ಬೆಂಗಳೂರು; ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಅವರೇ ನಿಮ್ಮ ನಿಮ್ಮ ಮಕ್ಕಳಿಗೆ ಸರಿಯಾಗಿ ಪಾಠ ಹೇಳಿ ಕೊಡಿ ಎಂದು ಸಂಸದ ಗೋವಿಂದ ಕಾರಜೋಳ ಬುದ್ಧಿಮಾತು ಹೇಳಿದ್ದಾರೆ.
ಆರ್ ಎಸ್ ಎಸ್ ಚಟುವಟಿಕೆ ನಿಷೇಧದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ವಿಚಾರದ ಬಗ್ಗೆ ಮಾತನಾಡಿದ ಅವರು ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಅವರೇ ನಿಮ್ಮ ನಿಮ್ಮ ಮಕ್ಕಳಿಗೆ ಸರಿಯಾಗಿ ಪಾಠ ಹೇಳಿ ಕೊಡಿ. ಆರ್ ಎಸ್ ಎಸ್ ರಾಜಕೀಯ ಪಕ್ಷ ಅಲ್ಲ, ಮೋಹನ್ ಭಾಗವತ್ ರಾಜಕಾರಣಿ ಅಲ್ಲ. ರಾಹುಲ್ ಗಾಂಧಿ ಎದುರಿಸಬೇಕಾಗಿರುವುದು ಬಿಜೆಪಿಯನ್ನು, ಪ್ರಧಾನಿ ಮೋದಿಯವರನ್ನು ನೀವು ಎದುರಿಸಬೇಕಾಗಿರುವುದು ಆರ್ ಎಸ್ ಎಸ್ ಅನ್ನು ಅಲ್ಲ. ನೀವು ಸೋನಿಯಾ, ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಮಾತಾಡುವುದನ್ನು 140 ಕೋಟಿ ಜನ ಸಹಿಸಲು ಸಾಧ್ಯವಿಲ್ಲ. ಇದೇ ರೀತಿ ಮಾತು ಮುಂದುವರಿಸಿದರೆ ಮುಂದೆ ರಸ್ತೆ ಮೇಲೆ ಓಡಾಡುವುದು ಕಷ್ಟ ಆಗುತ್ತದೆ ಎಂದು ಎಚ್ಚರಿಕೆ ನೀಡುತ್ತೇನೆ ಎಂದಿದ್ದಾರೆ.
ನಾನೂ ಸಿಎಂ ಯಾಕಾಗಬಾರದು ಎಂಬ ಡಾ. ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಸಿದ್ದರಾಮಯ್ಯ ಸಿಎಂ ಆದ ದಿನದಿಂದಲೇ ಸಿಎಂ ಕುರ್ಚಿ ಬಗ್ಗೆ ಚರ್ಚೆ ಆಗುತ್ತಿದೆ. ಎರಡೂವರೆ ವರ್ಷದಲ್ಲಿ ಆಡಳಿತ ಕುಸಿದು ರೈತರ ಸಾವಿನಲ್ಲಿ ರಾಜ್ಯ ದೇಶದಲ್ಲೇ ಎರಡನೇ ಸ್ಥಾನಕ್ಕೆ ಹೋಗಿದೆ. ಇಂದು ಸಿದ್ದರಾಮಯ್ಯ ಜಾತಿ ಗಣತಿ, ಆಹಾರ ಕಿಟ್ ಹೀಗೆ ಬೇರೆ ಬೇರೆ ನಾಟಕ ಮಾಡುತ್ತಿದ್ದಾರೆ. ಬಡವರ ಹಣವನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸುತ್ತಿದ್ದಾರೆ. ಇಂದು ಸಿಎಂ ಡಿನ್ನರ್ ಮೀಟಿಂಗ್ ಸಮಾಧಾನ ಮಾಡಲು ಅಲ್ಲ. ಊಟ ಹಾಕಿ ಬಿಹಾರ ಚುನಾವಣೆಗೆ ಟಾರ್ಗೆಟ್ ಫಿಕ್ಸ್ ಮಾಡಲು ಕರೆದಿದ್ದಾರೆ ಹೊರತು ಮೇಯಿಸಲು ಅಲ್ಲ ಎಂದು ಲೇವಡಿ ಮಾಡಿದ್ದಾರೆ.











