ಬೆಂಗಳೂರು; ರಮ್ಯಾ ಅವರು ದೂರು ಕೊಡಲಿ, ದೂರು ಕೊಟ್ಟ ನಂತರ ಪೊಲೀಸರು ಕ್ರಮ ತಗೋತಾರೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.
ನಟಿ ರಮ್ಯಾಗೆ ಇನ್ಸ್ಟಾಗ್ರಾಂ ನಲ್ಲಿ ದರ್ಶನ್ ಫ್ಯಾನ್ಸ್ ಕೆಟ್ಟ ಕಾಮೆಂಟ್ ಮಾಡಿರುವ ವಿಚಾರದ ಬಗ್ಗೆ ಮಾತನಾಡಿದ ಅವರು ನಮ್ಮಲ್ಲಿ ಕೆಲವು ಪ್ರಕರಣದಲ್ಲಿ ಸೂಮೋಟೋ ತಗೋತಾರೆ. ಆಥರ ಏನಾದ್ರೂ ಅವಕಾಶ ಇದ್ರೆ ಪೊಲೀಸರು ಪರಿಶೀಲನೆ ಮಾಡುತ್ತಾರೆ. ಆದ್ರೆ ರಮ್ಯಾ ಅವರು ದೂರು ಕೊಡಲಿ, ದೂರು ಕೊಟ್ಟರೆ ಕ್ರಮ ವಹಿಸಲಾಗುವುದು ಎಂದಿದ್ದಾರೆ.
ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಪ್ರಕರಣದ ಬಗ್ಗೆ ಮಾತನಾಡಿದ ಅವರು ಇದರ ಸಂಪೂರ್ಣ ಮಾಹಿತಿ ಇನ್ನೂ ಬರಬೇಕು. ರಾಜಾರೋಷವಾಗಿ ಇಲ್ಲಿ ಡ್ರಗ್ಸ್ ತಯಾರಿಸ್ತಿದ್ರು ಅನ್ನೋದು ಆತಂಕದ ವಿಚಾರ. ಸ್ಥಳೀಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕ್ರಮಕ್ಕೆ ಸೂಚಿಸಲಾಗಿದೆ. ಸ್ಥಳೀಯ ಠಾಣೆಯವರಿಗೆ ಗೊತ್ತಾಗಿಲ್ಲ, ಬಾಂಬೆ ಪೊಲೀಸರು ಬಂದು ದಾಳಿ ಮಾಡ್ತಾರೆ ಅಂದ್ರೆ ನಮ್ಮದೇ ಲೋಪ ಎದ್ದು ಕಾಣುತ್ತಿದೆ. ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ, ಎಸ್‌ಪಿಗಳಿಗೂ ಸೂಚನೆ ಕೊಡಲಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಜಿಲೆಟಿನ್ ಕಡ್ಡಿಗಳ ಪತ್ತೆ ಪ್ರಕರಣದ ಬಗ್ಗೆ ಮಾತನಾಡಿ ಕ್ವಾರಿಗಳಿಗೆ ಅಂತ ಇದನ್ನ ಇಟ್ಟಿದ್ರು ಅನ್ನೋದು ಮಾಹಿತಿ. ಆತ ಪೊಲೀಸರು ಬಂದ್ರು ಅಂತ ಹೆದರಿ ಅಲ್ಲೇ ಬಿಟ್ಟು ಹೋಗಿದ್ದಾನೆ. ಯಾರಿಗೋ ಅದನ್ನು ಕೊಡಬೇಕಿತ್ತು, ಪೊಲೀಸರನ್ನು ನೋಡಿ ಅಲ್ಲೇ ಬಿಟ್ಟು ಹೋಗಿದಾನೆ ಅಂತ ನನಗೆ ಮಾಹಿತಿ ಬಂದಿದೆ. ಇದರ ಬಗ್ಗೆ ಇನ್ನೂ ತನಿಖೆ ಆಗಬೇಕು ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು ಕೇಂದ್ರ ಸರಿಯಾದ ಸಮಯಕ್ಕೆ ಗೊಬ್ಬರ ಕೊಟ್ರೆ ಸಮಸ್ಯೆ ಬರಲ್ಲ. ಕೇಂದ್ರದಿಂದ ರಸಗೊಬ್ಬರ ಪ್ರಮಾಣ ಇನ್ನೂ ಬರಬೇಕು. ಕೇಂದ್ರದಿಂದ ಬಂದಿದ್ರೆ ಪೂರೈಕೆ ಮಾಡಬಹುದಿತ್ತು. ಬಿಜೆಪಿ ಅವರು ಪ್ರತಿಭಟನೆ ಮಾಡ್ತಿದ್ದಾರೆ, ನಮ್ಮವರೂ ಪ್ರತಿಭಟನೆ ಮಾಡ್ತಿದ್ದಾರೆ. ನಾವೇನು ಗೊಬ್ಬರ ಇದ್ದು ದಾಸ್ತಾನು ಮಾಡಿಕೊಂಡಿದ್ದೀವಾ?.ಇವರು ಅಧಿಕಾರದಲ್ಲಿ ಇದ್ದಾಗಲೂ ಅಭಾವ ಆಗಿತ್ತು. ಹಾಗಂತ ನಾವು ಹೋಲಿಕೆ ಮಾಡಿ ಮಾತಾಡಲ್ಲ. ಬಿಜೆಪಿಯವರಿಗೂ ಸಮಸ್ಯೆ ಏನು ಅಂತ ಗೊತ್ತಿದೆ. ತುಮಕೂರಿನಲ್ಲಿ ಗೊಬ್ಬರದ ಸಮಸ್ಯೆ ಏನೂ ಆಗಿಲ್ಲ ಎಂದ ಪರಮೇಶ್ವರ್ ಹೇಳಿದ್ದಾರೆ.
ಯತೀಂದ್ರ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ರಿಗೆ ಸಿದ್ದರಾಮಯ್ಯ ಅವರನ್ನು ಹೋಲಿಕೆ ಮಾಡಿದ್ದಾರೆ ಅಂತ ನನಗೆ ಅನಿಸಲ್ಲ. ಸ್ವತಂತ್ರ ಪೂರ್ವದಲ್ಲೇ ಮಹಾರಾಜರು ಅಭಿವೃದ್ಧಿ ಕಡೆ ಗಮನ ಕೊಟ್ಟಿದ್ರು. ಬಹಳ ಅಭಿವೃದ್ಧಿ ಕಾರ್ಯಕ್ರಮಗಳು ಮೀಸಲಾತಿ ಅವರ ಕಾಲದಲ್ಲೇ ಕೊಟ್ಟಿದ್ರು .ಮಹಾರಾಜರ ಕೆಲಸಗಳನ್ನು ನಾವು ಬೇರೆ ಯಾರಿಗೂ ಹೋಲಿಕೆ ಮಾಡಲು ಆಗಲ್ಲ.ಈ ಕಾಲಘಟ್ಟದಲ್ಲಿ ಸಿದ್ದರಾಮಯ್ಯ ಅವರೂ ಅನೇಕ ಬದಲಾವಣೆಗಳನ್ನು ತಂದಿದ್ದಾರೆ ಎಂದು ಹೇಳಿದ್ದಾರೆ.