ಬೆಂಗಳೂರು; ರಾಜ್ಯ ಸರ್ಕಾರ ಬಹಳ ದಿನ ಉಳಿಯಲ್ಲ ಎಂಬ ರೀತಿ ಕಾಣುತ್ತಿದೆ ಎಂದು ಶಾಸಕರು ಬೀದಿಗಿಳಿದು ಸಿಎಂ, ಡಿಸಿಎಂ ಪರವಾಗಿ ಹೇಳಿಕೆ ಕೊಡುತ್ತಿದ್ದಾರೆ ಎಂದು ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಬಿಜೆಪಿ ಯಾವ ವಿಚಾರಗಳನ್ನು ತೆಗೆದುಕೊಳ್ಳಬೇಕು ಎಂಬ ವಿಚಾರ ಚರ್ಚೆ ಮಾಡುತ್ತೇವೆ. ಇಂದು ಮಧ್ಯಾಹ್ನ 3 ಗಂಟೆಗೆ ವಿಧಾನಸೌಧದಲ್ಲಿ ಪಕ್ಷದ ಪ್ರಮುಖರ ಸಭೆ ಕರೆದಿದ್ದೇವೆ. ರಾಜ್ಯ ಸರ್ಕಾರ ಬಹಳ ದಿನ ಉಳಿಯಲ್ಲ ಎಂಬ ರೀತಿ ಕಾಣುತ್ತಿದೆ. ಶಾಸಕರು ಬೀದಿಗಿಳಿದು ಸಿಎಂ, ಡಿಸಿಎಂ ಪರವಾಗಿ ಹೇಳಿಕೆ ಕೊಡುತ್ತಿದ್ದಾರೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿಚಾರ, ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳುತ್ತಿರುವ ವಿಚಾರ, ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆ, ಬೆಂಗಳೂರು ಕಸದ ಸಮಸ್ಯೆ, ಇ-ಖಾತಾ ಎಲ್ಲಾ ವಿಚಾರ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ.ಹಿಂದಿನ 10-12 ಸಿಎಂಗಳು ಮಾಡಿರುವ ಸಾಲದಷ್ಟು ಸಿದ್ದರಾಮಯ್ಯ ಒಬ್ಬರೇ ಸಾಲ ಮಾಡಿದ್ದಾರೆ. ಸರ್ಕಾರ ಮುಗಿಯುವಷ್ಟರಲ್ಲಿ 6 ಲಕ್ಷ ಕೋಟಿ ಸಾಲ ಮಾಡಿಬಿಡುತ್ತಾರೆ ಎಂದಿದ್ದಾರೆ.
ಡಿಸಿಎಂ ಪರವಾದ ಶಾಸಕರನ್ನು ಗಮನಿಸಲು ಸಿಎಂ ರಿಂದ ಗುಪ್ತಚರ ಇಲಾಖೆ ಬಳಕೆ ಬಗ್ಗೆ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಯಾರ್ಯಾರು ಡಿ.ಕೆ. ಶಿವಕುಮಾರ್ ಪರವಾಗಿದ್ದಾರೋ ಅವರ ಚಲನವಲನ ನೋಡಲು ಸಿಎಂ ಎಸ್ಪಿ ನೇತೃತ್ವದ ತಂಡವನ್ನೇ ಮಾಡಿದ್ದಾರೆ. ಕಣ್ಣಿಗೆ ಕಾಣದೇ ಇರುವ ಎಸ್ಐಟಿ ಯನ್ನು ಮಾಡಿದ್ದಾರೆ. ಫೋನ್ ಟ್ಯಾಪಿಂಗ್ ಅಂತಾನೇ ಹೇಳಬಹುದು. ಆ ಕ್ಷೇತ್ರಗಳ ಶಾಸಕರ ಅನುದಾನವನ್ನೂ ಕಡಿತ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಶ್ರೀಮಂತರು ಗ್ಯಾರಂಟಿ ಬಿಟ್ಟುಕೊಡಿ ಎಂಬ ಸಚಿವರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಇದನ್ನು ಚುನಾವಣೆಗೆ ಗ್ಯಾರಂಟಿ ಘೋಷಣೆ ಮಾಡುವಾಗಲೇ ಹೇಳಬಹುದಿತ್ತಲ್ವಾ?. ಆಗ ಶ್ರೀಮಂತರಿಗೂ ಕೊಡುತ್ತೇವೆ ಅಂತಾ ಹೇಳಿ ಈಗ ಮೋಸ ಮಾಡಿದಂತಾಗಲ್ವಾ?. ಇದು ಸರ್ಕಾರ ಪಾಪರ್ ಆಗಿದೆ ಎಂಬುದಕ್ಕೆ ಕನ್ನಡಿ ಹಿಡಿದಂತೆ ಎಂದು ತಿಳಿಸಿದ್ದಾರೆ.
