ಬೆಂಗಳೂರು; ಕೇಂದ್ರ ಸರ್ಕಾರದ ಅನ್ಯಾಯದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಎಕ್ಸ್ ಖಾತೆಯಲ್ಲಿ ಹರಿಹಾಯ್ದಿದ್ದಾರೆ.
ಈ ಬಗ್ಗೆ ಪೋಸ್ಟ್ ಮಾಡಿರುವ ಅವರು ಇದು ಮಹಾತ್ಮಾ ಗಾಂಧಿ ಹೆಸರನ್ನಷ್ಟೇ ಅಲ್ಲಾ, ಅವರ ಸ್ವರಾಜ್ಯದ ಕನಸನ್ನೂ ಹೊಸಕಿ ಹಾಕುವ ಪ್ರಯತ್ನ. ನರೇಗಾ ಯೋಜನೆ ದುರ್ಬಲಗೊಳಿಸುವ ವಿರುದ್ಧ ರಾಜ್ಯ ಸರ್ಕಾರದಿಂದ ಸಕಲ ರೀತಿಯ ಹೋರಾಟ ಘೋಷಣೆಯಾಗಿದೆ ಎಂದಿದ್ದಾರೆ.
ಕಳೆದ ಮೂರು ವರ್ಷದಲ್ಲಿ ನರೇಂದ್ರ ಮೋದಿ ಸರ್ಕಾರ “ಮಹಾತ್ಮ ಗಾಂಧಿ ನರೇಗಾ” ಯೋಜನೆಯಡಿ ಕರ್ನಾಟಕಕ್ಕೆ ನೀಡಲಾಗುತ್ತಿದ್ದ ಮಾನವ ದಿನ ಗಳ ಸಂಖ್ಯೆಯನ್ನ ಗಣನೀಯವಾಗಿ ಕಡಿತಗೊಳಿಸಿದೆ. 2023-24ರ ಅವಧಿಯಲ್ಲಿ : 14 ಕೋಟಿಗಳಷ್ಟಿದ್ದ ಮಾನವ ದಿನಗಳ ಸಂಖ್ಯೆಯನ್ನ 2024-25ರ ಸಾಲಿನಲ್ಲಿ : 13 ಕೋಟಿಗೆ ಇಳಿಸಲಾಯಿತು, ನಂತರ 2025-26ರ ಸಾಲಿನಲ್ಲಿ : 9 ಕೋಟಿ ಮಾನವ ದಿನಗಳಿಗೆ ಇಳಿಸಿ, ಕಳೆದ ಮೂರು ವರ್ಷಗಳಲ್ಲಿ ಒಟ್ಟು 6 ಕೋಟಿ ಮಾನವ ದಿನಗಳನ್ನು ಕರ್ನಾಟಕ ರಾಜ್ಯಕ್ಕೆ ನಿರಾಕರಿಸಲಾಗಿದೆ.
ಈ ಯೋಜನೆ ಬಡಜನರ ಔದ್ಯೋಗಿಕ ಹಕ್ಕು. ಕಳೆದ ಮೂರು ವರ್ಷದ ಅವಧಿಯಲ್ಲಿ ಕರ್ನಾಟಕ ರಾಜ್ಯವೊಂದಲ್ಲೇ ಬರೊಬ್ಬರಿ 80.25 ಲಕ್ಷ ಬಡ ಕುಟುಂಬಗಳಿಗೆ ಈ ಯೋಜನೆಯಡಿ ಉದ್ಯೋಗ ಒದಗಿಸಲಾಗಿದೆ. ಈ ಪೈಕಿ 25.63 ಲಕ್ಷ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳಿದ್ದು, 9.48 ಲಕ್ಷ ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಟುಂಬಗಳು ಈ ಯೋಜನೆಯ ಫಲಾನುಭವಿಗಳಾಗಿವೆ. ಇಡೀ ರಾಜ್ಯದಲ್ಲಿ 2023ರಿಂದ ಇಂದಿನವರೆಗೆ ಒಟ್ಟು ₹21,411 ವೆಚ್ಚದಲ್ಲಿ 15.94 ಲಕ್ಷಕ್ಕೂ ಹೆಚ್ಚು ಗ್ರಾಮಿಣ ಆಸ್ತಿಗಳನ್ನು ಸೃಜಿಸಲಾಗಿದೆ. ಇಂತಹ ಕ್ರಾಂತಿಕಾರಕ ಯೋಜನೆಯನ್ನ, ಬಡಜನರ ಔಧ್ಯೋಗಿಕ ಹಕ್ಕಿನ ಆಧಾರಿತ ಕಾರ್ಯಕ್ರವನ್ನಕೇಂದ್ರ ಸರ್ಕಾರದ ಬೆರಳೆಣಿಕೆ ಅಧಿಕಾರಿಗಳ ಮರ್ಜಿಯ ಆಧಾರಿತ ಕಾರ್ಯಕ್ರಮವನ್ನಾಗಿ ಬದಲಿಸಲು ಹೊರಟಿರುವುದು ಅಕ್ಷಮ್ಯ ಅಪರಾಧವೇ ಹೌದು ಎಂದಿದ್ದಾರೆ.
ಮಹಾತ್ಮ ಗಾಂಧಿ ಹೆಸರನ್ನಷ್ಟೇ ಅಲ್ಲದೇ, ಅವರ “ಸ್ವರಾಜ್ಯ”ದ ಯೋಚನೆಯನ್ನೂ ಹೊಸಕಿಹಾಕಲು ಹೊರಟಿರುವ ಮೋದಿ ಸರ್ಕಾರದ ಬಡ ಜನ ವಿರೋಧಿ ಕ್ರಮದ ವಿರುದ್ಧವಾಗಿ ಕರ್ನಾಟಕ ಸರ್ಕಾರ ಎಲ್ಲಾ ರೀತಿಯ ಹೋರಾಟಕ್ಕೂ ಮುಂದಾಗಲಿದೆ ಎಂದು ಅವರು ತಿಳಿಸಿದ್ದಾರೆ.











