ಬೆಂಗಳೂರು; ರಾಜ್ಯ ಸಚಿವ ಸಂಪುಟದ ಮತ್ತೊಂದು ವಿಕೆಟ್ ಪತನವಾಗಿದೆ. ಸಚಿವ ಸ್ಥಾನಕ್ಕೆ ಸಹಕಾರ ಸಚಿವ, ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಶಾಸಕ ಕೆ ಎನ್ ರಾಜಣ್ಣ ರಾಜೀನಾಮೆ ಸಲ್ಲಿಸಿದ್ದಾರೆ. ಹೈಕಮಾಂಡ್ ಸೂಚನೆ ಹಿನ್ನೆಲೆ ಕೆ ಎನ್ ರಾಜಣ್ಣ ರಾಜೀನಾಮೆ ಸಲ್ಲಿಸಿದ್ದಾರೆ.
ಮಹರ್ಷಿ ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಿ ನಾಗೇಂದ್ರ ಅವರ ತಲೆದಂಡವಾಗಿತ್ತು. ಇದೀಗ ಮತ್ತೋರ್ವ ಸಚಿವ ಕೆ ಎನ್ ರಾಜಣ್ಣ ರಾಜೀನಾಮೆ ಸಲ್ಲಿಸಿದ್ದಾರೆ. ಮತಗಳ್ಳತನ ಕುರಿತು ದೇಶದ್ಯಾಂತ ತೀವ್ರ ಸಂಚಲನ ಸೃಷ್ಟಿಸಿದ್ದ ರಾಹುಲ್ ಗಾಂಧಿ ಹೇಳಿಕೆಗೆ ವಿರುದ್ಧವಾಗಿ ಸಚಿವ ರಾಜಣ್ಣ, ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಆಗುವಂತೆ ಮಾಡಿದ್ದರು. ಈ ಹಿನ್ನೆಲೆ ಹೈಕಮಾಂಡ್ ಸಿಎಂ ಸಿದ್ದರಾಮಯ್ಯಗೆ ಕರೆ ಮಾಡಿ ತಕ್ಷಣ ಇಂದು ಸಂಜೆ 6 ಗಂಟೆಯೊಳಗೆ ರಾಜೀನಾಮೆ ಪಡೆಯುವಂತೆ ಸೂಚಿಸಿತ್ತು. ಕೆ ಎನ್ ರಾಜಣ್ಣ ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಕಾರಣ ಸಿಎಂ ಸಿದ್ದರಾಮಯ್ಯ ಅವರು ಅವರನ್ನು ಸಚಿವ ಸಂಪುಟದಲ್ಲಿ ಉಳಿಸಿಕೊಳ್ಳಲು ಸಾಕಷ್ಟು ಕಸರತ್ತು ನಡೆಸಿದ್ದರು. ಆದರೆ ಅದು ಫಲ ನೀಡಲಿಲ್ಲ. ಹೀಗಾಗನ ಸಚಿವ ರಾಜಣ್ಣ ಸಿಎಂ ಆಪ್ತ ಕಾರ್ಯದರ್ಶಿ ಡಾ. ವೆಂಕಟೇಶಯ್ಯ ಅವರ ಕೈಯಲ್ಲಿ ರಾಜೀನಾಮೆ ಪತ್ರ ನೀಡಿ ಬಂದಿದ್ದರು. ಅದನ್ನು ತಕ್ಷಣ ರಾಜ್ಯಪಾಲರ ಕಚೇರಿಗೆ ರವಾನಿಸಿದ್ದರು. ರಾಜ್ಯಪಾಲರಾದ ಥಾವರ್ ಚಂದ್ ಗ್ಯೆಹ್ಲೋಟ್ ಅದಕ್ಕೆತಕ್ಷಣವೇ ಒಪ್ಪಿಗೆ ಸೂಚಿಸಿದ್ದಾರೆ.
ಇನ್ನು ರಾಜೀನಾಮೆ ಸಲ್ಲಿಕೆಗೆ ಮೊದಲ ಕೆ ಎನ್ ರಾಜಣ್ಣ ನಾನು ಯಾವತ್ತೂ ಅಧಿಕಾರಕ್ಕೆ ಅಂಟಿಕೊಂಡವನಲ್ಲ. ಹೈಕಮಾಂಡ್ ಹೇಳಿದಂತೆ ರಾಜೀನಾಮೆ ಸಲ್ಲಿಸುತ್ತೇನೆ. ಬೇರೆನೂ ಹೇಳಲ್ಲ. ಸಿಎಂ ಭೇಟಿ ಬಳಿಕ ಮಾತನಾಡುತ್ತೇನೆ ಎಂದಿದ್ದರು.
