ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ನಾಲಿಗೆಯನ್ನು ಹದ್ದುಬಸ್ತಿನಲ್ಲಿ ಇಡಬೇಕಿತ್ತು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ನಾಲಿಗೆಯನ್ನು ಹದ್ದುಬಸ್ತಿನಲ್ಲಿ ಇಡಬೇಕಿತ್ತು. ಅವರಿಗೆ ಅರಳು ಮರಳು ಆಗಿದ್ಯಾ?. ಮಾನಸಿಕ ಆರೋಗ್ಯ ಕೆಟ್ಟಿದ್ಯಾ? .
ಆರ್ ಎಸ್ ಎಸ್-ಬಿಜೆಪಿ ಕಾರ್ಯಕರ್ತರನ್ನು ಕೊಲ್ಲುವ ದ್ವೇಷ ಭಾಷಣ ಮಾಡಿದ್ದೀರಿ. ರಾಜ್ಯ ಸರ್ಕಾರ ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕ ಅಂಗೀಕಾರ ಮಾಡಿದೆ. ರಜಾಕಾರರು ನಿಮ್ಮ ಮನೆತನ ಹಾಳು ಮಾಡಿದ್ದು ಎಂದು ಹಿಂದೆ ಹೇಳಿದ್ರಿ. ಹಾಗಿದ್ದರೆ ನಿಮ್ಮ ದ್ವೇಷ ರಜಾಕಾರರ ಮೇಲೆ ಇರಬೇಕಿತ್ತು. 1972 ರಲ್ಲಿ ಖರ್ಗೆ ಶಾಸಕರಾದಾಗ ಅವರ ತಂದೆ ದನ ಕಾಯುತ್ತಿದ್ದರು. ಇವರ ಭವಿಷ್ಯ ರೂಪಿಸಿದ ತಂದೆಯನ್ನೇ ಮನೆಗೆ ಸೇರಿಸಿಲ್ಲ ಎಂದ ಅನೇಕರು ಹೇಳುತ್ತಾರೆ.
ಬ್ರಾಹ್ಮಣರು ದ್ವೇಷ ಭಾಷಣ ಕಲಿಸುತ್ತಾರಾ?. ನಿಮಗೆ ದ್ವೇಷ ಭಾಷಣ ಕಲಿಸಿದ್ದು ನಿಮ್ಮ ಮನೆಯ ಬ್ರಾಹ್ಮಣರಾ?. ನಿಮ್ಮ ಮನೆ ತುಂಬಾ ಬ್ರಾಹ್ಮಣರನ್ನು ತುಂಬಿಸಿಕೊಂಡಿದ್ದೀರಿ. ನೀವು ದಲಿತರಾಗಿ ಉಳಿದಿಲ್ಲ. ನನ್ನಲ್ಲಿ ಹರಿಯುವುದು ದಲಿತ ರಕ್ತ ಎಂದು ಯಾಕೆ ಬೊಗಳುತ್ತೀರಿ? ಎಂದು ಪ್ರಶ್ನಿಸಿದ್ದಾರೆ.
