ನಮ್ಮ ಮೆಟ್ರೋ ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಆರ್.ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಯೆಲ್ಲೋ ಲೈನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿ,ಫೇಸ್ 3 ಶಂಕುಸ್ಥಾಪನೆ ನೆರವೇರಿಸಿದರು.ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವರಾದ ಮನೋಹರ್ ಲಾಲ್ ಖಟ್ಟರ್, ಶೋಭಾ ಕರಂದ್ಲಾಜೆ, ಸಂಸದರಾದ ಡಾ.ಸಿ.ಎನ್.ಮಂಜುನಾಥ್, ತೇಜಸ್ವಿ ಸೂರ್ಯ, ಸರ್ಕಾರದ ಸಿಎಸ್ ಶಾಲಿನಿ ರಜನೀಶ್ ಉಪಸ್ಥಿತರಿದ್ದರು.
ಅಲ್ಲದೇ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲುನಿಲ್ದಾಣದಲ್ಲಿ ಬೆಂಗಳೂರಿನಿಂದ ಬೆಳಗಾವಿ ಯ ವಂದೇ ಭಾರತ್ ರೈಲಿಗೂ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ರು. ಅಲ್ಲದೇ ಅಮೃತ್‍ಸರ್ ದಿಂದ ಶ್ರೀ ಮಾತಾ ವೈಷ್ಣೋದೇವಿ ಕತ್ರಾ ಹಾಗೂ ನಾಗ್‍ಪುರ್ (ಅಜ್ನಿ) ಯಿಂದ ಪುಣೆಯ ವರೆಗೆ ಚಲಿಸಲಿರುವ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲುಗಳಿಗೆ ವರ್ಚುವಲ್ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ನಗರದ ಆತ್ಮೀಯ ಬಂಧು ಭಗಿನೀಯರೇ ನಿಮೆಗೆಲ್ಲ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಮಾತು ಪ್ರಾರಂಭ ಮಾಡಿದರು. ಆಪರೇಷನ್ ಸಿಂಧೂರ ಬಳಿಕ ಬೆಂಗಳೂರಿಗೆ ಮೊದಲು ಬಂದಿದ್ದೇನೆ. ಆಪರೇಷನ್ ಸಿಂದೂರದ ಸಫಲತೆ ಹಿಂದೆ ಮೇಕ್ ಇನ್ ಇಂಡಿಯಾದ ಶಕ್ತಿ ಇದೆ.ಇದರಲ್ಲಿ ಬೆಂಗಳೂರು, ಕರ್ನಾಟಕ ಇಲ್ಲಿನ ಯುವ ತಂತ್ರಜ್ಞರ ಯೋಗದಾನವೂ ಇದೆ ಎಂದರು.
ಬೆಂಗಳೂರು ನ್ಯೂ ಇಂಡಿಯಾದ ಪ್ರಗತಿಯ ಸಂಕೇತ. ಈ ನಗರ ಗ್ಲೋಬಲ್ ಐಟಿಯಲ್ಲಿ ಭಾರತ ಕೀರ್ತಿ ಪತಾಕೆ ಹಾರಿಸಿದೆ. ಬೆಂಗಳೂರು ಯಶಸ್ಸಿಗೆ ಇಲ್ಲಿನ ಜನರ ಶ್ರಮ, ಪ್ರತಿಭೆ ಕಾರಣ. ಬೆಂಗಳೂರಿನಂಥ ನಗರಗಳನ್ನು ಭವಿಷ್ಯಕ್ಕಾಗಿ ರೂಪಿಸಬೇಕು. ಅದಕ್ಕಾಗಿ ಕೇಂದ್ರದ ಅನುದಾನ ಹರಿದು ಬರ್ತಿದೆ. ಇಂದು ಮೆಟ್ರೋ ಹಳದಿ ಮಾರ್ಗ, ಮೂರು ವಂದೇ ಭಾರತ್ ರೈಲುಗಳಿಗೆ ಚಾಲನೆ ಕೊಡಲಾಗಿದೆ. ಆಪರೇಷನ್ ಸಿಂಧೂರ ನಂತರ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದೇನೆ ಎಂದರು.