ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ಹೆಸರಿನಲ್ಲಿ ತಿರಂಗಾ ಯಾತ್ರೆಯನ್ನು ಯಾವುದೇ ಪಕ್ಷಭೇದವಿಲ್ಲದೇ ಮಾಡಬೇಕು ಎಂಬುದು ಕೇಂದ್ರ ಸರ್ಕಾರದ ಆಗ್ರಹ ಎಂದರು.
ಸೇನಾಪಡೆಗಳ ಜೊತೆ ನಿಂತು ಬಲ ತುಂಬುವುದು ಇದರ ಉದ್ದೇಶ. ಕರ್ನಾಟಕದಲ್ಲಿ ಕೂಡಾ ದೊಡ್ಡ ಮಟ್ಟದಲ್ಲಿ ತಿರಂಗಾ ಯಾತ್ರೆ ಮಾಡುತ್ತಿದ್ದೇವೆ. ಮೇ 15 ರಂದು ಬೆಂಗಳೂರಿನಲ್ಲಿ ತಿರಂಗಾ ಯಾತ್ರೆ ಮಾಡುತ್ತೇವೆ. ಮಲ್ಲೇಶ್ವರಂನ ಶಿರೂರು ಪಾರ್ಕ್ ನಿಂದ ಮಲ್ಲೇಶ್ವರಂ 18ನೇ ಕ್ರಾಸ್ ವರೆಗೆ ನಡೆಯಲಿದೆ. ಮೇ 16-17 ರಂದು ಜಿಲ್ಲಾ ಕೇಂದ್ರಗಳಲ್ಲಿ, 18 ರಿಂದ 23 ರವರೆಗೆ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ. ಯಾತ್ರೆಯಲ್ಲಿ ಯಾವುದೇ ಪಕ್ಷದ ಧ್ವಜದ ಬಳಕೆ ಇಲ್ಲ ಎಂದರು.
ಇದೇ ವೇಳೆ ಬೆಂಗಳೂರಿನಲ್ಲಿ ಇಂದಿರಾ ಗಾಂಧಿ ಕುರಿತು ಯುವ ಕಾಂಗ್ರೆಸ್ ಫ್ಲೆಕ್ಸ್ ಅಳವಡಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ನವರು ಒಗ್ಗಟ್ಟಿನ ಸಂದರ್ಭದಲ್ಲಿ ಯಾವುದೇ ಒಡಕು ಮಾತಾಡಬಾರದು. ಇಂತಹ ಸಂದರ್ಭದಲ್ಲಿ ಹೇಳಿಕೆಗಳು ಸರಿಯಲ್ಲ, ಚರ್ಚೆ ಮಾಡುವ ಸಂದರ್ಭ ಅಲ್ಲ. ಸೈನಿಕರು ಏನೇ ದಾಳಿ ಮಾಡುದರೂ ಸಾಕ್ಷಿ ಕೇಳುವುದು ನಮ್ಮಲ್ಲಿ ಮೊದಲಿನಿಂದಲೂ ಚಾಳಿ. ಈಗ ಸ್ಯಾಟಲೈಟ್ ಮೂಲಕ ಸೈನಿಕರು ಸಾಕ್ಷಿ ಕೊಟ್ಟಿದ್ದಾರೆ. ಕೆಲವು ಪಾಕಿಸ್ತಾನ ಜಿಂದಾಬಾದ್ ಎನ್ನುವವರಿಗೆ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ಜನರು ಸೈನಿಕರು ಕೊಟ್ಟ ಸಾಕ್ಷಿಯನ್ನು ನಂಬಿದ್ದಾರೆ. ಮೊದಲ ಬಾರಿ ದೇಶದಲ್ಲಿ ಒಂದು ಅಜೆಂಡಾ ಫಿಕ್ಸ್ ಆಗಿದೆ. ಹಿಂದೆಲ್ಲಾ ಯಾವುದೇ ಅಜೆಂಡಾ ಇಲ್ಲದೇ ಮಾತುಕತೆಗೆ ಹೋಗುತ್ತಿದ್ದರು. ನಾನು ಕಾಂಗ್ರೆಸ್ ನವರಿಗೆ ಸವಿನಯ ಪ್ರಾರ್ಥನೆ ಮಾಡುತ್ತೇನೆ. ನಾವು ರಾಜಕಾರಣ ಬಿಟ್ಟು ಸೈನಿಕರ ಜೊತೆ ನಿಲ್ಲಬೇಕು.ಹಿಂದೆ ಏನಾಯ್ತು, ಪಿಒಕೆ ಬಿಟ್ಟುಕೊಟ್ಟಿದ್ದು, ಸಿಂಧೂ ನದಿ ಒಪ್ಪಂದ, ಮುಂಬೈ ದಾಳಿ ಯಾವುದನ್ನೂ ನಾವು ಕೇಳುತ್ತಿಲ್ಲ ಎಂದರು.