ಮುಸ್ಲಿಮರ ಬಗ್ಗೆ ಪ್ರೀತಿ ಇದ್ದರೆ ಅದೇ ಸಮುದಾಯದವರನ್ನು ಮದುವೆ ಆಗಬೇಕಿತ್ತು. ನಿಮ್ಮ ಮಕ್ಕಳನ್ನೂ ಮುಸ್ಲಿಂ ಸಮುದಾಯದ ಜೊತೆ ಮದುವೆ ಮಾಡಬೇಕಿತ್ತು. ಬೇವಿನಕಾಯಿಗೆ ಹಾಗಲಕಾಯಿ ಸಾಕ್ಷಿ. ತಂದೆ ಮಾತಿಗೆ ಮಗನ ಬೆಂಬಲ, ಇಬ್ಬರ ಮನಸ್ಥಿತಿ ಒಂದೇ . ಕಾಂಗ್ರೆಸ್ ನಲ್ಲಿ ಯಾರೂ ಇವರ ಮಾತಿಗೆ ಬೆಂಬಲ ನೀಡಲ್ಲ. ಅಪ್ಪ, ಮಗ ಹಗೆತನದ ಹೇಳಿಕೆ ನೀಡುತ್ತಾರೆ. ಇಬ್ಬರ ತಲೆಯಲ್ಲಿ ವಿಷಕಾರಿ ಹಾವಿಗಿಂತ ಹೆಚ್ಚು ವಿಷ ಇದೆ. ಅಪ್ಪ, ಮಗ ಇಬ್ಬರನ್ನೂ ತಿಹಾರ್ ಜೈಲಿಗೆ ಕಳುಹಿಸಬೇಕು. ಆಮೇಲೆ ಯಾರೂ ಈ ರೀತಿ ಮಾತಾಡಲ್ಲ. ಖರ್ಗೆ ಅವರಿಗೆ ವಿಶ್ರಾಂತಿ ಅಗತ್ಯವಿದೆ ಎಂದಿದ್ದಾರೆ
ಜೈಲಿನಲ್ಲಿ ಅಪ್ಪ, ಮಗ ವಿಶ್ರಾಂತಿ ಪಡೆಯುವಂತೆ ಕೇಂದ್ರ ಗೃಹ ಸಚಿವರು ಮಾಡಬೇಕು. ಮಂಗ ತಾನು ಕೆಡುವುದಲ್ಲದೇ ವನವನ್ನು ಕೆಡಿಸಿದಂತೆ ಇವರು ಸಮಾಜ ಕೆಡಿಸಬಾರದು. ವಿಷಕಾರಿ ನಾಲಿಗೆ ಹರಿಬಿಟ್ಟು, ಬೇರೆಯವರು ಇವರನ್ನು ನಿಂದಿಸಿದಾಗ ದಲಿತ ಕಾರ್ಡ್ ಬಳಕೆ ಮಾಡ್ತಾರೆ. ಜಾತಿ ಟ್ಯಾಗ್ ಮಾಡಿ ಏನು ಬೇಕಾದರೂ ಮಾತಾಡಲು ಆಗುತ್ತಾ? ಸಂವಿಧಾನ ಬಂದ ಮೇಲೆ ಮನುಸ್ಮೃತಿ ಸತ್ತು ಹೋಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಗೆ ಖರ್ಗೆ ಅವರಿಂದ ಬಾಗಿಲು ಹಾಕಿಸುವ ಕೆಲಸ ಆಗುತ್ತಿದೆ. ಆ ಮೂಲಕ ದಲಿತರಿಗೆ ಕೆಟ್ಟ ಹೆಸರು ತರಲು ಯತ್ನ ನಡೆಯುತ್ತಿದೆ. ರಾಹುಲ್ ಗಾಂಧಿ ತಕ್ಷಣ ಖರ್ಗೆ ಅವರನ್ನು ಅಧ್ಯಕ್ಷ ಸ್ಥಾನದಿಂದ ಮುಕ್ತ ಮಾಡಬೇಕು. ದಲಿತರಿಗೆ ಕೆಟ್ಟ ಹೆಸರು ಬರದಂತೆ ಮಾಡಬೇಕು ಎಂದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಗೆ ಬಕೆಟ್ ಹಿಡಿದು ಈಗ ಛಲವಾದಿ ಹಾರಾಡುತ್ತಾರೆ ಎಂಬ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ನನಗೆ ಯಾರೂ ಚಪ್ಪಲಿ ಎತ್ತಿಲ್ಲ. ನನಗೆ ಯಾರೂ ಪೊರಕೆ ಎತ್ತಿಲ್ಲ. ಪ್ರದೀಪ್ ಈಶ್ವರ್ ಸಮಾಜಕ್ಕೆ ಅವರ ನಡೆಯ ಮೂಲಕ ಪರಿಚಯ ಮಾಡಿಕೊಂಡಿದ್ದಾರೆ. ನಾನು ಅವರ ಬಗ್ಗೆ ಮಾತಾಡಿ ನನ್ನ ಗೌರವ ಕಡಿಮೆ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.