ಮಧ್ಯ ಪ್ರಾಚ್ಯದಲ್ಲಿನ ಯುದ್ಧ ಎಲ್ಲರಿಗೂ ಆತಂಕ ಆಗಿದೆ. ಖೋಮೇನಿ ಪ್ರಜಾಪ್ರಭುತ್ವ ಸರ್ಕಾರದ ಪ್ರತಿನಿಧಿ ಅಲ್ಲ. ಇರಾನ್ ಪಕ್ಕದ ಮುಸ್ಲಿಂ ದೇಶಗಳ ಮೇಲೆ ದಾಳಿ ಮಾಡುವುದು ಎಷ್ಟು ಸರಿ?. ಇರಾನ್ ನಲ್ಲಿ ನಾಲ್ಕೈದು ತಿಂಗಳ ಹಿಂದೆ ಆಂತರಿಕ ದಂಗೆಯೂ ಆಗಿದೆ. ಅಲ್ಲಿ ಸಮಾನತೆ ಇಲ್ಲ, ಸರ್ವಾಧಿಕಾರ ಇದೆ. ಯಾವುದೇ ದೇಶದಲ್ಲಿ ಧರ್ಮ, ಅಧಿಕಾರ, ಆಡಳಿತ ಒಬ್ಬರ ಕೈಗೆ ಸಿಕ್ಕಿದರೆ ಅದು ಸರ್ವಾಧಿಕಾರ. ಯುದ್ಧ ನಿಲ್ಲಬೇಕು ಅಂತಾ ಪ್ರಧಾನಿ ಮೋದಿ ಮತ್ತು ಬಿಜೆಪಿ ಹೇಳಿದೆ. ವಾಪಸ್ ಬರುವ ಕನ್ನಡಿಗರನ್ನು ಕರೆತರಲು ಉನ್ನತ ಮಟ್ಟದ ಸಭೆಗಳು ಆಗಿವೆ ಎಂದಿದ್ದಾರೆ.
ಖೊಮೇನಿ ಹತ್ಯೆ ಖಂಡಿಸಿ ರಾಜ್ಯದಲ್ಲಿ ಮತ್ತು ಬೆಂಗಳೂರಿನಲ್ಲಿ ಪ್ರತಿಭಟನೆ ವಿಚಾರದ ಖೊಮೇನಿ ಒಬ್ಬ ಸರ್ವಾಧಿಕಾರಿ.ಇಲ್ಲಿ ಪ್ರತಿಭಟನೆ ಮಾಡಿದವರೂ ಕಾನೂನು ಉಲ್ಲಂಘಿಸಿ ಸರ್ವಾಧಿಕಾರಿ ಧೋರಣೆ ತೋರಿದ್ದಾರೆ.ಅವನು ಏನು ಹೇಳಿಕೊಟ್ಟಿದ್ದಾನೋ ಅದನ್ನು ಇವರು ಮಾಡಿದ್ದಾರೆ.ಪ್ರತಿಭಟನೆ ಮಾಡಿದವರ ಮೇಲೆ ಕ್ರಮ ಆಗಬೇಕು.ಖೊಮೇನಿ ಹತ್ಯೆ ಆಗಬಾರದಿತ್ತು ಎಂಬ ಸಿಎಂ ಹೇಳಿಕೆ ಕಾಂಗ್ರೆಸ್ ಪಕ್ಷದ ನಿಲುವು. ಭಾರತ ಇಸ್ರೇಲ್ ಮತ್ತು ಇರಾನ್ ಎರಡೂ ದೇಶಗಳಿಗೂ ವಿರೋಧಿಯಲ್ಲ. ಭಾರತ ಮತ್ತು ಇರಾನ್ ಗೆ ಉತ್ತಮ ಸಂಬಂಧ ಇತ್ತು. ಕಾರ್ಗಿಲ್ ಯುದ್ಧದಲ್ಲಿ ಇಸ್ರೇಲ್ ಭಾರತಕ್ಕೆ ನೆರವು ನೀಡಿತ್ತು. ಕನ್ನಡಿಗರನ್ನು ರಕ್ಷಿಸಲು ಸಿಎಂ ಮತ್ತು ಡಿಸಿಎಂ ಪ್ರಧಾನಿ ಭೇಟಿ ಮಾಡಿ ಮನವಿ ಮಾಡಿದರೆ ಒಳ್ಳೆಯದು. ರಾಜ್ಯ ಸರ್ಕಾರ ಪತ್ರ ಬರೆದಿರುವುದು ಬಿಟ್ಟರೆ ಬೇರೇನೂ ಮಾಡಿದಂತೆ ಕಾಣುತ್ತಿಲ್ಲ ಹೇಳಿದ್ದಾರೆ.
ಮಾರ್ಚ್ 6 ರಿಂದ ಗುತ್ತಿಗೆದಾರರ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿದ ಅವರು ಗುತ್ತಿಗೆದಾರರು ಕಾದು ಕಾದು ಸಾಕಾಗಿದ್ದಾರೆ.ಮಾತು ಎತ್ತಿದರೆ ಸಿದ್ದರಾಮಯ್ಯ ಬಿಜೆಪಿ ಸಾಲ ಮಾಡಿ ಹೋಗಿದ್ದು ಅಂತಾರೆ.ಅಪ್ಪಾ ಪುಣ್ಯಾತ್ಮ ಸಿದ್ದರಾಮಯ್ಯ ನೀನು ಅಧಿಕಾರ ಬಿಟ್ಟು ಹೋದಾಗ ಎಷ್ಟು ಸಾಲ ಮಾಡಿ ಹೋಗಿದ್ದೆ ಅದನ್ನು ಮೊದಲು ಹೇಳು. ನೀನು ಏನಾದರೂ ನಮಗೆ ಲಾಭ ಮಾಡಿಕೊಟ್ಟು ಹೋಗಿದ್ಯಾ?.ನೀನು ಬಿಟ್ಟು ಹೋದಾಗ 23 ಸಾವಿರ ಕೋಟಿ ಸಾಲ ಬಿಟ್ಟು ಹೋಗಿದ್ದೆ. ಕೋವಿಡ್ ಬಳಿಕ ಬೊಮ್ಮಾಯಿ ಸರ್ ಪ್ಲಸ್ ಬಜೆಟ್ ಮಂಡಿಸಿದರು. ನಿಮಗೆ ಯಾಕೆ ಸರ್ ಪ್ಲಸ್ ಬಜೆಟ್ ಮಂಡಿಸಲು ಆಗಲಿಲ್ಲ? ಎಂದು ತಿಳಿಸಿದ್ದಾರೆ.











