ಬೆಂಗಳೂರು: ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ಅಟ್ಟಹಾಸಕ್ಕೆ 3 ಕನ್ನಡಿಗರು ಬಲಿಯಾಗಿದ್ದಾರೆ. ರಾಜ್ಯದಿಂದ ಜಮ್ಮು ಕಾಶ್ಮೀರಕ್ಕೆ ತೆರಳಿದ್ದ ಸಾಕಷ್ಟು ಕನ್ನಡಿಗರು ಅಲ್ಲಿ ಸಿಲುಕಿ ಹಾಕಿಕೊಂಡಿದ್ದು ಅವರೆಲ್ಲರ ನೆರವಿಗೆ ಸಚಿವ ಸಂತೋಷ್ ಲಾಡ್ ನಿಂತಿದ್ದಾರೆ.
ನಿನ್ನೆ ಮಧ್ಯರಾತ್ರಿ ಎರಡೂವರೆ ಸುಮಾರಿಗೆ ಬೆಳಗಾವಿ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿ ಅಲ್ಲಿಂದ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದಾರೆ.ಸದ್ಯ ಅಲ್ಲಿರುವ ಸಂತೋಷ್ ಲಾಡ್ ಕನ್ನಡಿಗರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ. ಪೆಹಲ್ಗಾಮ್ ಆಸ್ಪತ್ರೆಯಲ್ಲಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು ಇಂದು ರಾತ್ರಿ ಮೃತ ಮಂಜುನಾಥ್ ಅವರ ಪಾರ್ಥಿವ ಶರೀರ ಬೆಂಗಳೂರು ತಲುಪಲಿದೆ
ಇನ್ನು ಕರ್ನಾಟಕ ಸರ್ಕಾರದಿಂದ ಹೆಲ್ಪ್ ಲೈನ್ ಆರಂಭಿಸಲಾಗಿದೆ. ಹೆಲ್ ಲೈನ್ ಸಂಖ್ಯೆಗಳು ಇಂತಿವೆ.080-43344334, 080-43344335,080-43344336, 080-43344342
ಸದ್ಯ ಜಮ್ಮು-ಕಾಶ್ಮೀರದ ಪ್ರವಾಸಕ್ಕೆ ತೆರಳಿರುವ ಕನ್ನಡಿಗರನ್ನು ರಾಜ್ಯಕ್ಕೆ ಮರಳಿತರಲು ರಾಜ್ಯ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ. ಕರ್ನಾಟಕದಲ್ಲಿ ಪ್ರವಾಸ ನಿರ್ವಹಿಸುತ್ತಿರುವ ಪ್ರವಾಸಿ (Tour Operators & Travel Agents) ಮೂಲಕ ಜಮ್ಮು-ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿರುವ ಪ್ರಯಾಣಿಕರ ವಿವರಗಳನ್ನು ಈ ಕೆಳಕಂಡ ಸಹಾಯವಾಣಿಗೆ ನೀಡಬೇಕು. ಜಮ್ಮು-ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿರುವ ಪ್ರವಾಸಿಗರ ಸಂಬಂಧಿಕರು ಅಥವಾ ಪರಿಚಯಸ್ಥರು ಪ್ರವಾಸಕ್ಕೆ ತೆರಳಿರುವವರ ವಿವರಗಳನ್ನು ಈ ಸಹಾಯವಾಣಿಗೆ ನೀಡಬೇಕು ಎಂದು ಮನವಿ ಮಾಡಿದೆ.ಕರ್ನಾಟಕ ದಿಂದ ಯಾರ್ಯಾರು ಕಾಶ್ಮೀರಕ್ಕೆ ತೆರಳಿದ್ದಾರೆ. ಸಂಬಂಧಿಕರು, ಸ್ನೇಹಿತರು, ಪರಿಚಯಸ್ಥರ ಕುರಿತು ಮಾಹಿತಿ ನೀಡಬೇಕೆಂದು ಮನವಿ ಮಾಡಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ; ಕರ್ನಾಟಕದ ಮೂವರು ಪ್ರವಾಸಿಗರು ಸೇರಿ 30 ಜನ ಬಲಿ
ಶ್ರೀನಗರ; ಜಮ್ಮು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಉಗ್ರರ ಅಟ್ಟಹಾಸಕ್ಕೆ ಕರ್ನಾಟಕದ ಮೂವರು ಪ್ರವಾಸಿಗರು ಸೇರಿ ಒಟ್ಟು 30 ಜನ ಪ್ರವಾಸಿಗರು ಬಲಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಅಟ್ಯಾಕ್ ಮಾಡಿದ್ದಾರೆ.
