ಬೆಂಗಳೂರು : ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಬೆಂಗಳೂರಿನ ಆರ್ ಆರ್ ನಗರದ ಶಾಸಕ ಮುನಿರತ್ನ ಅವರಿದೆ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಸಕ ಮುನಿರತ್ನ ಅವರಿಗೆ ಇಂದು ಜಾಮೀನು ಮಂಜೂರು ಮಾಡಿದೆ.
ಆರಂಭದಲ್ಲಿ ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೈಲು ಸೇರಿದ್ದ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಬೆಂಗಳೂರಿನ 42ನೇ ACMM ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಬೆಲ್ ಸಿಕ್ಕಿದ ಕೂಡಲೇ ಮುನಿರತ್ನ ಜೈಲಿನಲ್ಲಿದ್ದ ಹೊರ ಬಂದಿದ್ದರು. ಅಷ್ಟರಲ್ಲಿ ಅವರು ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದ ಹಿನ್ನೆಲೆ ಅವರನ್ನು ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು.
ಮಹಿಳೆಯೊಬ್ಬರು ಶಾಸಕ ಮುನಿರತ್ನ ಅವರು ನನ್ನ ಮೇಲೆ ಅತ್ಯಾಚಾರ ಮಾಡಿ ಹನಿ ಟ್ರ್ಯಾಪ್ ಮಾಡಲು ನನ್ನನ್ನು ಬಳಸಿಕೊಂಡಿದ್ದಾರೆ ಎಂದು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆ, ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗುಹಾಂತರ ರೆಸಾರ್ಟ್ ನಲ್ಲಿ ನನ್ನ ಮೇಲೆ ಅತ್ಯಾಚಾರ ಲೈಂಗಿಕ ದೌರ್ಜನ್ಯವೆಸಗಿ ನನ್ನನ್ನು ಹನಿಟ್ರ್ಯಾಪ್ ಗಾಗಿ ಬಳಸಿಕೊಂಡಿದ್ದಾರೆ ಎಂದು ಶಾಸಕ ಮುನಿರತ್ನ ಸೇರಿದಂತೆ ಏಳು ಮಂದಿಯ ವಿರುದ್ಧ ಮಹಿಳೆ ದೂರು ನೀಡಿದ್ದರು.
ಮಹಿಳೆ ನೀಡಿದ ದೂರಿನಂತೆ ಮುನಿರತ್ನ, ಆತನ ಗನ್‌ಮ್ಯಾನ್ ವಿಜಯಕುಮಾರ್, ಸುಧಾಕರ, ಕಿರಣ್ ಕುಮಾರ್, ಲೋಹಿತ್ ಗೌಡ, ಮಂಜುನಾಥ ಹಾಗೂ ಲೋಕಿ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.ಇನ್ನು ಮಹಿಳೆಯ ವಿಚಾರಣೆ ವೇಳೆ ಮಹಿಳೆ ಮುನಿರತ್ನ ವಿಧಾನಸೌಧ, ವಿಕಾಸ ಸೌಧ ಹಾಗೂ ಸರ್ಕಾರಿ ವಾಹನದಲ್ಲೂ ನನ್ನ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಆರೋಪಿಸಿದ್ದಳು,
ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುನಿರತ್ನ ಅವರನ್ನು ವಿಚಾರಣೆ ನಡೆಸುವ ವೇಳೆ ಶಾಸಕ ಮುನಿರತ್ನ ಹಲವು ಸ್ಫೋಟಕ ಮಾಹಿತಿಯನ್ನು ತಿಳಿಸಿದ್ದರು.. ಶಾಸಕ ಮುನಿರತ್ನ ಅವರು ಹನಿಟ್ರ್ಯಾಪ್ ಗಾಗಿ ಹೆಚ್ ಐವಿ ಸೋಂಕಿತರನ್ನು ಬಳಸಿಕೊಳ್ಳುತ್ತಿದ್ದರು ಎಂದು ಮಹಿಳೆ ಮುನಿರತ್ನ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಈ ಆರೋಪಕ್ಕೆ ಮುನಿರತ್ನ ತನಿಖೆ ವೇಳೆ ಉತ್ತರ ಕೊಟ್ಟಿದ್ದರು.
ದೂರು ಕೊಟ್ಟ ಮಹಿಳೆ ನನಗೆ ತುಂಬಾ ಚೆನ್ನಾಗಿ ಪರಿಚಯ. ಹನಿಟ್ರ್ಯಾಪ್ ಮಾಡೋದೆ ಆಕೆಯ ಕಾಯಕ. ನನಗೂ ಆಕೆಯೇ ನಿಮಗೆ ಯಾರ ವೀಡಿಯೋ ಬೇಕು, ನಿಮ್ಮ ಶತ್ರುಗಳು ಯಾರಿದ್ದಾರೆ ಅವರ ವೀಡಿಯೋ ಮಾಡಿ ಕೊಡುತ್ತೇನೆ ಎಂದು ಆಫರ್ ಕೊಟ್ಟಿದ್ದಳು ಎಂದು ಮುನಿರತ್ನ ವಿಚಾರಣೆ ವೇಳೆ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೇ ನನಗೆ ಆಗಾಗ್ಗೆ ಇಂತಹ ವೀಡಿಯೋಗಳನ್ನು ತಂದು ತೋರಿಸುತ್ತಿದ್ದಳು ಎಂದು ಮುನಿರತ್ನ ಹೇಳಿದ್ದರು. ಆದರೆ ನಾನು ಆಕೆಯಿಂದ ಯಾವುದೇ ಹನಿಟ್ರ್ಯಾಪ್ ವೀಡಿಯೋಗಳನ್ನು ಮಾಡಿಸಿಲ್ಲ. ಆಕೆ ನನ್ನ ಮೇಲೆ ಮಾಡಿರುವ ಆರೋಪಗಳು ಎಲ್ಲಾ ಸುಳ್ಳು ಎಂದು ಶಾಸಕ ಮುನಿರತ್ನ ಅವರು ಹೇಳಿದ್ದರು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುನಿರತ್ನ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಸದ್ಯ ಮುನಿರತ್ನಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.