ಮನೆ Latest News ಬಜೆಟ್ ಮೇಲಿನ ಚರ್ಚೆ ವೇಳೆ ನೀವು ಜೋಳ ತಿನ್ನುತ್ತೀರಾ ಎಂದು ಸ್ಪೀಕರ್ ಗೆ...

ಬಜೆಟ್ ಮೇಲಿನ ಚರ್ಚೆ ವೇಳೆ ನೀವು ಜೋಳ ತಿನ್ನುತ್ತೀರಾ ಎಂದು ಸ್ಪೀಕರ್ ಗೆ ಕೇಳಿದ ಶಾಸಕ ವಜ್ಜಲ್

0

ಬೆಂಗಳೂರು; ಬಜೆಟ್ ಮೇಲಿನ ಚರ್ಚೆ ವೇಳೆ  ಸ್ಪೀಕರ್ ಯು ಟಿ ಖಾದರ್ ಅವರಿಗೆ ಲಿಂಗಸೂಗೂರು ಶಾಸಕ ಮಾನಪ್ಪ ವಜ್ಜಲ್ನೀವು ಜೋಳ ತಿನ್ನುತ್ತೀರಾ ಎಂದು ಕೇಳಿದ್ದಾರೆ. ಚರ್ಚೆ ವೇಳೆ  ಜೋಳ ಬೆಳೆ ಬಗ್ಗೆ ಪ್ರಸ್ತಾಪಿಸಿ ನೀವು ಜೋಳ ತಿನ್ನುತ್ತೀರಾ ಎಂದು ಸ್ಪೀಕರ್ ಗೆ ವಜ್ಜಲ್ ಕೇಳಿದ್ದಾರೆ. ಆಗ ಸ್ಪೀಕರ್  ನಾನು ಎಲ್ಲಾ ತಿನ್ನುತ್ತೇನೆ ಎಂದಿದ್ದಾರೆ.

ಜೋಳ ತಿಂದವನು ತೋಳದಂತೆ ಇರುತ್ತಾನಂತೆ. ರೊಟ್ಟಿ ತಿಂದವನು ಗಟ್ಟಿ ಇರುತ್ತಾನಂತೆ ಎಂದು ವಜ್ಜಲ್ ಹೇಳಿದ್ದಾರೆ .ಆಗ ಸ್ಪೀಕರ್ ನಿಮ್ಮನ್ನು ನೋಡಿದರೆ ಗೊತ್ತಾಗುತ್ತದೆ ಎಂದಿದ್ದಾರೆ. ಇದೇ ವೇಳೆ ಮುದಗಲ್ ತಾಲೂಕು ಘೋಷಣೆಗೆ ಸದನದಲ್ಲಿ ಶಾಸಕ ವಜ್ಜಲ್ ಆಗ್ರಹಿಸಿದ್ದಾರೆ. ಬೆಂಗಳೂರು ಭಾಗದಲ್ಲಿ ಓಡಿಸಿದ 15 ವರ್ಷಕ್ಕಿಂತ ಹಳೆಯ ಬಸ್ ಗಳನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಕೊಡುತ್ತಾರೆ ಎಂದು ಶಾಸಕ ವಜ್ಜಲ್ ಅಸಮಾಧಾನ ಹೊರ ಹಾಕಿದ್ದಾರೆ.

