ಬೆಂಗಳೂರು: ಸಿ.ಟಿ. ರವಿ ಪ್ರಕರಣ ಸಿಐಡಿ ತನಿಖೆಗೆ ವಹಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಶಾಸಕ ಡಾ. ಅಶ್ವಥನಾರಾಯಣ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಸಿಐಡಿ ತನಿಖೆಗೆ ಕೊಟ್ಟಿರುವುದು ಸರಿಯಲ್ಲ ಎಂದಿದ್ದಾರೆ.
ಸಿಎಂ, ಗೃಹ ಸಚಿವರು, ಕಾನೂನು ಸಚಿವರು ಈ ಮೂವರೂ ತಿಳುವಳಿಕೆ ಇರುವವರು. ಸದನದಲ್ಲಿನ ವಿಚಾರದಲ್ಲಿ ಈಗಾಗಲೇ ಸಭಾಪತಿ ರೂಲಿಂಗ್ ಕೊಟ್ಟಿದ್ದಾರೆ. ಇಬ್ಬರ ಕಡೆಯಿಂದಲೂ ದೂರು ಪಡೆದು ಸದನದಲ್ಲಿ ಸಿ.ಟಿ. ರವಿ ಹೇಳಿದ್ದಾರೆ ಎಂಬ ಪದ ಬಳಕೆ ರೆಕಾರ್ಡ್ ಆಗಿಲ್ಲ, ಸಾಕ್ಷ್ಯ ಇಲ್ಲ ಅಂದಿದ್ದಾರೆ. ಪ್ರಕರಣ ಈಗಾಗಲೇ ಕೋರ್ಟ್ ಅಂಗಳ ಏರಿದರೂ, ಕೋರ್ಟ್ ನಲ್ಲಿ ತನಿಖೆಗೆ ಅವಕಾಶ ಇಲ್ಲ. ಏನೇ ತನಿಖೆ ಆದರೂ ಸಭಾಪತಿಯವರೇ ಮಾಡಬೇಕು. ಅವರ ವ್ಯಾಪ್ತಿ ಮೀರಿ ಹೋಗುವುದು ಸರಿಯಲ್ಲ. ಇದೆಲ್ಲಾ ಸಿಎಂ ಸಿದ್ದರಾಮಯ್ಯ, ಕಾನೂನು ಸಚಿವರು, ಗೃಹ ಸಚಿವರಿಗೆ ಗೊತ್ತಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಸಿಟ್ಟಿನಲ್ಲಿ ಏನೋ ಮಾಡಲು ಹೋಗಿ ಇನ್ನೇನೋ ಆಗುವುದು ಬೇಡ, ಈ ಹಂತದಲ್ಲಿ ಸರ್ಕಾರ ಪ್ರಕರಣ ಸಿಐಡಿ ತನಿಖೆಗೆ ಕೊಟ್ಟಿರುವುದು ಸರಿಯಲ್ಲ ಎಂದಿದ್ದಾರೆ.
ಸದನದಲ್ಲಿ ಸಿಐಡಿ ಹಸ್ತಕ್ಷೇಪ ಯಾಕೆ?. ತನಿಖೆಗೆ ಕೊಡುವುದೇ ಆದರೆ ರವಿ ಮೇಲೆ ನಡೆದ ಹಲ್ಲೆ ಪ್ರಕರಣ ಕೊಡಲಿ. ತನಿಖೆಗೆ ಕೊಡುವುದಾದರೆ ರವಿ ಮೇಲಿನ ಪೊಲೀಸ್ ದೌರ್ಜನ್ಯ ಪ್ರಕರಣ ಕೊಡಲಿ. ಪ್ರಕರಣದಲ್ಲಿ ಗೃಹ ಸಚಿವರ ಕೈ ಕಟ್ಟಿ ಹಾಕಲಾಗಿತ್ತು. ಗೃಹ ಸಚಿವರಿಗೆ ಇಂಥ ಪರಿಸ್ಥಿತಿ ಬರಬಾರದಾಗಿತ್ತು. ರವಿ ಬಂಧನ ಬದಲು ನೋಟೀಸ್ ಕೊಟ್ಟು ವಿಚಾರಣೆಗೆ ಕರೆಸಬಹುದಿತ್ತು. ಎಂದರು.
ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆಗೆ ಸರ್ಕಾರದ ಹಣ ಬಳಕೆ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಇದು. ಅವರ ಪಕ್ಷದ ಕಾರ್ಯಕ್ರಮಕ್ಕೆ ಸರ್ಕಾರದ ಹಣ ಯಾಕೆ ಬಳಸುತ್ತಿದ್ದಾರೆ?. ಸರ್ಕಾರ ಜನರ ತೆರಿಗೆ ಹಣ ಯಾಕೆ ಬಳಸುತ್ತಿದೆ?. ಗಾಂಧೀಜಿಯವರ ಮೇಲೆ ನಮಗೂ ಗೌರವ ಇದೆ.ಆದರೆ ಅಧಿವೇಶನ ನಡೆಸಿದ್ದು ಕಾಂಗ್ರೆಸ್. ಹಾಗಾಗಿ ಸಂಪೂರ್ಣ ವೆಚ್ಚವನ್ನು ಕಾಂಗ್ರೆಸ್ ಪಕ್ಷವೇ ಭರಿಸಲಿ. ಇವರ ಅಧಿಕಾರದ ದುರ್ಬಳಕೆಗೆ ಗಾಂದೀಜಿ ಇದ್ದಿದ್ದರೆ ನೊಂದುಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ.











