ಮನೆ ಪ್ರಸ್ತುತ ವಿದ್ಯಮಾನ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಿದ ಎಡಿಜಿಪಿ ಚಂದ್ರಶೇಖರ್; ದೂರು...

ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಿದ ಎಡಿಜಿಪಿ ಚಂದ್ರಶೇಖರ್; ದೂರು ದುರುದ್ದೇಶ ಪೂರಿತ ಎಂದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ

0

ಬೆಂಗಳೂರು; ಕೇಂದ್ರ  ಸಚಿವ ಹೆಚ್ ಡಿ ಕುಮಾರಸ್ವಾಮಿ ಹಾಗೂ ಎಡಿಜಿಪಿ ಚಂದ್ರಶೇಖರ್ ನಡುವಿನ ವಾರ್ ಸದ್ಯಕ್ಕಂತೂ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದೀಗ ಕೇಂದ್ರ ಸಚಿವ ಹೆಚ್ ಡಿ ಕಮಾರಸ್ವಾಮಿ ಅವರ ವಿರುದ್ಧ ಎಡಿಜಿಪಿ ಚಂದ್ರಶೇಖರ್ ಅವರು ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತೊಂದರೆ ಕೊಡುವುದಾಗಿ ಕುಮಾರಸ್ವಾಮಿ ಹಾಗೂ ಇತರರು ಬೆದರಿಕೆ ಹಾಕಿದ್ದಾರೆ ಎಂದು  ಎಡಿಜಿಪಿ ಚಂದ್ರಶೇಖರ್ ದೂರು ದಾಖಲಿಸಿದ್ದಾರೆ. ಎಡಿಜಿಪಿ ಚಂದ್ರಶೇಖರ್ ದೂರಿನಡಿ BNS ಅಂಡರ್ ಸೆಕ್ಷನ್ 224 ರ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ದೂರಿನಲ್ಲಿ A1 ಹೆಚ್ ಡಿ ಕುಮಾರಸ್ವಾಮಿ, A2 ನಿಖಿಲ್ ಕುಮಾರಸ್ವಾಮಿ,A3 ಸುರೇಶ್ ಬಾಬು ಎಂದು ಉಲ್ಲೇಖಿಸಿದ್ದಾರೆ.

ಇನ್ನು ಎಡಿಜಿಪಿ ದೂರು ನೀಡಿರುವ ಬಗ್ಗೆ ಚನ್ನಪಟ್ಟಣದಲ್ಲಿ ಪ್ರತಿಕ್ರಿಯಿಸಿರುವ  ಹೆಚ್ ಡಿ ಕುಮಾರಸ್ವಾಮಿ  ಐಪಿಎಸ್ ಅಧಿಕಾರಿಯೊಬ್ಬರ ದೂರಿನ ಮೇರೆಗೆ ನನ್ನ ವಿರುದ್ಧ ಪೊಲೀಸರು ದಾಖಲು ಮಾಡಿರುವ ಎಫ್ಐಆರ್ ಹಾಸ್ಯಾಸ್ಪದ, ದುರುದ್ದೇಶಪೂರಿತ ಎಂದಿದ್ದಾರೆ.

ಉಪ ಚುನಾವಣೆಯ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಅಕ್ಕೂರು ಹೊಸಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಉಪ ಚುನಾವಣೆ ಸಮಯದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಭಾರೀ ಉಮೇದಿನಿಂದ ನಮ್ಮ ವಿರುದ್ಧ ದ್ವೇಷ ಸಾಧನೆ ಮಾಡುತ್ತಿದೆ. ಇದಕ್ಕೆ ನ್ಯಾಯಾಲಯದ ಮೂಲಕವೇ ಉತ್ತರ ಕೊಡುತ್ತೇನೆ ಎಂದರು.