ದಾಳಿಯ ಹೊಣೆಯನ್ನು ಪಾಕ್ ಬೆಂಬಲಿತ ಟಿಆರ್ ಎಫ್ ಉಗ್ರರು ಹೊತ್ತುಕೊಂಡಿದ್ದಾರೆ. ಶಿವಮೊಗ್ಗದ ಉದ್ಯಮಿ ಮಂಜುನಾಥ್ ರಾವ್ ಮತ್ತು ಬೆಂಗಳೂರಿನ ಉದ್ಯಮಿ ಭರತ್ ಭೂಷಣ್ ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಮಗನಿಗೆ ಪಿಯುಸಿಯಲ್ಲಿ 97 ಶೇಕಡಾ ಅಂಕ ಬಂದ ಖುಷಿಗೆ ಮಂಜುನಾಥ್ ರಾವ್ ಪತ್ನಿ ಮತ್ತು ಪುತ್ರನ ಜೊತೆ ಕಾಶ್ಮೀರಕ್ಕೆ ಪ್ರವಾಸಕ್ಕೆಂದು ಹೋಗಿದ್ದರು. ಪತ್ನಿ ಹಾಗೂ ಮಗನ ಎದುರಲ್ಲೇ ಉಗ್ರರು ಮಂಜುನಾಥ್ ರಾವ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಘಟನೆಯಲ್ಲಿ ಇಸ್ರೇಲ್ ಹಾಗೂ ಇಟಲಿ ಮೂಲದ ಇಬ್ಬರು ವಿದೇಶಿ ಪ್ರವಾಸಿಗರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಅತೀ ದೊಡ್ಡ ಉಗ್ರ ದಾಳಿ ಇದಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಷಾ ಶ್ರೀನಗರಕ್ಕೆ ಧಾವಿಸಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದಾರೆ. ನಾಳೆ ಅಮಿತ್ ಷಾ ಪಹಲ್ಗಾಂವ್ ಗೆ ಭೇಟಿ ನೀಡಲಿದ್ದಾರೆ.
ಇನ್ನು ಕಾಶ್ಮೀರದಲ್ಲಿ ಕನ್ನಡಿಗರು ಉಗ್ರರ ದಾಳಿಗೆ ಗುರಿಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆದಿದೆ. ಸಭೆ ನಡೆಸಿ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದ್ದಾರೆ. ತಕ್ಷಣವೇ ಕಾರ್ಯಪ್ರವತ್ತರಾಗುವಂತೆ ಸಿಎಂ ಸೂಚನೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಕಾಶ್ಮೀರಕ್ಕೆ ಅಧಿಕಾರಿಗಳ ತಂಡ ಪ್ರಯಾಣ ಬೆಳಿಸಿದೆ. ಪೊಲೀಸ್ ಅಧಿಕಾರಿಗಳು ಸಹ ಇರುವ ತಂಡ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದೆ. ಮುಂದಿನ ಕ್ರಮಗಳ ಉಸ್ತುವಾರಿ ನೋಡಿಕೊಳ್ಳುವಂತೆ ದೆಹಲಿಯ ನಿವಾಸಿ ಆಯುಕ್ತರಿಗೆ ಸೂಚನೆ.ನೀಡಲಾಗಿದೆ. IPS ಅಧಿಕಾರಿ ಚೇತನ್ ಆರ್ ಮತ್ತು ಸಿಬ್ಬಂದಿ ಹಾಗೂ ಅಧಿಕಾರಿಗಳ ತಂಡ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದೆ. ಘಟನೆ ದೇಶದಾದ್ಯಂತ ಭಾರೀ ಆಕ್ರೋಶ ಮೂಡುವಂತೆ ಮಾಡಿದೆ. ಉಗ್ಗರ ವಿರುದ್ಧ ಕಠಿಣ ಕ್ರಮಕ್ಕೆ ಭಾರತೀಯರು ಆಗ್ರಹಿಸಿದ್ದಾರೆ.