ಕಾಂಗ್ರೆಸ್ ನವರು ಹಿಂದೆ ಆಗಿರುವುದನ್ನು ಹೇಳುವುದು ಬಿಟ್ಟು ಸೈನಿಕರ ಜೊತೆ ನಿಲ್ಲಬೇಕು. ಕಾಂಗ್ರೆಸ್ ಈಗ ಇಂದಿರಾ ಗಾಂಧಿ ಬಗ್ಗೆ ಮಾತಾಡುವುದು ಸೂಕ್ತವಲ್ಲ. ಹಿಂದೆ 93 ಸಾವಿರ ಸೈನಿಕರನ್ನು ಬಿಟ್ಟಿದ್ದನ್ನು ನಾವು ಕೇಳಿದ್ದೇವಾ?. ಪಿಒಕೆಯನ್ನು ಅಂದು ಬಿಟ್ಟಿದ್ದಕ್ಕೆ ಈಗ ಈ ಸಮಸ್ಯೆ ಸೃಷ್ಟಿಯಾಗಿದ್ದು. ಅಂದು ಜನರಲ್ ಕಾರ್ಯಪ್ಪ ಒಂದು ಗಂಟೆ ಸಮಯ ಕೇಳಿದಾಗ ಕೊಡದೇ ಇದ್ದವರು ಯಾರು?. ಇದನ್ನು ಯಾವುದನ್ನೂ ನಾವು ಈಗ ಕೇಳಲ್ಲ ಎಂದು ಪ್ರಶ್ನಿಸಿದ್ರು.
ಅಮೇರಿಕಾ ಮಾತನ್ನು ಕೇಳಿ ಯಾರೂ ಯುದ್ದ ನಿಲ್ಲಿಸಿಲ್ಲ. ಕ್ರೆಡಿಟ್ ತೆಗೆದುಕೊಳ್ಳಲು ಯಾರು ಯಾರೋ ಏನೇನೋ ಹೇಳುತ್ತಾರೆ. ಕೃಷ್ಣ ಭೈರೇಗೌಡರು ಯುದ್ದ ಮುಂದುವರಿಸಬಹುದಿತ್ತು ಅಂತಿದ್ದರಲ್ಲ. ಸಿದ್ದರಾಮಯ್ಯರೃ ಯುದ್ದ ಬೇಡ ಅಂದ್ರಲ್ಲಾ?. ಮೊದಲೇ ಈ ಮಾತನ್ನು ನಿಮ್ಮ ಮುಖ್ಯಮಂತ್ರಿಗಳು ಹೇಳಬಹುತ್ತಲ್ಲ. ಇಲ್ಲಿ ಯಾರೋ ನಾಲ್ಕು ಜನ ಮಾತಾಡಿ ತೀರ್ಮಾನ ಮಾಡುವುದಲ್ಲ. ಯುದ್ದದ ಬಗ್ಗೆ ತೀರ್ಮಾನ ಮಾಡುವುದು ಸೈನಿಕರು. ಯುದ್ದ ವಿರಾಮದ ಬಗ್ಗೆ ಸೈನಿಕರಿಂದ ಅಭಿಪ್ರಾಯ ತೆಗೆದುಕೊಂಡೇ ಮೋದಿ ತೀರ್ಮಾನ ತೆಗೆದುಕೊಂಡಿರುವುದು. ಇಷ್ಟು ಸಾಮಾನ್ಯ ಜ್ಞಾನ ಕಾಂಗ್ರೆಸ್ ನವರಿಗೆ ಇದ್ದರೆ ಸಾಕು ಎಂದರು.