ಎಫ್ ಐಆರ್ ಪ್ರತಿಯನ್ನು ಓದಿದೆ. ಅದರಲ್ಲಿರುವ ದೂರಿನ ಸಾರಾಂಶವನ್ನೂ ಓದಿದೆ. ಅದು ಸಂಪೂರ್ಣ ಹಾಸ್ಯಾಸ್ಪದ ಹಾಗೂ ದುರದ್ದೇಶಪೂರಿತ ಎನ್ನುವುದು ನನಗೆ ಅರ್ಥವಾಯಿತು. ಅಲ್ಲಿ ದೂರುದಾರರೇ ಹೇಳಿಕೊಂಡಿದ್ದಾರೆ, ಕುಮಾರಸ್ವಾಮಿ ಅವರು ಮಾಧ್ಯಮಗೋಷ್ಠಿ ಮಾಡಿ ನನ್ನ ವಿರುದ್ಧ ಆರೋಪ ಮಾಡಿದರು. ಅದಕ್ಕೆ ಕ್ರಮ ಕೈಗೊಳ್ಳಿ ಎಂದು ಕೇಳಿದ್ದಾರೆ. ನಾನು ಅವರ ಬಗ್ಗೆ ತಪ್ಪು ಮಾಹಿತಿ ನೀಡಿದೇನೆ ಎಂದು ಹೇಳಿಕೊಂಡಿದ್ದಾರೆ? ಬೇಕಾದರೆ ನನ್ನ ಮಾಧ್ಯಮಗೋಷ್ಠಿಯ ವಿಡಿಯೋ ನೋಡಿಕೊಳ್ಳಲಿ ಎಂದು ಕೇಂದ್ರ ಸಚಿವರು ಹೇಳಿದರು.

ನಾನು ಪ್ರೆಸ್ ಮೀಟ್ ಮಾಡಿದೆ ಎಂದು ಎಫ್ಐಆರ್ ಮಾಡಿಸಿದ್ದಾರೆ. ಹೇಳಿಕೆ ನೀಡಿದರು ಎಂದು ಚನ್ನಪಟ್ಟಣದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಮೇಲೆಯೂ ಎಫ್ಐಆರ್ ಮಾಡಿಸಿದ್ದಾರೆ. ಮುಖ್ಯ ಕಾರ್ಯದರ್ಶಿಗೆ ದೂರು ಕೊಟ್ಟರು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರ ಮೇಲೆಯೂ ಎಫ್ಐಆರ್ ಮಾಡಿಸಿದ್ದಾರೆ. ಹಾಗಾದರೆ, ಯಾರೂ ಯಾರ ವಿರುದ್ಧವೂ ಮಾತನಾಡಬಾರದು, ದೂರು ನೀಡಬಾರದು ಎಂದು ಕಾನೂನಿನಲ್ಲಿ ಇದೆಯೇ? ನಮ್ಮ ಬಾಯಿ ಮುಚ್ಚಿಸಲು ಇವರಿಂದ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವರು ಕಿಡಿ ಕಾರಿದರು.

ಇದೊಂದು ಷಡ್ಯಂತ್ರ ಹಾಗೂ ಕುತಂತ್ರದ ಭಾಗ. ಯಾವಾಗ ಚನ್ನಪಟ್ಟಣದಲ್ಲಿ ಇವರ ಮೋಸ ಕುತಂತ್ರ ನಡೆಯಲ್ಲ ಎಂದು ಗೊತ್ತಾಯಿತೋ  ಹೊಸ ಕುತಂತ್ರಕ್ಕೆ ಮುಂದಾಗಿದ್ದಾರೆ. ನಮಗೆ ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಂವಿಧಾನ ಕಾನೂನಿನ ಮೇಲೆ ಗೌರವ ಇದೆ. ನನ್ನ ಚನ್ನಪಟ್ಟಣದ ಜನರ ಮೇಲೆ ವಿಶ್ವಾಸ ಇದೆ. ಹೀಗಿರುವಾಗ ಇಂತಹ ನೂರು ಎಫ್ ಐಆರ್ ಗಳು ದಾಖಲಾದರೂ ನಾವು ಧೃತಿಗೆಡಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.