ಚರ್ಚೆ ಮುಂದುವರಿಸಿದ ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರ್  ಇನ್ನೂ ಮೂರು ಬಾರಿ ಸಿದ್ದರಾಮಯ್ಯ ಅವರೇ ಬಜೆಟ್ ಮಂಡಿಸಲಿ ಎಂದು ಬಯಸುತ್ತೇನೆ. ಗ್ಯಾರಂಟಿ ಗಳಿಗೆ ನಮ್ಮ ವಿರೋಧ ಇಲ್ಲ. ಶಿಕ್ಷಣ, ಆರೋಗ್ಯದ ಸ್ಕೀಮ್ ಗಳನ್ನು ಕೊಡಿ.ಯುವ ನಿಧಿ ಬದಲು ಯುವಕರ ದುಡಿಯುವ ಕೈಗಳಿಗೆ ಕೆಲಸ ಕೊಡಿ. ಒಳ್ಳೆಯ ಫ್ಯಾಕ್ಟರಿಗಳು ಬೆಂಗಳೂರು ಕಡೆಗೆ, ವಿಷಗಾಳಿ ತರುವ ಫ್ಯಾಕ್ಟರಿಗಳು ಉತ್ತರ ಕರ್ನಾಟಕಕ್ಕೆ ಬೇಡ. ಸರ್ಕಾರದ ಕಾರ್ಯಕ್ರಮಗಳು ಮುಂದಿನ ಎಲೆಕ್ಷನ್ ಗಾಗಿ ಇರಬಾರದು, ಮುಂದಿನ ಜನರೇಷನ್ ಗಾಗಿ ಇರಬೇಕು. ಸಚಿವರೇ ಮೊದಲು ಕಲ್ಯಾಣ ಕರ್ನಾಟಕ ಭಾಗದ ವಿಷ ಕಾರುವ ಫ್ಯಾಕ್ಟರಿಗಳನ್ನು ಮುಚ್ಚಿ.ನಾವು ಶಾಸಕರು ಜನರ ಮಧ್ಯೆ ಇದ್ದೇವೆ ಎಂದು ಫೋಟೋ ತೆಗೆದು ತೋರಿಸಿಕೊಳ್ಳಬೇಕಾದ ಸ್ಥಿತಿ ಇದೆ. ಅನುದಾನ ಕೊಡದೇ ಇದ್ದರೆ ಹೇಗೆ? ನಮ್ಮ ಭಾಗದಲ್ಲಿ ಅಭಿವೃದ್ಧಿಗಿಂತ ಮಠ, ಮಾನ್ಯ ಗಳಿಗೆ ಹೆಚ್ಚು ಹಣ ಕೇಳುತ್ತಾರೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಕೆಲಸ ಮಾಡಿದ ಸಿಎಂ ಇದ್ದರೆ ಅದು ದೇವೇಗೌಡರು. ದೇವೇಗೌಡರ ಮೂರ್ತಿ ಸ್ಥಾಪನೆ ಮಾಡಿದ್ದಾರೆ. ಅಂತಹ ಮೂರ್ತಿ ಮಾಡುವ ರೀತಿ ಕೆಲಸ ಸಿದ್ದರಾಮಯ್ಯ ಕೂಡಾ ಮಾಡಬೇಕು.ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಬಜೆಟ್ ಮಂಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಜೆಟ್ ಮೇಲಿನ ಚರ್ಚೆ ವೇಳೆ ಸಚಿವರ ವಿರುದ್ಧವೇ ಆಡಳಿತ ಪಕ್ಷದ ಶಾಸಕ ಕೆ.ಎಸ್.‌ ಆನಂದ್ ಬೇಸರ

ಬೆಂಗಳೂರು:  ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಸಚಿವರ ವಿರುದ್ಧವೇ ಆಡಳಿತ ಪಕ್ಷದ ಶಾಸಕ ಕೆ.ಎಸ್.‌ ಆನಂದ್ ಬೇಸರ ಹೊರ ಹಾಕಿದ ಪ್ರಸಂಗ ನಡೆಯಿತು.

ಬಜೆಟ್ ನಲ್ಲಿ ಇಂಜಿನಿಯರಿಂಗ್ ಕಾಲೇಜು, ಕೃಷಿ ಕಾಲೇಜು ಸ್ಥಾಪನೆ ಮಾಡುವುದಾಗಿ ಹೇಳಿದ್ದಾರೆ. ಇಂಜಿನಿಯರಿಂಗ್ ಕಾಲೇಜನ್ನು ನಮ್ಮ ಉನ್ನತ ಶಿಕ್ಷಣ ಸಚಿವರು ತಮ್ಮ ಕ್ಷೇತ್ರ ಚಿಂತಾಮಣಿಗೆ ತೆಗೆದುಕೊಂಡು ಹೋಗುತ್ತಾರೆ. ಕೃಷಿ ಕಾಲೇಜನ್ನು ಕೃಷಿ ಸಚಿವ ತಮ್ಮ ಸ್ವಕ್ಷೇತ್ರಕ್ಕೆ ತೆಗೆದುಕೊಂಡು ಹೋಗುತ್ತಾರೆ.ಈ‌ ರೀತಿ‌ ಸಚಿವರು ಅವರವರ ಕ್ಷೇತ್ರಕ್ಕೆ ತೆಗೆದುಕೊಂಡು ಹೋದರೆ ನಮ್ಮ ಪರಿಸ್ಥಿತಿ ಏನು?.ಕೆಲವೇ ಕೆಲವು ಜಿಲ್ಲೆಗಳಲ್ಲಿ ಅಭಿವೃದ್ಧಿ ಆಗುತ್ತದೆ. ಮುಖ್ಯಮಂತ್ರಿಗಳು ಹಾಗೂ ಸಚಿವರು ಸಮಗ್ರ ಕರ್ನಾಟಕ ಅಭಿವೃದ್ಧಿ ಕಡೆ ಗಮನ ಹರಿಸಲಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಒಂದು ಬೈ ಎಲೆಕ್ಷನ್ ಸೇರಿ 17 ಚುನಾವಣೆ ನಮ್ಮ ಕ್ಷೇತ್ರದಲ್ಲಿ ನಡೆದಿದೆ.ಅವಕಾಶ ಇರುವ ಕ್ಷೇತ್ರಗಳಿಗೆ ಹೆಚ್ಚು ಅನುದಾನ, ಯೋಜನೆ ನೀಡಿ.ಅಜ್ಜ, ಮಗ, ಮೊಮ್ಮಗ ಇರುವ ಕ್ಷೇತ್ರಗಳು ಜಿಲ್ಲೆಗಳು ಅಭಿವೃದ್ಧಿ ಆಗುತ್ತಿವೆ. ಹೀಗಾಗಿ ಬೇರೆ ಜಿಲ್ಲೆಗಳತ್ತ ಗಮನ ಹರಿಸಿ. ಗಂಗಾಕಲ್ಯಾಣ, ಸಾರಥಿ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳ ಸಂಖ್ಯೆ ಹೆಚ್ಚಿಸಿ. ಒಂದು, ಎರಡು ಕೊಟ್ಟರೆ ಹೇಗೆ?.ಹಿಂದುಳಿದ ವರ್ಗಗಳ ನಿಗಮಗಳಿಗೆ ಹೆಚ್ಚಿನ ಅನುದಾನ ನೀಡಿ.ಹೆಚ್ಚು ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಒತ್ತು ಕೊಡಿ.ಸದನದಲ್ಲಿ ಸರ್ಕಾರವನ್ನು ಎಂದು ಕಡೂರು  ಶಾಸಕ ಆನಂದ್ ಒತ್ತಾಯಿಸಿದ್ದಾರೆ.