ಇನ್ನು ಕೆ ಎನ್ ರಾಜಣ್ಣ ಅವರ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ ವಿಧಾನಸೌಧದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ರಾಜಣ್ಣ ಅವರಿಗೆ ಹಾಸನ ಉಸ್ತುವಾರಿ ಕೊಕ್ ಆಗಿತ್ತು. ಅಕ್ಟೋಬರ್ ಕ್ರಾಂತಿ ಎಂದು ಹೇಳಿದ್ದೆ.
ಈಗ ಕ್ರಾಂತಿ ಲಕ್ಷಣ ಕಾಣುತ್ತಿದೆ. ಸಿದ್ದರಾಮಯ್ಯ ಕಡೆ ವಿಕೆಟ್ ಬೀಳುತ್ತಿದೆ.ಡಿ.ಕೆ. ಶಿವಕುಮಾರ್ ಸ್ಟ್ರಾಂಗ್ ಆಗುತ್ತಿದ್ದಾರೆ. ಸಿದ್ದರಾಮಯ್ಯ ಪರ ರಾಜಣ್ಣ ದಿನಾ ಮಾತಾಡುತ್ತಿದ್ದರು. ಚುನಾವಣಾ ಆಯೋಗ ಬೋಗಸ್ ಎಂದು ರಾಹುಲ್ ಪ್ರತಿಭಟನೆ ಮಾಡಿದರು. ನಮ್ಮ ಸರ್ಕಾರ ಇದ್ದಾಗಲೇ ಮತ ಪರಿಷ್ಕರಣೆ ಆಗಿದ್ದು ಎಂದು ರಾಜಣ್ಣ ಸತ್ಯ ಹೇಳಿದರು. ಅದಕ್ಕೆ ಈಗ ರಾಜಣ್ಣ ತಲೆದಂಡ. ರಾಜಣ್ಣ ಎಸ್ಟಿ ಸಮುದಾಯದವರು .ಎಸ್ ಟಿ ಸಮುದಾಯಕ್ಕೆ ಕಾಂಗ್ರೆಸ್ ದ್ರೋಹ ಮಾಡಿದೆ ಎಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಹಿರಿಯ ಸಚಿವ ರಾಜಣ್ಣ ಅವರು ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ರಾಜಕೀಯ ಕ್ರಾಂತಿ ಆಗುತ್ತದೆ ಅಂತ ಹೇಳಿದ್ದರು. ದುರಂತ ಅಂದರೆ ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದು ಮತಗಳ್ಳತನ ಬಗ್ಗೆ ಹೋರಾಟ ಮಾಡಿ ಹೋಗಿದ್ದರು. ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದರು. ರಾಜಣ್ಣ ಅವರು ನಮ್ಮ ಸರ್ಕಾರದಲ್ಲೇ ಪರಿಷ್ಕರಣೆ ಅನಾಹುತ ಆಗಿದೆ ಅಂತ ಹೇಳಿದ್ದರು. ರಾಹುಲ್ ಗಾಂಧಿ ಅವರಿಗೆ ಅರಗಿಸಿಕೊಳ್ಳಲು ಆಗಿಲ್ಲ. ಇದ್ದಿದ್ದು ಇದ್ದಂಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರು ಅಂತ. ರಾಹುಲ್ ಗಾಂಧಿ ವಿರುದ್ಧ ಮಾತಾಡಿದ್ದಕ್ಕೆ ಸಿಎಂ ರಾಜೀನಾಮೆ ಪಡೆದಿದ್ದಾರೆ. ಆಗ ತಪ್ಪೆಸಗಿರುವುದು ನಮ್ಮದೇ ಸರ್ಕಾರ ಅಂತ ಬಹಿರಂಗವಾಗಿ ಹೇಳಿದ್ದಾರೆ. ಅದಕ್ಕೆ ಹೀಗೆ ನಡೆದುಕೊಂಡಿದ್ದಾರೆ. ನಾವು ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.