ ಬಾರಿ ಸಂಪೂರ್ಣ ಬಜೆಟ್‌ಗೆ ಮಾರ್ಚ್ ನಲ್ಲಿಯೇ ಅನುಮೋದನೆ ದೊರೆತಿರುವ ಕಾರಣ ಇದು ಬಜೆಟ್ ಬಗ್ಗೆ ಚರ್ಚಿಸುವ ಅಧಿವೇಶನ ಅಲ್ಲ.ಯಾವಾಗಲೂ ಮಾರ್ಚ್ ನಲ್ಲಿ ಲೇಖಾನುದಾನ ಪಡೆದು, ಮಳೆಗಾಲದ ಅಧಿವೇಶನದಲ್ಲಿ ಪೂರ್ಣ ಬಜೆಟ್ ಗೆ ಅನುಮೋದನೆ ಪಡೆಯಲಾಗುತ್ತಿತ್ತು.ಈ ಬಾರಿ ಪೂರ್ಣ ಬಜೆಟ್ ಅನುಮೋದನೆ ಆಗಿರುವ ಹಿನ್ನೆಲೆ ವಿರೋಧ ಪಕ್ಷದವರು ಈ ಬಾರಿಯ ಸಂಪೂರ್ಣ ಅಧಿವೇಶನವನ್ನು ವಿವಿಧ ಆರೋಪ ಮಾಡುವ ಕುರಿತು ಬಳಸಿಕೊಳ್ಳುವ ಸಾಧ್ಯತೆ ಇದೆ.ಇದಕ್ಕೆ ಸೂಕ್ತ ಉತ್ತರ ನೀಡಲು ಅಧಿಕಾರಿಗಳು ಸಿದ್ಧರಾಗಿರಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು. ಅಲ್ಲದೇ ವಿವಿಧ ಇಲಾಖೆಗಳಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇರುವ ವಿಷಯಗಳ ಕುರಿತು ಇಲಾಖಾ ಕಾರ್ಯದರ್ಶಿಗಳಿಂದ ಮುಖ್ಯಮಂತ್ರಿಗಳು ಸವಿಸ್ತಾರವಾಗಿ ಮಾಹಿತಿ ಪಡೆದರು
ಚರ್ಚೆಯ ಸಾಧ್ಯತೆ ಇರುವ ವಿಷಯಗಳ ಕುರಿತು ದತ್ತಾಂಶಗಳನ್ನು ಸಂಗ್ರಹಿಸಲು ಸಹ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.ಎಲ್ಲ ಕಾರ್ಯದರ್ಶಿಗಳೂ, ಇಲಾಖಾ ಮುಖ್ಯಸ್ಥರು ಅಧಿವೇಶನದಲ್ಲಿ ಹಾಜರಿರಬೇಕು.ಸಚಿವರಿಗೆ ಸಮರ್ಪಕವಾಗಿ ಮಾಹಿತಿ ನೀಡಬೇಕು.ಆಯಾ ಇಲಾಖಾ ಸಚಿವರು ಚರ್ಚೆಯ ವಿಷಯಗಳಿಗೆ ಉತ್ತರಿಸಬೇಕು.
ಅಗತ್ಯವಿದ್ದರೆ ನಾನು ಮಧ್ಯಪ್ರವೇಶಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ನಿಮ್ಮ ಇಲಾಖೆಯ ವಿಷಯ ಇದ್ದಾಗ ಕಾರ್ಯದರ್ಶಿಗಳು ಖುದ್ದು ಹಾಜರಿದ್ದು, ಸಚಿವರಿಗೆ ಸಹಕಾರ ನೀಡಬೇಕು. ಕೇವಲ ಅಧೀನ ಅಧಿಕಾರಿಗಳನ್ನು ಕಳುಹಿಸಿ ಗೈರು ಹಾಜರಾಗುವಂತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.
ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯೆಲ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಹಾಗೂ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.