ಇದೇ ವೇಳೆ  ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮಾತನಾಡಿ ಕೊಪ್ಪಳ ವಿವಿಗೆ ಮೂಲಸೌಕರ್ಯ ಒದಗಿಸಬೇಕು. ಅಂಜನಾದ್ರಿ ಅಭಿವೃದ್ಧಿಗೆ ಅನುದಾನ ಒದಗಿಸಬೇಕು. ಬಳ್ಳಾರಿ ವಿಮಾನ ‌ನಿಲ್ದಾಣದ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪ ಮಾಡಿಲ್ಲ.ಹಂಪಿಯಲ್ಲಿ ಪೋಲೀಸ್ ಉಪವಿಭಾಗ ಸ್ಥಾಪಿಸಬೇಕು ಎಂದರು.

ಹೆಚ್.ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ  ತಮ್ಮ ಕ್ಷೇತ್ರದ ಕಾಡು ಮತ್ತು ನಾಡಿನ ಸಂಘರ್ಷದ ಸಮಸ್ಯೆ ಬಗ್ಗೆ ಹೇಳಿದ್ರು. ಈ ವೇಳೆ ಅನಿಲ್ ಬೆಂಬಲಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ನಿಂತಿದ್ದಾರೆ. ನಾನು ಸಚಿವನಾಗಿ ಅವರ ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದೇನೆ. ನಕ್ಸಲ್ ಆಗುತ್ತಾರೆ, ನಕ್ಸಲ್ ಆಗುತ್ತಾರೆ ಅಂತಾರೆ, ನಮ್ಮದು ನಕ್ಸಲ್ ವಾದಕ್ಕೆ ವಿರೋಧ ಇದೆ. ಅವರ ಕ್ಷೇತ್ರದಲ್ಲಿ ಕಾಡು ಮತ್ತು ನಾಡಿನ ಸಮಸ್ಯೆ ಇದೆ. ಅವರಿಗೆ ಇನ್ನೂ ಮಾತಾಡಲು ಅವಕಾಶ ಕೊಡಿ ಎಂದು ಅಶೋಕ್ ಹೇಳಿದ್ದಾರೆ. ಈ ವೇಳೆ ವಿಪಕ್ಷ ನಾಯಕ ಅಶೋಕ್ ಗೆ ಅಭಿನಂದಿಸಿದ್ದಾರೆ ಶಾಸಕ ಅನಿಲ್ ಚಿಕ್ಕಮಾದು. ಆಗ ಅನಿಲ್ ಗೆ ಹೆಚ್ಚು ಮಾತಾಡಲು ಅವಕಾಶ ಕೊಡುವಂತೆ ಸ್ಪೀಕರ್ ಗೆ ಬಿಜೆಪಿ ಶಾಸಕರು ಆಗ್ರಹಿಸಿದ್ದಾರೆ.